ಕೆಲವು ಊರುಗಳೊಳಗೆ ನುಗ್ಗಿ ನೆಲೆ ಸ್ಥಾಪಿಸಿಕೊಂಡ ಸೈನಿಕರು. ಸುರಂಗ, ಕಟ್ಟಡದೊಳಗೆ ಅವಿತಿದ್ದ ಉಗ್ರರ ಜತೆ ಚಕಮಕಿ: ಹಲವು ಉಗ್ರರ ಹತ್ಯೆ. ಹಮಾಸ್ ಉಗ್ರರಿಂದಲೂ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮುಂದುವರಿಕೆ. ಗಾಜಾದಲ್ಲಿ ಇಂಟರ್ನೆಟ್, ಮೊಬೈಲ್ ಸಂಪರ್ಕ ಭಾಗಶಃ ಮರುಸ್ಥಾಪನೆ.
ಖಾನ್ ಯೂನಿಸ್ (ಗಾಜಾ ಪಟ್ಟಿ): ಹಮಾಸ್ ವಿರುದ್ಧ ದಿನದಿಂದ ದಿನಕ್ಕೆ ಯುದ್ಧವನ್ನು ತೀವ್ರಗೊಳಿಸುತ್ತಿರುವ ಇಸ್ರೇಲ್, ತನ್ನ ಭೂದಾಳಿಯನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ತನ್ನ ಸೇನೆಯನ್ನು ಗಾಜಾ ಪಟ್ಟಿಯ ಮತ್ತಷ್ಟು ಒಳಪ್ರದೇಶಗಳಿಗೆ ರವಾನಿಸಿದ್ದು ಇಡೀ ನಗರವನ್ನು ಸುತ್ತುವರೆದಿದೆ. ಜೊತೆಗೆ ಸುರಂಗ, ಕಟ್ಟಡದೊಳಗೆ ಅವಿತಿದ್ದ ಹಮಾಸ್ ಉಗ್ರರ ಜತೆ ಸೇನೆಯು ಚಕಮಕಿ ನಡೆಸಿ, ಹಲವು ಉಗ್ರರ ಹತ್ಯೆ ಮಾಡಿದೆ. ಇದರ ನಡುವೆ ಹಮಾಸ್ ಉಗ್ರಗಾಮಿಗಳು ಇಸ್ರೇಲ್‌ನ ವಾಣಿಜ್ಯ ಕೇಂದ್ರವಾದ ಟೆಲ್ ಅವೀವ್‌ಗೆ ಸೇರಿದಂತೆ ಇಸ್ರೇಲ್‌ಗೆ ರಾಕೆಟ್‌ಗಳ ದಾಳಿಯನ್ನು ಮುಂದುವರೆಸಿದ್ದಾರೆ. ಇದೇ ವೇಳೆ, ಸಾವಿರಾರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಗಾಜಾ ಆಸ್ಪತ್ರೆಗಳ ಸನಿಹದಲ್ಲಿ ಇಸ್ರೇಲ್ ವಾಯುದಾಳಿ ಹೆಚ್ಚಿಸಿದೆ ಎಂದು ವಿಶ್ವಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದ್ದು, ಇಂಥ ದಾಳಿಗಳನ್ನು ನಿಲ್ಲಿಸುವಂತೆ ಬೆಂಜಮಿನ್ ನೆತನ್ಯಾಹು ಸರ್ಕಾರಕ್ಕೆಆಗ್ರಹಿಸಿದೆ. ಗಾಜಾದೊಳಗೆ ಮುನ್ನುಗ್ಗಿದ ಇಸ್ರೇಲಿ ಸೇನೆ: ಸೋಮವಾರ ಉತ್ತರ ಗಾಜಾದ ಇನ್ನಷ್ಟು ಪ್ರದೇಶಗಳಿಗೆ ಇಸ್ರೇಲ್ ಸೇನೆ ನುಗ್ಗಿದೆ. ಇಸ್ರೇಲಿ ಮಿಲಿಟರಿ ಬಿಡುಗಡೆ ಮಾಡಿರುವ ವಿಡಿಯೋಗಳಲ್ಲಿ, ಶಸ್ತ್ರಸಜ್ಜಿತ ವಾಹನಗಳು ಗಾಜಾ ಬೀದಿಯಲ್ಲಿ ಸಾಗುತ್ತಿರುವುದು ಹಾಗೂ ಇಸ್ರೇಲಿ ಸೈನಿಕರು ಅಲ್ಲಲ್ಲಿ ನೆಲೆ ಸ್ಥಾಪಿಸುತ್ತಿರುವುದು ಕಂಡುಬಂದಿದೆ. ಈ ಹಿಂದಿನ ವಿಡಿಯೋಗಳು, ಸೇನಾ ಟ್ಯಾಂಕರ್‌ಗಳು ಕೇವಲ ಮರಳುಗಾಡಿನಲ್ಲಿ ಸಾಗುತ್ತಿರುವುದನ್ನು ತೋರಿಸಿದ್ದವು. ಈಗ ಕಟ್ಟಡಗಳ ನಡುವೆ ಸಾಗುತ್ತಿರುವುದನ್ನು ಗಮನಿಸಿದರೆ ಗಾಜಾದ ಹಲವು ಊರುಗಳಿಗೆ ಸೇನೆ ನುಗ್ಗಿರುವ ಸೂಚಕವಾಗಿದೆ. ಇನ್ನು ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ನಸುಕಿನ ಜಾವದವರೆಗೆ ಸುರಂಗ ಹಾಗೂ ಕಟ್ಟಡದೊಳಿಗೆ ಅವಿತು ದಾಳಿ ನಡೆಸುತ್ತಿದ್ದ ಡಜನ್‌ಗಟ್ಟಲೆ ಉಗ್ರರನ್ನು ಸಾಯಿಸಿರುವುದಾಗಿ ಇಸ್ರೇಲಿ ಸೇನೆ ಹೇಳಿದೆ. ಅಲ್ಲದೆ, ಹಮಾಸ್‌ನ ನೆಲೆಯೊಂದನ್ನು ಧ್ವಂಸ ಮಾಡಿದ್ದಾಗಿ ಹೇಳಿಕೊಂಡಿದೆ. ಕಳೆದ ಕೆಲವು ದಿನಗಳಲ್ಲಿ 600 ಹಮಾಸ್ ನೆಲೆಗಳನ್ನು ಧ್ವಂಸ ಮಾಡಿದ್ದಾಗಿ ಅದು ನುಡಿದಿದೆ. ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಹಾಗೂ ಸಿರಿಯಾದಲ್ಲಿನ ಉಗ್ರರ ನೆಲೆಗಳ ಮೇಲೂ ಇಸ್ರೇಲ್ ವಾಯುದಾಳಿ ಮುಂದುವರಿಸಿದೆ. ಯುದ್ಧದಲ್ಲಿ ಪ್ಯಾಲೇಸ್ಟಿನಿಯನ್ನರಲ್ಲಿ ಸಾವಿನ ಸಂಖ್ಯೆ 8,000 ದಾಟಿದೆ. ಇಸ್ರೇಲಿ ಭಾಗದಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಂಟರ್ನೆಟ್ ಭಾಗಶಃ ಮರುಸ್ಥಾಪನೆ: ಇಸ್ರೇಲ್‌ನ ಕಂಡು ಕೇಳರಿಯದ ವಾಯುದಾಳಿ ಕಾರಣ ಶನಿವಾರ ಸ್ತಬ್ಧವಾಗಿದ್ದ ದೂರವಾಣಿ ಮತ್ತು ಇಂಟರ್ನೆಟ್ ಸೇವೆಗಳು ಸೋಮವಾರದಿಂದ ಭಾಗಶಃ ಮತ್ತೆ ಕಾರ್ಯಾರಂಭ ಮಾಡಿವೆ.
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.