ಪ್ರತೀಕಾರ ಕೈಗೊಳ್ಳಲು ಕಾಯುತ್ತಿದ್ದ ಇಸ್ರೇಲ್‌ - ಇರಾನ್‌ ಮೇಲೆ 200 ಕ್ಷಿಪಣಿಗಳ ಸುರಿಮಳೆ

KannadaprabhaNewsNetwork |  
Published : Oct 27, 2024, 02:40 AM ISTUpdated : Oct 27, 2024, 04:06 AM IST
ಇಸ್ರೇಲ್‌ ಇರಾನ್‌ | Kannada Prabha

ಸಾರಾಂಶ

ಕಳೆದ ಅ.1ರಂದು 180 ಕ್ಷಿಪಣಿ ಬಳಸಿ ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರ ಕೈಗೊಳ್ಳಲು ಕಾಯುತ್ತಿದ್ದ ಇಸ್ರೇಲ್‌, ಶನಿವಾರ ಬೆಳ್ಳಂಬೆಳಗ್ಗೆ ಇರಾನ್‌ನ 20 ಆಯಕಟ್ಟಿನ ಪ್ರದೇಶಗಳ ಮೇಲೆ 100 ವಿಮಾನಗಳ ಮೂಲಕ 200 ಕ್ಷಿಪಣಿ ಬಳಸಿ ಭೀಕರ ‘ನಿರ್ದೇಶಿತ ವೈಮಾನಿಕ ದಾಳಿ’ ನಡೆಸಿದೆ.  

ಟೆಲ್‌ ಅವಿವ್‌/ತೆಹ್ರಾನ್‌: ಕಳೆದ ಅ.1ರಂದು 180 ಕ್ಷಿಪಣಿ ಬಳಸಿ ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರ ಕೈಗೊಳ್ಳಲು ಕಾಯುತ್ತಿದ್ದ ಇಸ್ರೇಲ್‌, ಶನಿವಾರ ಬೆಳ್ಳಂಬೆಳಗ್ಗೆ ಇರಾನ್‌ನ 20 ಆಯಕಟ್ಟಿನ ಪ್ರದೇಶಗಳ ಮೇಲೆ 100 ವಿಮಾನಗಳ ಮೂಲಕ 200 ಕ್ಷಿಪಣಿ ಬಳಸಿ ಭೀಕರ ‘ನಿರ್ದೇಶಿತ ವೈಮಾನಿಕ ದಾಳಿ’ ನಡೆಸಿದೆ. ಅಮೆರಿಕ ನಿರ್ಮಿತ ಎಫ್-35, ಎಫ್‌- 151, ಎಫ್‌ -26ಐ ಯುದ್ಧವಿಮಾನ ಬಳಸಿ 2000 ಕಿ.ಮೀ.ನಷ್ಟು ದೂರ ಸಾಗಿ ಇರಾನ್‌ ಸನಿಹವೇ ಬಂದು ಕ್ಷಿಪಣಿಗಳನ್ನು ಹಾರಿಸಿದೆ. ಈ ದಾಳಿಯಲ್ಲಿ ಇಬ್ಬರು ಇರಾನ್‌ ಯೋಧರು ಬಲಿಯಾಗಿದ್ದಾರೆ.

‘ಇರಾನ್‌ನ ಸೇನಾ ನೆಲೆಗಳು ಮತ್ತು ಕ್ಷಿಪಣಿ ಉತ್ಪಾದನಾ ಘಟಕಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ’ ಎಂದು ಇಸ್ರೇಲ್‌ ಹೇಳಿದೆ. ದಾಳಿಯಲ್ಲಿ ತನ್ನ ಇಬ್ಬರು ಯೋಧರು ಅಸುನೀಗಿದ್ದಾರೆ ಎಂದು ಇರಾನ್‌ ಹೇಳಿಕೆ ಬಿಡುಗಡೆ ಮಾಡಿದ್ದು, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗುಡುಗಿದೆ.

ಇರಾನ್‌ ಪರಮಾಣು ಘಟಕಗಳು ಮತ್ತು ತೈಲ ಬಾವಿಗಳ ಮೇಲೆ ಇಸ್ರೇಲ್‌ ದಾಳಿ ನಡೆಸಬಹುದು ಎಂಬ ಆತಂಕ ಇತ್ತಾದರೂ ಸದ್ಯಕ್ಕೆ ಅಂಥ ದಾಳಿಯಿಂದ ಇಸ್ರೇಲ್ ದೂರವೇ ಉಳಿದಿದೆ. ಆದರೆ ಈ ದಾಳಿಯಿಂದ ಈಗಾಗಲೇ ಮಧ್ಯಪ್ರಾಚ್ಯದಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಸ್ಥಿತಿಯನ್ನು ಇನ್ನಷ್ಟು ವಿಕೋಪಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳೂ ಇವೆ.

