- ಟ್ರಂಪ್ ಮಧ್ಯಸ್ಥಿಕೆ: 2 ವರ್ಷದ ಗಾಜಾ ಯುದ್ಧ ಅಂತ್ಯದತ್ತ- ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಉಗ್ರರ ಒಪ್ಪಿಗೆ
---- 2 ವರ್ಷಗಳಿಂದ 67 ಸಾವಿರ ಜನರ ಸಾವಿಗೆ ಕಾರಣವಾಗಿರುವ ಇಸ್ರೇಲ್- ಹಮಾಸ್ ಕದನ
- ಇದನ್ನು ಕೊನೆಗಾಣಿಸಲು 20 ಅಂಶಗಳ ಸೂತ್ರ ರೂಪಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಇಸ್ರೇಲ್‌ನಿಂದ ಒಪ್ಪಿಗೆ. ಆದರೆ ಹಮಾಸ್‌ನಿಂದ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ಗೊಂದಲ
- ಒಪ್ಪಿಗೆ ಸೂಚಿಸದಿದ್ದರೆ ನರಕದರ್ಶನ ಮಾಡುವೆ ಎಂದು ಭಾನುವಾರದವರೆಗೆ ಟ್ರಂಪ್ ಡೆಡ್‌ಲೈನ್- ಇದರ ಬೆನ್ನಲ್ಲೇ ಟ್ರಂಪ್ ಸೂತ್ರಕ್ಕೆ ಹಮಾಸ್ ಒಪ್ಪಿಗೆ. ಒತ್ತೆಯಾಳುಗಳ ಬಿಡುಗಡೆ ಬಗ್ಗೆ ಘೋಷಣೆ
- ಪ್ಯಾಲೆಸ್ತೀನಿ ಆಡಳಿತವನ್ನು ಸ್ವತಂತ್ರ ಸಂಸ್ಥೆಗೆ ನೀಡಲು, ಚರ್ಚಿಸಲು ಸಿದ್ಧ ಎಂದೂ ಮಾಹಿತಿ--
ಪಿಟಿಐ ಗಾಜಾ ಸಿಟಿ/ವಾಷಿಂಗ್ಟನ್/ಟೆಲ್ ಅವಿವ್‘ವಿಶ್ವಾದ್ಯಂತ ಹಲವು ಯುದ್ಧಗಳನ್ನು ನಿಲ್ಲಿಸಿದೆ’ ಎಂದು ಹೇಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ, ಸತತ 2 ವರ್ಷಗಳಿಂದ ನಡೆಯುತ್ತಿರುವ ಹಾಗೂ 67 ಸಾವಿರ ಜನರ ಸಾವಿಗೆ ಕಾರಣವಾಗಿರುವ ‘ಗಾಜಾ ಸಮರ’ಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದಂತೆ ಕಾಣುತ್ತಿದೆ. ಟ್ರಂಪ್ ಅವರ ಗಾಜಾ ಶಾಂತಿ ಸೂತ್ರಕ್ಕೆ ಹಮಾಸ್ ಉಗ್ರರು ಭಾಗಶಃ ಒಪ್ಪಿಗೆ ನೀಡಿದ್ದು, ಬಾಕಿ ಇರುವ ಎಲ್ಲ 48 ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಸಮ್ಮತಿ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಗಾಜಾ ಮೇಲಿನ ದಾಳಿ ನಿಲ್ಲಿಸುವಂತೆ ಇಸ್ರೇಲ್‌ಗೆ ಟ್ರಂಪ್ ತಾಕೀತು ಮಾಡಿದ್ದಾರೆ. ಇಸ್ರೇಲ್ ಕೂಡ ಹಂತ ಹಂತವಾಗಿ ಶಾಂತಿ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿದೆ.
ಇತ್ತೀಚೆಗೆ ಟ್ರಂಪ್ 20 ಅಂಶಗಳ ಗಾಜಾ ಶಾಂತಿ ಯೋಜನೆ ಸಿದ್ಧಪಡಿಸಿದ್ದರು. ಇದಕ್ಕೆ ಇಸ್ರೇಲ್ ಒಪ್ಪಿಗೆ ನೀಡಿತ್ತು. ಆದರೆ ಹಮಾಸ್ ಸಮ್ಮತಿ ಸೂಚಿಸಲು ಹಿಂದೇಟು ಹಾಕಿತ್ತು. ಈ ನಡುವೆ ಟ್ರಂಪ್ ಅವರು, ‘ಭಾನುವಾರ ಸಂಜೆ 6ರೊಳಗೆ ಶಾಂತಿ ಸೂತ್ರಕ್ಕೆ ಒಪ್ಪದಿದ್ದರೆ ನರಕ ದರ್ಶನ ಮಾಡಿಸುವೆ’ ಎಂದು ಹಮಾಸ್‌ಗೆ ಎಚ್ಚರಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪ್ರಕಟಣೆ ಹೊರಡಿಸಿರುವ ಹಮಾಸ್, ‘3 ದಿನದಲ್ಲಿ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ಮಾಡುತ್ತೇವೆ. ಅರಬ್ ಮತ್ತು ಇಸ್ಲಾಮಿಕ್ ಬೆಂಬಲದೊಂದಿಗೆ ಗಾಜಾದ ಆಡಳಿತವನ್ನು ಸ್ವತಂತ್ರ ಪ್ಯಾಲೆಸ್ತೀನಿ ಸಂಸ್ಥೆಗೆ ಒಪ್ಪಿಸುತ್ತೇವೆ. ಉಳಿದ ಅಂಶಗಳ ಬಗ್ಗೆ ಮಧ್ಯವರ್ತಿಗಳ ಉಪಸ್ಥಿತಿಯಲ್ಲಿ ತಕ್ಷಣದಿಂದಲೇ ಮಾತುಕತೆ ನಡೆಸಲು ಸಿದ್ಧರಿದ್ದೇವೆ’ ಎಂದಿದೆ.ಈ ಶಾಂತಿ ಯತ್ನಕ್ಕೆ ಭಾರತ ಸೇರಿ ಜಗತ್ತಿನ ದೇಶಗಳಿಂದ ಸ್ವಾಗತ ವ್ಯಕ್ತವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ‘ಗಾಜಾ ಶಾಂತಿ ಯತ್ನಗಳು ನಿರ್ಣಾಯಕ ಪ್ರಗತಿ ಸಾಧಿಸುತ್ತಿವೆ. ಇದನ್ನು ಸ್ವಾಗತಿಸುತ್ತೇವೆ. ಒತ್ತೆಯಾಳುಗಳ ಬಿಡುಗಡೆ ಸೂಚನೆಗಳು ಮಹತ್ವದ ಪ್ರಗತಿಯ ಸಂಕೇತ. ಶಾಶ್ವತ ಮತ್ತು ನ್ಯಾಯಯುತ ಶಾಂತಿಯ ಎಲ್ಲ ಯತ್ನಗಳನ್ನು ಭಾರತ ಸದಾ ಬೆಂಬಲಿಸುತ್ತದೆ’ ಎಂದಿದ್ದಾರೆ.
ಆದರೆ ಈ ಶಾಂತಿ ಯತ್ನದ ನಡುವೆಯೂ ಗಾಜಾ ಪಟ್ಟಿಯಲ್ಲಿ ಇಸ್ರೇಲಿ ಯೋಧರು 6 ಪ್ಯಾಲೆಸ್ತೀನೀಯರನ್ನು ಗುಂಡಿಕ್ಕಿ ಸಾಯಿಸಿದ್ದಾರೆ. ಆದರೆ ಇದರ ಹೊರತಾಗಿ ಯಾವ ದಾಳಿ ಯತ್ನವೂ ನಡೆದಿಲ್ಲ.48 ಒತ್ತೆಯಾಳು ಬಿಡುಗಡೆ:
‘ಇಸ್ರೇಲ್ ಸೇನೆ ಗಾಜಾದಿಂದ ಹಿಂದೆ ಸರಿಯಬೇಕು ಎಂದರೆ ಹಮಾಸ್, ತನ್ನ ಬಳಿ ಒತ್ತೆಯಾಳಾಗಿ ಇರಿಸಿಕೊಂಡಿರುವ ಎಲ್ಲರನ್ನೂ (ಜೀವಂತ, ಮೃತ) ಬಿಡುಗಡೆಗೊಳಿಸಬೇಕು’ ಎಂದು ಟ್ರಂಪ್ ಪ್ರಸ್ತಾವ ಇರಿಸಿದ್ದರು.ಇದಕ್ಕೆ ಒಪ್ಪಿಕೊಂಡಿರುವ ಹಮಾಸ್, ‘ಈಗ ಜೀವಂತ ಇರುವ 20 ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತೇವೆ. ಜತೆಗೆ ಮೃತರಾಗಿರುವ ಇನ್ನೂ 28 ಜನರ ಮೃತದೇಹ ನೀಡುತ್ತೇವೆ. ಹೀಗೆ ಒಟ್ಟು 48 ಒತ್ತೆಯಾಳುಗಳನ್ನು (20 ಜೀವಂತ+28 ಮೃತ) 3 ದಿನಗಳಲ್ಲಿ ಹಸ್ತಾಂತರಿಸುತ್ತೇವೆ’ ಎಂದು ಹೇಳಿಕೆ ನೀಡಿದೆ. ಆದರೆ, ಶಸ್ತ್ರಾಸ್ತ್ರ ನಾಶ ಸೇರಿದಂತೆ ಟ್ರಂಪ್ ಅವರ ಇತರ ಸೂತ್ರಗಳ ಬಗ್ಗೆ ಹಮಾಸ್ ಇನ್ನೂ ಸಮ್ಮತಿಸಿಲ್ಲ. ಈ ಬಗ್ಗೆ ಮಾತುಕತೆಯ ಅಗತ್ಯವಿದೆ ಎಂದಷ್ಟೇ ಹೇಳಿದೆ.
