ಅಬುಧಾಬಿ ಮಂದಿರ ಜಗತ್ತನ್ನೇ ಒಗ್ಗೂಡಿಸುವ ಸೌಹಾರ್ದತೆ ಪ್ರತೀಕ: ಪ್ರಧಾನಿ ಮೋದಿ

KannadaprabhaNewsNetwork | Updated : Feb 15 2024, 08:22 AM IST

ಸಾರಾಂಶ

‘ಅಬುಧಾಬಿಯ ನೂತನ ಸ್ವಾಮಿನಾರಾಯಣ ಮಂದಿರ ಜಗತ್ತನ್ನೇ ಒಗ್ಗೂಡಿಸುವ ಸೌಹಾರ್ದತೆ ಪ್ರತೀಕ. ಅಯೋಧ್ಯೆಯಲ್ಲಿ ನಾವು ಅನುಭವಿಸಿದ ಖುಷಿ ಅಬುಧಾಬಿಯಲ್ಲಿ ಇಮ್ಮಡಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.

ಅಬುಧಾಬಿ: ‘ಅಬುಧಾಬಿಯ ನೂತನ ಸ್ವಾಮಿನಾರಾಯಣ ಮಂದಿರ ಜಗತ್ತನ್ನೇ ಒಗ್ಗೂಡಿಸುವ ಸೌಹಾರ್ದತೆ ಪ್ರತೀಕ. ಅಯೋಧ್ಯೆಯಲ್ಲಿ ನಾವು ಅನುಭವಿಸಿದ ಖುಷಿ ಅಬುಧಾಬಿಯಲ್ಲಿ ಇಮ್ಮಡಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ. 

ಅಲ್ಲದೆ ಸಂಯುಕ್ತ ಅರಬ್‌ ಸಂಸ್ಥಾನದಲ್ಲಿ (ಯುಎಇ) ಮೊದಲ ಹಿಂದೂ ದೇಗುಲದ ಉದ್ಘಾಟನೆ ಮಾಡಿದ್ದು ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.ದೇವಸ್ಥಾನ ಉದ್ಘಾಟನೆಯ ಬಳಿಕ ನಡೆದ ಭವ್ಯ ಸಮಾರಂಭದಲ್ಲಿ ಬುಧವಾರ ರಾತ್ರಿ ಮಾತನಾಡಿದ ಅವರು, ‘ಭಾರತದಲ್ಲಿ ಶತಮಾನದ ಕನಸು ರಾಮಮಂದಿರ ನಿರ್ಮಾಣದಿಂದ ನನಸಾಯಿತು. 

ಎಲ್ಲಾ ಭಾರತೀಯರೂ ಇನ್ನೂ ಸಹ ಈ ಉತ್ಕಟ ಭಾವನೆಯನ್ನು ಅನುಭವಿಸುತ್ತಿದ್ದಾರೆ. ಈ ಸಮಯದಲ್ಲಿ ಅಬುಧಾಬಿಯಲ್ಲೂ ಮಂದಿರ ನಿರ್ಮಾಣವಾಗಿರುವುದು ಈ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ. 

ಎರಡೂ ದೇವಸ್ಥಾನಗಳ ಉದ್ಘಾಟನೆಯಲ್ಲಿ ಭಾಗಿಯಾಗಿರುವುದು ನನ್ನ ಅದೃಷ್ಟ’ ಎಂದು ಹರ್ಷಿಸಿದರು.

‘ಬಾಪ್ಸ್‌ ದೇವಸ್ಥಾನದ ನಿರ್ಮಾಣ ಭಾರತದೊಂದಿಗೆ ನೀವು ಹೊಂದಿರುವ ಪ್ರೀತಿ ಮತ್ತು ದೂರದೃಷ್ಟಿಯ ಪ್ರತೀಕ. ಇದು ಕೇವಲ ಪೂಜಾಸ್ಥಳವಷ್ಟೇ ಅಲ್ಲದೇ, ಮಾನವತೆಯ, ಜಗತ್ತನ್ನು ಜೋಡಿಸುವ ಕೋಮು ಸೌಹಾರ್ದತೆಯ ಪ್ರತೀಕ ಎಂದು ನಾನು ಭಾವಿಸುತ್ತೇನೆ’ ಎಂದು ಮೋದಿ ಬಣ್ಣಿಸಿದರು.

