ಇಸ್ರೇಲ್‌ನಿಂದ ಗಾಜಾ, ಲೆಬನಾನ್‌ನಲ್ಲಿ ಹಮಾಸ್ ಮತ್ತು ಹಿಜ್ಬುಲ್ಲಾ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ : 47 ಸಾವು

KannadaprabhaNewsNetwork | Updated : Oct 07 2024, 04:18 AM IST

ಸಾರಾಂಶ

ಇಸ್ರೇಲ್‌ ಭಾನುವಾರ ಗಾಜಾ ಮತ್ತು ಲೆಬನಾನ್‌ನಲ್ಲಿ ಹಮಾಸ್ ಮತ್ತು ಹಿಜ್ಬುಲ್ಲಾ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 47 ಜನರು ಸಾವನ್ನಪ್ಪಿದ್ದಾರೆ. ಗಾಜಾದಲ್ಲಿ ಮಸೀದಿ ಮತ್ತು ಲೆಬನಾನ್‌ನಲ್ಲಿ ಹಲವು ಕಟ್ಟಡಗಳನ್ನು ಗುರಿಯಾಗಿಸಲಾಗಿದೆ. ಹಿಜ್ಬುಲ್ಲಾ ಉಗ್ರರು ಪ್ರತಿದಾಳಿ ನಡೆಸಿದ್ದಾರೆ.

ಜೆರುಸಲೇಂ/ದೇರ್‌ ಅಲ್‌ ಬಲಾಹ್‌/ಬೈರೂತ್‌: ಇರಾನ್‌ ಬೆಂಬಲಿತ ಉಗ್ರ ಸಂಘಟನೆಗಳ ಮೇಲಿನ ದಾಳಿಯನ್ನು ಮುಂದುವರೆಸಿರುವ ಇಸ್ರೇಲ್‌, ಭಾನುವಾರ ಗಾಜಾದಲ್ಲಿ ಹಮಾಸ್‌ ಉಗ್ರರ ತಾಣವಾಗಿದೆ ಎನ್ನಲಾದ ಮಸೀದಿ ಮತ್ತು ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಉಗ್ರರ ನೆಲೆಯಾಗಿದೆ ಎನ್ನಲಾದ ಕಟ್ಟಡಗಳ ಮೇಲೆ ದಾಳಿ ನಡೆಸಿದೆ. ಈ ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 47 ಜನರು ಸಾವನ್ನಪ್ಪಿದ್ದಾರೆ.

ಗಾಜಾ ಮೇಲೆ ಇಸ್ರೇಲ್‌ ಯುದ್ಧ ಸಾರಿ ಸೋಮವಾರಕ್ಕೆ 1 ವರ್ಷ ತುಂಬಲಿದ್ದು, ಅದರ ನಡುವೆಯೇ ಈ ದಾಳಿ ನಡೆದಿದೆ. ಈ ನಡುವೆ, ದಕ್ಷಿಣ ಗಾಜಾ ತೆರವಿಗೆ ಇಸ್ರೇಲ್‌ ಸೂಚಿಸಿದ್ದು, ಇನ್ನಷ್ಟು ದಾಳಿಯ ಮುನ್ಸೂಚನೆ ನೀಡಿದೆ.

ಗಾಜಾ ಮೇಲೆ ಭೀಕರ ದಾಳಿ:

ಗಾಜಾಪಟ್ಟಿ ಪ್ರದೇಶದ ದೇರ್‌ ಅಲ್‌ ಬಲಾಹ್‌ ನಗರದ ಮಸೀದಿಯೊಂದರ ಮೇಲೆ ಇಸ್ರೇಲ್‌ ಭಾನುವಾರ ವೈಮಾನಿಕ ದಾಳಿ ನಡೆಸಿದೆ. ಈ ಮಸೀದಿಯನ್ನು ಹಮಾಸ್‌ ಉಗ್ರರು ತಮ್ಮ ಕಮಾಂಡ್‌ ಮತ್ತು ಕಂಟ್ರೋಲ್‌ ಸೆಂಟರ್‌ ಆಗಿ ಬಳಸಿಕೊಳ್ಳುತ್ತಿದ್ದರು ಈ ಹಿನ್ನೆಲೆಯಲ್ಲಿ ಅದರ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ.

