ಜಪಾನ್‌ನಲ್ಲಿ ಸರಣಿ ಭೂಕಂಪ, 5 ಅಡಿ ಎತ್ತರದ ಸುನಾಮಿ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಜಪಾನ್‌ನಲ್ಲಿ 7.6 ತೀವ್ರತೆಯ ಭೂಕಂಪದೊಂದಿಗೆ 21 ಸಲ ಪಶ್ಚಾತ್‌ ಕಂಪನ ಸಂಭವಿಸಿದೆ. ಪರಿಣಾಮ 34000 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಟ್‌ ಆಗಿದ್ದು, ಯಾವುದೇ ಸಾವು ನೋವಿಲ್ಲ ಎಂದು ವರದಿ ತಿಳಿಸಿದೆ.

ಟೋಕಿಯೋ: ಹೊಸ ವರ್ಷದ ಮೊದಲ ದಿನವೇ ಜಪಾನ್‌ನ ಇಶಿಕಾವಾ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸರಣಿ ಭೂಕಂಪ ಹಾಗೂ ಮಿನಿ ಸುನಾಮಿ ಸಂಭವಿಸಿದೆ. ಇದು 2011ರ ಮಾ.11ರಂದು ಜಗತ್ತನ್ನೇ ಬೆಚ್ಚಿ ಬೀಳಿಸಿದ ಜಪಾನ್‌ನ ಭಾರಿ ಸುನಾಮಿಯ ದಿನಗಳನ್ನು ನೆನಪಿಸಿದೆ.

ಜಪಾನ್‌ ಕಾಲಮಾನ ಸೋಮವಾರ ಸಂಜೆ ಗರಿಷ್ಠ 7.6 ತೀವ್ರತೆಯ ಕಂಪನ ಹಾಗೂ ನಂತರ 21 ಪಶ್ಚಾತ್‌ ಕಂಪನ ಸಂಭವಿಸಿವೆ. ಗರಿಷ್ಠ ತೀವ್ರತೆಯ ಭೂಕಂಪ 7.6 ರಷ್ಟಿದ್ದ ಕಾರಣ ಸರ್ಕಾರ, ಕರಾವಳಿ ಪ್ರದೇಶದಲ್ಲಿ 5 ಮೀಟರ್‌ ಎತ್ತರದವರೆಗಿನ ಸುನಾಮಿ ಅಲೆ ಏಳುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆ ನೀಡಿತ್ತು. ಆದರೆ ಅಂತಿಮವಾಗಿ ಕರಾವಳಿ ಪ್ರದೇಶಗಳಲ್ಲಿ 5 ಅಡಿ ಎತ್ತರದ ಅಲೆಗಳು ಮಾತ್ರವೇ ಕಾಣಿಸಿಕೊಂಡಿದೆ. ಹೀಗಾಗಿ ಯಾವುದೇ ಸಾವು- ನೋವು ಸಂಭವಿಸಿಲ್ಲ. ಕೊನೆಗೆ ಸುನಾಮಿ ಮುನ್ನೆಚ್ಚರಿಕೆಯನ್ನು ರಾತ್ರಿ ವೇಳೆ ಹಿಂಪಡೆಯಲಾಗಿದೆ.

21 ಪಶ್ಚಾತ್‌ ಕಂಪನ:ಜಪಾನ್‌ ಕಾಲಮಾನ ಸೋಮವಾರ ಸಂಜೆ 4.06ಕ್ಕೆ ಮೊದಲ ಭೂಕಂಪ ಸಂಭವಿಸಿದೆ. ಬಳಿಕ ವಿವಿಧ ತೀವ್ರತೆಯ 21 ಸರಣಿ ಪಶ್ಚಾತ್‌ ಕಂಪನ ದಾಖಲಾಗಿದೆ. ಈ ಪೈಕಿ ಗರಿಷ್ಠ ತೀವ್ರತೆ 7.6ರಷ್ಟು ದಾಖಲಾಗಿದೆ. ಇಶಿಕಾವಾದ ನೋಟೋ ಪ್ರದೇಶವು ಭೂಕಂಪದ ಕೇಂದ್ರ ಬಿಂದುವಾಗಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

34 ಸಾವಿರ ಮನೆಗಳ ವಿದ್ಯುತ್ ಕಟ್:

ಭೂಕಂಪದ ಕಾರಣ 34000 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.ತೀವ್ರತೆ ಹೆಚ್ಚಿದ್ದ ಕಾರಣ ಕೂಡಲೇ ಕರಾವಳಿ ತೀರದ ಜನರಿಗೆ ಸಮುದ್ರ ತೀರ ತೊರೆಯುವಂತೆ, ಸಮುದ್ರದ ತೀರದ ಮನೆಯಲ್ಲಿ ಇದ್ದವರಿಗೆ ಮೇಲಿನ ಮಹಡಿಗೆ ಇಲ್ಲವೇ ಎತ್ತರದ ಪ್ರದೇಶಕ್ಕೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನು ಭೂಕಂಪದ ತೀವ್ರತೆ ಹೆಚ್ಚಿದ್ದ ಕಾರಣ ಭೂಕುಸಿತ ಸಂಭವಿಸಿ ರಸ್ತೆಗಳು ಬಿರುಕು ಬಿಟ್ಟಿವೆ. ಹೀಗಾಗಿ ಕೆಲ ಕಾಲ ರೈಲು ಸಂಚಾರ, ಹೆದ್ದಾರಿಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇನ್ನು ಕೆಲವರು ಕಡೆ ಮನೆಗಳು ಕುಸಿದುಬಿದ್ದ, ನೀರಿನ್‌ ಪೈಪ್‌ ಒಡೆದು ಹೋದ, ಅಂತರ್ಜಾಲ ಸಂಪರ್ಕ ಕಡಿತವಾದ ಘಟನೆಗಳು ನಡೆದಿವೆ.ರಷ್ಯಾ, ಉ.ಕೊರಿಯಾದಲ್ಲೂ ಸುನಾಮಿ ಭೀತಿ

ರಷ್ಯಾ, ಉ. ಕೊರಿಯಾ ಸೇರಿ ಹಲವು ದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಆದರೆ ರಾತ್ರಿ ವೇಳೆ ಎಚ್ಚರಿಕೆ ಹಿಂಪಡೆಯಲಾಗಿದೆ.ಭಾರತೀಯರಿಗೆ ಸಹಾಯವಾಣಿ

ಟೋಕಿಯೋದಲ್ಲಿನ ಭಾರತೀಯ ದೂತಾವಾಸ ಕಚೇರಿ ಹಾಗೂ ಭಾರತದ ವಿದೇಶಾಂಗ ಇಲಾಖೆಗಳು, ಜಪಾನ್‌ನಲ್ಲಿರುವ ಭಾರತೀಯರ ನೆರವಿಗಾಗಿ ತುರ್ತು ಸಹಾಯವಾಣಿ ಮತ್ತು ಇ ಮೇಲ್‌ ಐಡಿಯನ್ನು ಬಿಡುಗಡೆ ಮಾಡಿವೆ.

ದೂರವಾಣಿ ಸಂಖ್ಯೆಗಳು +81-80-3930-1715, +81-70-1492-0049, +81-80-3214-4734, +81-80- 6229-5382, +81-80-3214-4722.

ಇ ಮೇಲ್‌ ಐಡಿ: sscons.tokyo@mea.gov.in ಮತ್ತು offfseco.tokyo@mea.gov.in

Share this article