‘ಅಬುಧಾಬಿಯಲ್ಲಿ ಹಿಂದೂ ದೇವಸ್ಥಾನ ನಿರ್ಮಾಣ ಮಾಡುವ ಮೂಲಕ ಯುಎಇ ಮಾನವತೆಯ ಇತಿಹಾಸದಲ್ಲಿ ಚಿನ್ನದ ಅಧ್ಯಾಯವನ್ನು ಬರೆದಿದೆ. 

ದೇವಸ್ಥಾನವನ್ನು ನಿರ್ಮಾಣ ಮಾಡಲು ತೆಗೆದುಕೊಂಡ ವರ್ಷಗಳ ಶ್ರಮ ಸಾರ್ಥಕವಾಗಿದೆ. ಸ್ವಾಮಿನಾರಾಯಣನ ಆಶೀರ್ವಾದ ಈ ದೇವಸ್ಥಾನದೊಂದಿಗೆ ಸದಾ ಇರುತ್ತದೆ. 

ರಾಮಮಂದಿರ ನಿರ್ಮಾಣದ ಬಳಿಕ ನನ್ನ ಸ್ನೇಹಿತರಾದ ಬ್ರಹ್ಮವಿಹಾರಿ ಸ್ವಾಮಿ ಅವರು ನನ್ನನ್ನು ಅತಿದೊಡ್ಡ ಪುರೋಹಿತ ಎಂದು ಕರೆದರು. ಆದರೆ ಆ ಯೋಗ್ಯತೆ ನನಗಿದೆಯೋ ಇಲ್ಲವೋ ಗೊತ್ತಿಲ್ಲ. ನಾನು ನಿಜಕ್ಕೂ ತಾಯಿ ಭಾರತಿಯ ಆರಾಧಕ’ ಎಂದು ಅವರು ಹೇಳಿದರು.

ಯುಎಇಗೆ ಹೆಗ್ಗುರುತು:ಇಷ್ಟು ದಿನ ಬುರ್ಜ್‌ ಖಲೀಫಾ, ಫ್ಯೂಚರ್‌ ಮ್ಯೂಸಿಯಂ, ಶೇಕ್ ಜಾಯೇದ್‌ ಮಸೀದಿ ಮತ್ತು ಇತರ ಹೈಟೆಕ್‌ ಕಟ್ಟಡಗಳಿಗೆ ಹೆಸರುವಾಸಿಯಾಗಿದ್ದ ಯುಎಇಯ ಸಾಂಸ್ಕೃತಿಕ ಗುರುತಿಗೆ ಮತ್ತೊಂದು ಅಧ್ಯಾಯ ಸೇರ್ಪಡೆಯಾಗಿದೆ ಎಂದು ಪ್ರಧಾನಿ ಹೇಳಿದರು. 

ಈ ವೇಳೆ ಯುಎಇ ಸಹಿಷ್ಣುತಾ ಸಚಿವ ಶೇಖ್‌ ನಹ್ಯಾನ್ ಬಿನ್‌ ಮುಬಾರಕ್‌ ಅಲ್‌ ನಹ್ಯಾನ್‌ ಹಾಜರಿದ್ದರು.

ದೇಗುಲ ಉದ್ಘಾಟನೆಗೆ ಅಕ್ಷಯ್‌, ಒಬೆರಾಯ್‌, ಶಂಕರ್‌
ಸ್ವಾಮಿನಾರಾಯಣ ದೇಗುಲ ಉದ್ಘಾಟನಾ ಸಮಾರಂಭದಲ್ಲಿ ನಟ ಅಕ್ಷಯ ಕುಮಾರ್‌, ವಿವೇಕ್‌ ಒಬೆರಾಯ್‌, ಗಾಯಕ ಶಂಕರ ಮಹದೇವನ್‌, ಚಿತ್ರ ನಿರ್ಮಾಣಕಾರ ಮಧುರ್‌ ಭಂಡಾರ್ಕರ್‌ ಸೇರಿ ಅನೇಕರು ಭಾಗಿಯಾಗಿದ್ದರು.

Share this article