;Resize=(412,232))
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಮಿನಿ ವಿಶ್ವಸಂಸ್ಥೆ’ಯೊಂದನ್ನು ಸ್ಥಾಪಿಸಲು ಹೊರಟಿದ್ದಾರೆಯೇ? ಇಂಥದ್ದೊಂದು ಅನುಮಾನ ಟ್ರಂಪ್ ವಿರೋಧಿಗಳನ್ನು ಕಾಡಲು ಶುರುವಾಗಿದೆ.
ವಿಶ್ವಸಂಸ್ಥೆಯನ್ನು ಬಹಿರಂಗವಾಗಿಯೇ ಟೀಕಿಸುತ್ತಾ ಬಂದಿರುವ ಡೊನಾಲ್ಡ್ ಟ್ರಂಪ್ ಅವರು ಇದೀಗ ಗಾಜಾ ಪುನರ್ ನಿರ್ಮಾಣ ನೆಪದಲ್ಲಿ ‘ಬೋರ್ಡ್ ಆಫ್ ಪೀಸ್’(ಶಾಂತಿ ಮಂಡಳಿ)ವೊಂದನ್ನು ರಚಿಸಲು ಮುಂದಾಗಿದ್ದಾರೆ. ಸಂಘರ್ಷ ಪೀಡಿತ ಗಾಜಾ ಪುನರ್ ನಿರ್ಮಾಣದ ಉದ್ದೇಶದಿಂದ ಸ್ಥಾಪನೆಯಾಗುವ ಈ ಮಂಡಳಿಯ ಭಾಗವಾಗುವಂತೆ ಕೆನಡಾ, ಅರ್ಜೆಂಟೀನಾ ಸೇರಿ ವಿಶ್ವದ ಅನೇಕ ನಾಯಕರನ್ನು ಆಹ್ವಾನಿಸಿದ್ದಾರೆ.
ಈ ಮಂಡಳಿ ಗಾಜಾ ಸಂಘರ್ಷದ ಹೊರತಾಗಿಯೂ ವಿಶ್ವದ ಇತರೆ ಸಂಘರ್ಷಗಳಿಗೂ ಪರಿಹಾರ ಕಂಡುಕೊಳ್ಳುವ ಉದ್ದೇಶವನ್ನು ಹೊಂದಿದೆ. ಹೀಗಾಗಿ ಇದು ವಿಶ್ವಸಂಸ್ಥೆಗೆ ಪರ್ಯಾಯವಾಗಿ ನಿರ್ಮಿಸಲಾಗುತ್ತಿರುವ ಸಂಘಟನೆ ಎಂದು ಟ್ರಂಪ್ ವಿರೋಧಿಗಳು ಆರೋಪಿಸಿದ್ದಾರೆ.
ಯಾವುದೇ ದೇಶ 9 ಸಾವಿರ ಕೋಟಿ ರು. ಪಾವತಿಸಿದರೆ ಈ ಮಂಡಳಿಯ ಶಾಶ್ವತ ಸದಸ್ಯನಾಗಬಹುದು. ಮಂಡಳಿಯ ಸಂಸ್ಥಾಪಕ ಅಧ್ಯಕ್ಷ ಟ್ರಂಪ್ ಆಗಲಿದ್ದು, ಯಾರನ್ನೆಲ್ಲ ಈ ಮಂಡಳಿಗೆ ಆಹ್ವಾನಿಸಬೇಕೆಂಬುದನ್ನು ಅವರೇ ನಿರ್ಧರಿಸಲಿದ್ದಾರೆ. ಮಂಡಳಿಯ ಸದಸ್ಯ ರಾಷ್ಟ್ರಗಳಿಗೆ ತಲಾ ಒಂದು ಮತ ಇರಲಿದ್ದು, ಅವರು ಬಹುಮತದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ಆದರೆ, ಅಂತಿಮ ನಿರ್ಧಾರ ಅಧ್ಯಕ್ಷರದ್ದೇ ಆಗಿರಲಿದೆ.
ಸದಸ್ಯ ರಾಷ್ಟ್ರಗಳು 3 ವರ್ಷ ಕಾಲ ಈ ಮಂಡಳಿಯಲ್ಲಿರಬಹುದು. 9 ಸಾವಿರ ಕೋಟಿ ರು.ಗಿಂತ ಹೆಚ್ಚಿನ ಹಣ ಪಾವತಿಸುವ ರಾಷ್ಟ್ರಗಳು ಶಾಶ್ವತವಾಗಿ ಮಂಡಳಿ ಸದಸ್ಯತ್ವ ಪಡೆಯಲಿವೆ.