ಅಲ್‌ ಮಕ್ಸಾ ಆಸ್ಪತ್ರೆಯ ಸಮೀಪವೇ ಇರುವ ಈ ಮಸೀದಿಯಲ್ಲಿ ಕಳೆದೊಂದು ವರ್ಷದಿಂದ ನಿರಾಶ್ರಿತರು ತಂಗಿದ್ದರು. ಅದರ ಮೇಲೆ ನಡೆದ ದಾಳಿಯಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕಳೆದ ಒಂದು ವರ್ಷದಿಂದ ಇಸ್ರೇಲ್‌ ನಡೆಸುತ್ತಿರುವ ದಾಳಿಯಲ್ಲಿ ಬಲಿಯಾದ ಪ್ಯಾಲೆಸ್ತೀನಿಗಳ ಸಂಖ್ಯೆ 42 ಸಾವಿರ ದಾಟಿದೆ ಎಂದು ಗಾಜಾದ ಅಧಿಕಾರಿಗಳು ಹೇಳಿದ್ದಾರೆ.

ಇದಲ್ಲದೇ ಉತ್ತರ ಗಾಜಾದ ಜಬಲಿಯಾ ನಗರದ ಮೇಲೂ ಇದೇ ಮೊದಲ ಬಾರಿಗೆ ದಾಳಿ ನಡೆಸಿದೆ. 1948ರ ಇಸ್ರೇಲ್‌ ಯುದ್ಧದ ಬಳಿಕ ಇಲ್ಲಿ ಭಾರೀ ದೊಡ್ಡ ಪ್ರಮಾಣದ ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿತ್ತು, ಆ ಪ್ರದೇಶಗಳ ಮೇಲೆ ಇದೀಗ ದಾಳಿ ನಡೆಸಲಾಗಿದೆ.

ಲೆಬನಾನ್‌ನಲ್ಲಿ ಮುಂದುವರಿದ ದಾಳಿಗೆ 23 ಬಲಿ:ಇನ್ನೊಂದೆಡೆ ಲೆಬನಾನ್‌ನಲ್ಲಿನ ಹಿಜ್ಬುಲ್ಲಾ ಉಗ್ರರ ನೆಲೆ ಎನ್ನಲಾದ ರಾಜಧಾನಿ ಬೈರೂತ್‌ನ ಹಲವು ಪ್ರದೇಶಗಳ ಮೇಲೆ, ಸಮೀಪದ ನಬಟೈ, ಬೆಕ್ಕಾ, ಬಾಲ್ಬೇಕ್‌-ಹೆರ್ಮೆಲ್‌, ಮೌಂಟ್‌ ಲೆಬನಾನ್‌ ಪ್ರದೇಶಗಳ ಮೇಲೆ ಇಸ್ರೇಲ್‌ ಭಾನುವಾರ ವೈಮಾನಿಕ ದಾಳಿ ನಡೆಸಿದೆ ಕನಿಷ್ಠ 30 ಕ್ಷಿಪಣಿಗಳನ್ನು ಬಳಸಿ ಭಾನುವಾರ ಲೆಬನಾನ್‌ನ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಸೇನೆ ಹೇಳಿದೆ. ಈ ದಾಳಿಯಲ್ಲಿ 23 ಜನರು ಸಾವನ್ನಪ್ಪಿ 93 ಜನರು ಗಾಯಗೊಂಡಿದ್ದಾರೆ.

ಹಿಜ್ಬುಲ್ಲಾಗಳ ಪ್ರತಿದಾಳಿ:

ಮತ್ತೊಂದೆಡೆ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ಸೇನೆಯ ಭೂದಾಳಿಯನ್ನು ಹಿಮ್ಮೆಟ್ಟಿಸುವ ಸಲುವಾಗಿ ಹಿಜ್ಬುಲ್ಲಾ ಉಗ್ರರು ಕೂಡಾ ಭಾರೀ ಪ್ರಮಾಣದ ರಾಕೆಟ್‌ ಬಳಸಿ ಪ್ರತಿದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಸ್ವಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

Share this article