ಇರಾನ್‌-ಇಸ್ರೇಲ್‌ ಮಾತಿನ ಸಮರ:

ಘಟನೆಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದರಾದರೂ, ‘ವಾಯುರಕ್ಷಣಾ ವ್ಯವಸ್ಥೆಗೆ ಚಾಲನೆ ನೀಡಿದ ಕಾರಣ ಕ್ಷಿಪಣಿಗಳನ್ನು ಹಿಮ್ಮೆಟ್ಟಿಸಲಾಗಿದ್ದು. ಹೆಚ್ಚಿನ ಹಾನಿ ಏನೂ ಸಂಭವಿಸಿಲ್ಲ. ಸೀಮಿತ ಪ್ರಮಾಣದ ಹಾನಿ ಆಗಿದೆ’ ಎಂದು ಇರಾನ್‌ ಸೇನೆ ಹೇಳಿದೆ.

ಆದರೆ, ‘ಇರಾನ್‌ ನಮ್ಮ ನಾಗರಿಕರ ಪ್ರಾಣಕ್ಕೆ ಅಪಾಯ ತರುವ ರೀತಿಯಲ್ಲಿ 2 ಬಾರಿ ದಾಳಿ ನಡೆಸಿತ್ತು. ಅದಕ್ಕೆ ಇಂದು ಬೆಲೆ ತೆತ್ತಿದೆ. ನಮ್ಮ ಹೊಣೆಗಾರಿಕೆಯನ್ನು ನಾವು ಪೂರೈಸಿದ್ದೇವೆ. ದಾಳಿ ಮುಗಿದಿದೆ’ ಎಂದು ಇಸ್ರೇಲ್‌ ಸೇನಾ ಪಡೆಯ ವಕ್ತಾರ ಡೇನಿಯಲ್‌ ಹಗೇರಿ ಹೇಳಿದ್ದಾರೆ.

200 ಕ್ಷಿಪಣಿ ಬಳಸಿ ದಾಳಿ:

ಕಳೆದ 25 ದಿನಗಳಿಂದ ಹೊಂಚು ಹಾಕಿ ಕಾದು ಕುಳಿತಿದ್ದ ಇಸ್ರೇಲಿ ಸೇನಾಪಡೆಗಳು ಶನಿವಾರ ನಡುರಾತ್ರಿಯಲ್ಲಿ 100 ಅಮೆರಿಕ ನಿರ್ಮಿತ ವಿಮಾನಗಳನ್ನು ಬಳಸಿ ಇರಾನ್‌ನತ್ತ ಧಾವಿಸಿವೆ. ತನ್ನ ವಿಮಾನ ಇರಾನ್‌ನತ್ತ ಹಾರಿ ಬರಲು ಜೋರ್ಡಾನ್‌, ಲೆಬನಾನ್‌ನ ತನ್ನ ಕೆಲವು ಆಕ್ರಮಿತ ಭಾಗಗಳನ್ನು ಇಸ್ರೇಲ್‌ ಬಳಸಿಕೊಂಡಿದೆ ಎನ್ನಲಾಗಿದೆ.

ಈ ವೇಳೆ ಇರಾನ್‌ನ ಇಲಾಮ್‌, ಖುಝೆಸ್ತಾನ್‌ ಮತ್ತು ತೆಹ್ರಾನ್‌ ಪ್ರಾಂತ್ಯದ ಹಲವು ಪ್ರದೇಶಗಳಲ್ಲಿನ 20 ಸೇನಾ ನೆಲೆ ಹಾಗೂ ಕ್ಷಿಪಣಿ ಉತ್ಪಾದನಾ ಘಟಕಗಳ ಮೇಲೆ ತನ್ನ ಯುದ್ಧವಿಮಾನಗಳಿಂದ 200ಕ್ಕೂಹೆಚ್ಚು ರ್‍ಯಾಂಪೇಜ್‌, ಸೂಪರ್‌ಸಾನಿಕ್‌ ಮತ್ತು ರಾಕ್ಸ್‌ ಕ್ಷಿಪಣಿಗಳನ್ನು ಇಸ್ರೇಲ್‌ ಹಾರಿಸಿದೆ. ದಾಳಿ ಸೂರ್ಯೋದಯವರೆಗೂ ಮುಂದುವರೆದಿತ್ತು. ಬಳಿಕ ವಿಮಾನಗಳು ಸುರಕ್ಷಿತವಾಗಿ ಇಸ್ರೇಲ್‌ಗೆ ಮರಳುವುದರೊಂದಿಗೆ ದಾಳಿ ಅಂತ್ಯಗೊಂಡಿತು ಎಂದು ವರದಿಯಾಗಿದೆ.

