ಏಷ್ಯಾ ವಿವಿಗಳ ರ್‍ಯಾಂಕಿಂಗ್‌: ಚೀನಾ ಹಿಂದಿಕ್ಕಿದ ಭಾರತ

KannadaprabhaNewsNetwork | Published : Nov 9, 2023 1:00 AM

ಸಾರಾಂಶ

ಜಾಗತಿಕ ವಿಶ್ವವಿದ್ಯಾಲಯಗಳಿಗೆ ರ್‍ಯಾಂಕಿಂಗ್ ನೀಡುವ ’ಕ್ಯುಎಸ್‌’ ಸಂಸ್ಥೆ 2024ನೇ ಸಾಲಿನ ಏಷ್ಯಾದ ರ್‍ಯಾಂಕಿಂಗ್‌ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ 148 ವಿವಿಗಳು ಸ್ಥಾನ ಪಡೆದುಕೊಂಡಿವೆ.

ದೇಶದ 148 ವಿವಿಗಳಿಗೆ ಸ್ಥಾನ । ಚೀನಾದ 133 ವಿವಿಗಳು ಪಟ್ಟಿಯಲ್ಲಿ

ಪ್ರತಿಷ್ಠಿತ ‘ಕ್ಯುಎಸ್‌’ ಸಂಸ್ಥೆಯ 2024ನೇ ಸಾಲಿನ ಏಷ್ಯಾ ವಿವಿ ರ್‍ಯಾಂಕಿಂಗ್‌ ಪ್ರಕಟನವದೆಹಲಿ: ಜಾಗತಿಕ ವಿಶ್ವವಿದ್ಯಾಲಯಗಳಿಗೆ ರ್‍ಯಾಂಕಿಂಗ್ ನೀಡುವ ’ಕ್ಯುಎಸ್‌’ ಸಂಸ್ಥೆ 2024ನೇ ಸಾಲಿನ ಏಷ್ಯಾದ ರ್‍ಯಾಂಕಿಂಗ್‌ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ 148 ವಿವಿಗಳು ಸ್ಥಾನ ಪಡೆದುಕೊಂಡಿವೆ. ಈ ಮೂಲಕ ಚೀನಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನಕ್ಕೇರಿದೆ. ಚೀನಾ ಈ ವರ್ಷ 2ನೇ ಸ್ಥಾನಕ್ಕೆ ಕುಸಿದಿದ್ದು, 133 ವಿವಿಗಳು ರ್‍ಯಾಂಕಿಂಗ್‌ ಪಡೆದುಕೊಂಡಿವೆ. ಉಳಿದಂತೆ ಜಪಾನ್‌ನ 96 ವಿವಿಗಳು ಸ್ಥಾನ ಪಡೆದುಕೊಳ್ಳುವುರೊಂದಿಗೆ 3ನೇ ಸ್ಥಾನದಲ್ಲಿದೆ. ಇದೇ ಮೊದಲ ಬಾರಿಗೆ ಮ್ಯಾನ್ಮಾರ್, ಕಾಂಬೋಡಿಯಾ ಮತ್ತು ನೇಪಾಳದ ವಿವಿಗಳು ಸ್ಥಾನ ಪಡೆದುಕೊಂಡಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದ 37 ಹೆಚ್ಚು ವಿವಿಗಳು ಈ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಶೈಕ್ಷಣಿಕ ಪ್ರಗತಿಯ ದ್ಯೋತಕ:

ಕ್ಯುಎಸ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ವಿವಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಭಾರತದಲ್ಲಾಗುತ್ತಿರುವ ಕ್ರಿಯಾಶೀಲ ಬದಲಾವಣೆಯನ್ನು ತೋರಿಸುತ್ತದೆ. ಭಾರತೀಯ ಸಂಸ್ಥೆಗಳ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಮತ್ತು ಅವುಗಳ ಸಂಶೋಧನಾ ಕೊಡುಗೆಗಳು ಈ ವಲಯದಲ್ಲಿ ಗಮನಾರ್ಹವಾದ ಶೈಕ್ಷಣಿಕ ಬೆಳವಣಿಗೆಗೆ ಕಾರಣವಾಗುತ್ತವೆ. ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಹಾದಿಯನ್ನು ಇದು ಮತ್ತಷ್ಟು ಹೆಚ್ಚಳಗೊಳಿಸುತ್ತದೆ ಎಂದು ಕ್ಯುಎಸ್‌ನ ಉಪಾಧ್ಯಕ್ಷ ಬೆನ್‌ ಸೋವ್ಟರ್‌ ಹೇಳಿದ್ದಾರೆ. ಪಿಎಚ್‌ಡಿ, ಸಂಶೋಧನಾ ವರದಿ ಮತ್ತು ಉತ್ತಮ ಗುಣಮಟ್ಟದ ಸಿಬ್ಬಂದಿ ವಿಭಾಗದಲ್ಲಿ ಭಾರತ ಉತ್ತಮ ಅಂಕಗಳನ್ನು ಗಳಿಸಿದೆ. ಆದರೆ ಅಂತಾರಾಷ್ಟ್ರೀಯ ಸಂಶೋಧನಾ ಜಾಲದಲ್ಲಿ ಭಾರತ 15.4 ಅಂಕಗಳನ್ನು ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕುಸಿತ ಕಂಡಿದೆ. ಪ್ರಾದೇಶಿಕವಾಗಿ ಭಾರತ 18.8 ಅಂಗಳನ್ನು ಗಳಿಸಿದೆ ಎಂದು ವರದಿ ತಿಳಿಸಿದೆ.

---

ಐಐಟಿ ಬಾಂಬೆ ದೇಶದ ನಂ.1 ವಿವಿ, ಬೆಂಗಳೂರು ಐಐಎಸ್ಸಿ ನಂ.4

ನವದೆಹಲಿ: ಐಐಟಿ ಬಾಂಬೆ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದ್ದು, ಏಷ್ಯಾದಲ್ಲಿ 40ನೇ ಸ್ಥಾನದಲ್ಲಿದೆ. ಬೆಂಗಳೂರಿನ ಐಐಎಸ್ಸಿ ಏಷ್ಯಾದ 58ನೇ ಹಾಗೂ ಭಾರತದ 4ನೇ ಅತ್ಯುತ್ತಮ ವಿವಿ ಎನ್ನಿಸಿಕೊಂಡಿದೆ.

ಇದಲ್ಲದೇ ದೆಹಲಿ ವಿವಿ, ಐಐಟಿ ದೆಹಲಿ ದೇಶದ ನಂ.2 ಹಾಗೂ ಏಷ್ಯಾದ 48, ಐಐಟಿ ಮದ್ರಾಸ್‌ ಭಾರತದ ನಂ.3 ಹಾಗೂ ಏಷ್ಯಾದ ನಂ.53, ಐಐಟಿ ಖರಗ್‌ಪುರ ದೇಶದ ನಂ.5 ಹಾಗೂ ಏಷ್ಯಾದ ನಂ.59, ಐಐಟಿ ಕಾನ್‌ಪುರ ದೇಶದ ನಂ.6 ಹಾಗೂ ಏಷ್ಯಾದಲ್ಲಿ 63ನೇ ಸ್ಥಾನ ಗಳಿಸಿದೆ. ಒಟ್ಟು 6 ವಿವಿಗಳು ಏಷ್ಯಾದ ಟಾಪ್ 100ರಲ್ಲಿವೆ.

Share this article