2023ರ ಆ.7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿ 1200 ಜನರನ್ನು ಕೊಂದಿದ್ದರು. ದಾಳಿ ವೇಳೆ 251 ಮಂದಿಯನ್ನು ಒತ್ತೆಯಾಳಾಗಿಸಿಕೊಂಡಿತ್ತು.ಇದಾದ ನಂತರ ಹಮಾಸ್, ಈವರೆಗೆ 148 ಜನರನ್ನು ಇಸ್ರೇಲ್‌ಗೆ ಒಪ್ಪಿಸಿದೆ. 51 ಜನರ ಶವಗಳನ್ನು ವಶಪಡಿಸಿಕೊಂಡಿದ್ದ ಇಸ್ರೇಲ್ ಸೇನೆ, 8 ಮಂದಿಯನ್ನು ಜೀವಂತವಾಗಿ ಕಾಪಾಡಿತ್ತು. ಸದ್ಯ 48 ಜನರು ಇನ್ನೂ ಹಮಾಸ್ ಒತ್ತೆ ಸೆರೆಯಲ್ಲಿದ್ದಾರೆ.
ದಾಳಿ ನಿಲ್ಲಿಸಿ-ಟ್ರಂಪ್:ಹಮಾಸ್‌ಗಳ ನಿರ್ಧಾರ ಸ್ವಾಗತಿಸಿರುವ ಟ್ರಂಪ್, ‘ಅವರು ಶಾಶ್ವತ ಶಾಂತಿಗೆ ಸಿದ್ಧರಾಗಿದ್ದಾರೆ ಎಂದು ಭಾವಿಸಿದ್ದೇನೆ’ ಎಂದಿದ್ದಾರೆ. ‘ಗಾಜಾ ಮೇಲೆ ದಾಳಿ ಮಾಡಬೇಡಿ’ ಎಂದು ಇಸ್ರೇಲ್‌ಗೆ ತಾಕೀತು ಮಾಡಿದ್ದಾರೆ. ‘ಇಸ್ರೇಲ್ ದಾಳಿ ನಿಲ್ಲಿಸಿದರೆ ಒತ್ತೆಯಾಳುಗಳನ್ನು ಆದಷ್ಟು ಬೇಗ ಸುರಕ್ಷಿತವಾಗಿ ಬಿಡುಗಡೆ ಮಾಡಬಹುದು. ಆ ಬಗ್ಗೆ ಈಗಾಗಲೇ ಚರ್ಚೆಯಲ್ಲಿ ತೊಡಗಿದ್ದೇವೆ. ಇದು ಗಾಜಾ ಮಾತ್ರವಲ್ಲ/ ಇಡೀ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಅಗತ್ಯ’ ಎಂದು ಟ್ರಂಪ್, ‘ಟ್ರುಥ್ ಸೋಷಿಯಲ್ ಮೀಡಿಯಾ’ದಲ್ಲಿ ಹೇಳಿದ್ದಾರೆ.
ಇದಲ್ಲದೆ, ಶನಿವಾರ ಸಂಜೆ ಇನ್ನೊಂದು ಹೇಳಿಕೆ ನೀಡಿ, ‘ಇಸ್ರೇಲ್ ದಾಳಿ ನಿಲ್ಲಿಸಿದೆ. ಹಮಾಸ್ ಇನ್ನು ತಡ ಮಾಡಬಾರದು’ ಎಂದು ಎಚ್ಚರಿಸಿದ್ದಾರೆ.ನೆತನ್ಯಾಹು ಒಪ್ಪಿಗೆ:ಟ್ರಂಪ್ ಆದೇಶಕ್ಕೆ ಒಪ್ಪಿಗೆ ಸೂಚಿಸಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು, ‘ನಾವು ಟ್ರಂಪ್‌ರ ಯೋಜನೆಯನ್ನು ಮೊದಲ ಹಂತದಲ್ಲಿ ಜಾರಿಗೊಳಿಸಲು ಸಿದ್ಧತೆಯಲ್ಲಿ ತೊಡಗಿದ್ದೇವೆ’ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಇಸ್ರೇಲಿ ಸೇನೆ ಕೂಡ ದಾಳಿ ನಿಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ತನ್ನೆಲ್ಲ ಪಡೆಗಳಿಗೆ ಸೂಚನೆ ನೀಡಿದೆ. ಮೂಲಗಳ ಪ್ರಕಾರ ಶನಿವಾರದಿಂದ ಗಾಜಾ ಗಡಿಯಲ್ಲಿ ಇಸ್ರೇಲಿ ಸೇನೆ ಕೇವಲ ದೇಶರಕ್ಷಣೆಗೆ ಕಾವಲು ಕಾಯಲು ಆರಂಭಿಸಿದೆ ಹಾಗೂ ದಾಳಿಯಿಂದ ಹಿಂದೆ ಸರಿದಿದೆ.
ಈಗಾಗಲೇ ಟ್ರಂಪ್ ಗಾಜಾ ಶಾಂತಿ ಪ್ರಸ್ತಾವಕ್ಕೆ ಭಾರತ ಹಾಗೂ 8 ಮುಸಲ್ಮಾನ ದೇಶಗಳು ಬೆಂಬಲ ನೀಡಿವೆ.