ಆದರೆ ತನ್ನ ವಾಯುವಲಯದಲ್ಲಿ ಯಾವುದೇ ವಿಮಾನ ಬಂದಿಲ್ಲ ಎಂದು ಇರಾನ್‌ ಸರ್ಕಾರಿ ಟೀವಿ ಹೇಳಿದೆ ಹಾಗೂ ಕ್ಷಿಪಣಿಗಳನ್ನು ವಾಯುರಕ್ಷಣಾ ವ್ಯವಸ್ಥೆಗಳು ನಾಶ ಮಾಡಿದೆ ಎಂದು ಸ್ಪಷ್ಟಪಡಿಸಿದೆ.

ಇನ್ನೊಂದೆಡೆ ನೆರೆಯ ಸಿರಿಯಾ ದೇಶ ಕೂಡಾ ವೈಮಾನಿಕ ದಾಳಿಯ ಭೀತಿಗೆ ಒಳಗಾಗಿದ್ದು, ತನ್ನ ವಾಯುರಕ್ಷಣೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದೆ.

ಇರಾನ್ ಮೇಲೆ ದಾಳಿ ಏಕೆ?

1. ಇಸ್ರೇಲ್‌ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಹಮಾಸ್‌, ಹಿಜ್ಬುಲ್ಲಾ ಉಗ್ರರ ಹಿಂದಿರುವ ಶಕ್ತಿಯೇ ಇರಾನ್‌

2. ಹಿಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸ್ರಲ್ಲಾ, ಇರಾನ್‌ ಕಮಾಂಡರ್‌ ಅನ್ನು ಇಸ್ರೇಲ್‌ ಕೊಂದಿದ್ದಕ್ಕೆ ಇರಾನ್‌ಗೆ ಸಿಟ್ಟು

3. ಅ.1ರಂದು ಇಸ್ರೇಲ್‌ ಮೇಲೆ 180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಿದ್ದ ಇರಾನ್‌ ಸೇನಾ ಪಡೆಗಳು

4. ಆ ದಾಳಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್‌ನಿಂದ ಇರಾನ್‌ ಮೇಲೆ 200 ಕ್ಷಿಪಣಿ ಬಳಸಿ ದಾಳಿ

ಅಣುಸ್ಥಾವರ, ತೈಲ ಬಾವಿಗೆ ಇಲ್ಲ ಬಾಂಬ್‌

ಅ.1ರ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಅಣುಸ್ಥಾವರ, ತೈಲ ಬಾವಿಗಳ ಮೇಲೆ ಇಸ್ರೇಲ್‌ ದಾಳಿ ನಡೆಸಬಹುದು ಎಂದು ಹೇಳಲಾಗಿತ್ತು. ಆದರೆ ಅಂತಹ ದಾಳಿಯಿಂದ ಮಧ್ಯಪ್ರಾಚ್ಯದಲ್ಲಿನ ತ್ವೇಷ ಊಹಿಸಲಾಗದಷ್ಟು ವಿಕೋಪಕ್ಕೆ ಹೋಗಬಹುದು ಎಂದು ಅರಿತು ಇಸ್ರೇಲ್‌ ಸೀಮಿತವಾಗಿ ದಾಳಿ ನಡೆಸಿದೆ ಎಂದು ವಿಶ್ಲೇಷಿಸಲಾಗಿದೆ.

ಇರಾನ್ ಮೇಲೆ 36 ವರ್ಷದಲ್ಲೇ ದೊಡ್ಡ ದಾಳಿ

1980ರಿಂದ 1988ರವರೆಗೆ ಇರಾನ್‌-ಇರಾಕ್‌ ಯುದ್ಧ ನಡೆದಿತ್ತು. ಬಳಿಕ ಇಸ್ರೇಲ್‌ ಕೆಲವು ಬಾರಿ ಚಿಕ್ಕಪುಟ್ಟ ದಾಳಿಗಳನ್ನು ಇರಾನ್‌ ಮೇಲೆ ನಡೆಸಿತ್ತಾದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡಿರಲಿಲ್ಲ. ಹೀಗಾಗಿ 1988ರ ಬಳಿಕ ಅಂದರೆ 36 ವರ್ಷ ನಂತರ ಇರಾನ್‌ ಮೇಲೆ ವಿದೇಶವೊಂದು ನಡೆಸಿದ ಮೊದಲ ದೊಡ್ಡ ದಾಳಿ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ
ಸೌದಿ ಬಳಿಕ ದುಬೈ, ಅಬುದಾಭಿಯಲ್ಲೂ ಭಾರೀ ಮಳೆ