ತೆರಿಗೆ ಹೆಚ್ಚಳ ವಿರೋಧಿಸಿ ಸಂಸತ್ತಿಗೆ ಬೆಂಕಿ

KannadaprabhaNewsNetwork |  
Published : Jun 26, 2024, 12:32 AM ISTUpdated : Jun 26, 2024, 08:16 AM IST
ಕೀನ್ಯಾ ಸಂಸತ್ತು | Kannada Prabha

ಸಾರಾಂಶ

ತೆರಿಗೆ ಹೆಚ್ಚಳ ಮಾಡುವ ವಿವಾದಿತ ಹಣಕಾಸು ಮಸೂದೆಯನ್ನು ಖಂಡಿಸಿ ಕೀನ್ಯಾ ಸಂಸತ್ತಿಗೆ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಘಟನೆ ಮಂಗಳವಾರ ನಡೆದಿದೆ.

ನೈರೋಬಿ: ತೆರಿಗೆ ಹೆಚ್ಚಳ ಮಾಡುವ ವಿವಾದಿತ ಹಣಕಾಸು ಮಸೂದೆಯನ್ನು ಖಂಡಿಸಿ ಕೀನ್ಯಾ ಸಂಸತ್ತಿಗೆ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಘಟನೆ ಮಂಗಳವಾರ ನಡೆದಿದೆ. ಈ ಬೆಂಕಿಯಿಂದ ಸಂಸತ್ತಿನ ಒಂದು ಭಾಗ ಸುಟ್ಟುಹೋಗಿದೆ. ಗಲಭೆಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದೂ ಮೂಲಗಳು ಹೇಳಿವೆ. ಸಂಸತ್ತಿನಲ್ಲಿ ತೆರಿಗೆ ಹೆಚ್ಚಳ ಚರ್ಚೆ ನಡೆದಾಗಲೇ ನುಗ್ಗಿದ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಕೂಡಲೇ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಜಲಫಿರಂಗಿ ಬಳಸಿ ಹಾಗೂ ಅಶ್ರುವಾಯು ಸಿಡಿಸಿ ಚದುರಿಸಿದ್ದಾರೆ ಹಾಗೂ ಸಂಸದರನ್ನು ಸುರಕ್ಷಿತವಾಗಿ ಹೊರಗೆ ಕಳಿಸಿದ್ದಾರೆ.

ಚಂದಿರನ ಅಂಗಳದಿಂದ 2 ಕೇಜಿ ಕಲ್ಲು, ಮಣ್ಣು ಹೊತ್ತು ತಂದ ಚೀನಾ

 ಬೀಜಿಂಗ್‌ : ಭೂಮಿಗೆ ಗೋಚರಿಸದ ಚಂದಿರನ ಮತ್ತೊಂದು ಬದಿಯಿಂದ 2 ಕೇಜಿ ಕಲ್ಲು ಹಾಗೂ ಮಣ್ಣನ್ನು ಹೊತ್ತು ಚೀನಾದ ಚಾಂಗ್‌-6 ಚಂದ್ರಯಾನ ನೌಕೆ ಯಶಸ್ವಿಯಾಗಿ ಮಂಗಳವಾರ ಭುವಿಗೆ ಮರಳಿದೆ. ಈವರೆಗೂ ಹೆಚ್ಚು ಸಂಶೋಧನೆಯಾಗದ ಚಂದಿರನ ಮತ್ತೊಂದು ಬದಿಯಿಂದ ಮಾದರಿಗಳನ್ನು ಸಂಗ್ರಹಿಸಿ ತರುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ದೇಶ ಎಂಬ ಹಿರಿಮೆಗೆ ಚೀನಾ ಪಾತ್ರವಾಗಿದೆ.ಉತ್ತರ ಚೀನಾದ ಮಂಗೋಲಿಯಾ ಸ್ವಾಯತ್ತ ಪ್ರದೇಶದಲ್ಲಿರುವ ನಿಗದಿತ ಪ್ರದೇಶದಲ್ಲಿ ಮಧ್ಯಾಹ್ನ 2.07 (ಬೀಜಿಂಗ್‌ ಸಮಯ) ಚೀನಾದ ಚಾಂಗ್‌-6 ನೌಕೆ ಬಂದಿಳಿದಿದೆ. ಈ ಯಾನ ಯಶಸ್ವಿಯಾಗಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ) ಘೋಷಣೆ ಮಾಡಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

2023ರ ಆಗಸ್ಟ್‌ನಲ್ಲಿ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ ನೌಕೆ-3 ಇಳಿಸಿತ್ತು. ಆದರೆ ಚೀನಾ ಚಂದಿರನ ಮತ್ತೊಂದು ಬದಿಯಲ್ಲಿ ನೌಕೆ ಇಳಿಸಿರುವ ಏಕೈಕ ದೇಶವಾಗಿದೆ. 2019ರಲ್ಲೂ ಆ ದೇಶ ಇದೇ ಸಾಧನೆ ಮಾಡಿತ್ತು. ಭೂಮಿಗೆ ಗೋಚರವಾಗುವ ಚಂದಿರನ ಭಾಗಕ್ಕೆ ಹೋಲಿಸಿದರೆ, ಮತ್ತೊಂದು ಭಾಗ ದೂರದಲ್ಲಿರುವುದಲ್ಲದೆ ದೊಡ್ಡ ಕುಳಿಗಳು ಹಾಗೂ ಸಮತಟ್ಟಾದ ಪ್ರದೇಶಗಳಿಂದಾಗಿ ವಿಜ್ಞಾನಿಗಳಿಗೆ ತಾಂತ್ರಿಕವಾಗಿ ಸವಾಲಿನ ಭಾಗವಾಗಿದೆ.ಚಾಂಗ್‌-6 ನೌಕೆ ಕಳೆದ ಮೇ 3ರಂದು ಉಡಾವಣೆಯಾಗಿತ್ತು. ಚಾಂಗ್‌-5 ಯೋಜನೆಯ ಭಾಗವಾಗಿ ಕೂಡ ಚೀನಾ ಚಂದ್ರನ ಅಂಗಳದಿಂದ (ಭೂಮಿಗೆ ಗೋಚರವಾಗುವ ಭಾಗ) ಮಾದರಿ ಸಂಗ್ರಹಿಸಿ ತಂದಿತ್ತು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಲಾಟರಿ ಮೂಲಕ ವೀಸಾ ವಿತರಣೆಗೆ ಟ್ರಂಪ್‌ ಬ್ರೇಕ್‌
ಕಾಂಬೋಡಿಯಾದ 30 ಅಡಿಯ ವಿಷ್ಣು ಪ್ರತಿಮೆ ಥಾಯ್ಲೆಂಡಿಂದ ಧ್ವಂಸ