ಈ ಮಂಡಳಿ ಕುರಿತ ಕರಡು ನಿಯಮಾವಳಿಯಲ್ಲಿ ಮಂಡಳಿಯನ್ನು ಒಂದು ಅಂತಾರಾಷ್ಟ್ರೀಯ ಸಂಘಟನೆ ಎಂದು ಕರೆಯಲಾಗಿದ್ದು, ಈ ಸಂಘಟನೆ ಅಂತಾರಾಷ್ಟ್ರೀಯಮಟ್ಟದಲ್ಲಿ ಸ್ಥಿರತೆ, ವಿಶ್ವಾಸಾರ್ಹ ಮತ್ತು ಕಾನೂನುಬದ್ಧ ಆಡಳಿತವನ್ನು ಮರುಸ್ಥಾಪಿಸುವ ಹಾಗೂ ಸಂಘರ್ಷ ಪೀಡಿತ ಪ್ರದೇಶದಲ್ಲಿ ಶಾಂತಿ ಕಾಯ್ದುಕೊಳ್ಳಲು ನೆರವಾಗಲಿದೆ ಎಂದು ಹೇಳಲಾಗಿದೆ.
ಅರ್ಜೆಂಟೀನಿಯಾದ ಜೋವಿಯರ್ ಮಿಲೆಯಿ, ಕೆನಡಾ ಪ್ರಧಾನಿ ಮಾರ್ಕ್ ಕಾರ್ನೇಯಿ ಮತ್ತಿತರ ದೇಶಗಳ ಪ್ರಮುಖರನ್ನು ಈ ಮಂಡಳಿಯ ಭಾಗವಾಗುವಂತೆ ಆಹ್ವಾನಿಸಲಾಗಿದೆ.
ಮಂಡಳಿಯ ಕರಡು ನಿಯಮಾವಳಿ ಪ್ರಕಾರ, ಟ್ರಂಪ್ ಅವರು ಹಣದ ಮೇಲೆ ಸಂಪೂರ್ಣ ಅಧಿಕಾರ ಹೊಂದಿರಲಿದ್ದು, ಇದು ಈ ಮಂಡಳಿಯ ಭಾಗವಾಗಲು ಬಯಸುವ ಹಲವು ದೇಶಗಳ ಆಕ್ಷೇಪಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.
ಮಂಡಳಿಯು ವರ್ಷಕ್ಕೊಮ್ಮೆ ಮತದಾನ ಸಹಿತ ಸಭೆ ಸೇರಲಿದ್ದು, ಸಭೆಯ ಅಜೆಂಡಾವನ್ನು ಅಧ್ಯಕ್ಷರೇ ನಿರ್ಧರಿಸಲಿದ್ದಾರೆ. ಉಳಿದಂತೆ ನಿಯಮಿತವಾಗಿ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆ ಸೇರಲಿದ್ದು, ಇಂಥ ಸಭೆಗಳು ಕನಿಷ್ಠ 3 ತಿಂಗಳಿಗೊಮ್ಮೆ ನಡೆಲಿದೆ. ಮಂಡಳಿಯಿಂದ ಯಾವುದೇ ಸದಸ್ಯನನ್ನು ತೆಗೆದುಹಾಕುವ ಅಧಿಕಾರ ಟ್ರಂಪ್ ಅವರಿಗಿರಲಿದೆ ಎಂದು ಹೇಳಲಾಗಿದೆ.
ಮೊದಲ ಕಾರ್ಯಕಾರಿ ಸಮಿತಿಯಲ್ಲಿ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ, ಮಧ್ಯ ಏಷ್ಯಾದ ರಾಯಭಾರಿ ಸ್ಟೀವ್ ವಿಟ್‌ಕಾಫ್, ಟ್ರಂಪ್ ಅವರ ಅಳಿಯ ಜರೇದ್ ಕುಷ್ನರ್ ಮತ್ತು ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಇರಲಿದ್ದಾರೆ. ಹೊಸ ಮಂಡಳಿ ರಚನೆ ಆಗುವವರೆಗೆ ಇದು ಸಮಿತಿ ಮುಂದುವರಿಯಲಿದೆ ಎಂದು ಹೇಳಲಾಗಿದೆ.