ಮಾಲೆ/ನವದೆಹಲಿ: ಲಕ್ಷದ್ವೀಪಕ್ಕೆ ಭೇಟಿ ನೀಡಿ ಆಕರ್ಷಕ ಫೋಟೋಗಳನ್ನು ಬಿತ್ತರಿಸುವ ಮೂಲಕ ‘ಮಾಲ್ಡೀವ್ಸ್‌ಗೆ ಲಕ್ಷದ್ವೀಪ ಪರ್ಯಾಯ ಪ್ರವಾಸಿ ತಾಣವಾಗಬಹುದು’ ಎಂಬ ಅಭಿಪ್ರಾಯ ಸೃಷ್ಟಿಯಾಗಲು ಕಾರಣರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೀಳು ಹೇಳಿಕೆ ನೀಡಿದ್ದಕ್ಕಾಗಿ 3 ಉಪ-ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಭಾನುವಾರ ಸಂಜೆ ಸಸ್ಪೆಂಡ್ ಮಾಡಿದೆ.
ಮಾರಿಯಂ ಶಿಯುನಾ, ಮಲ್ಷಾ ಷರೀಫ್ ಹಾಗೂ ಮಝೂಂ ಮಜೀದ್ ಅವರೇ ಸಸ್ಪೆಂಡ್ ಆದ 3 ಉಪ-ಸಚಿವರು. ಮೋದಿ ಕುರಿತ ಅವರ ಟೀಕೆಗಳು ಉಭಯ ದೇಶಗಳ ನಡುವಿನ ಬಿಕ್ಕಟ್ಟಿಗೆ ಕಾರಣವಾದ ಬೆನ್ನಲ್ಲೇ ಅಧ್ಯಕ್ಷ ಮೊಹಮ್ಮದ್ ಮಿಜು ನೇತೃತ್ವದ ಮಾಲ್ಡೀವ್ಸ್ ಸರ್ಕಾರ ಶಿಸ್ತು ಕ್ರಮ ಜರುಗಿಸಿದೆ. ಮಾಲ್ಡೀವ್ಸ್ ಸರ್ಕಾರದಲ್ಲಿ ಹಾಗೂ ಸ್ವತಃ ಮಾಲ್ಡೀವ್ಸ್ ನಾಗರಿಕರಿಂದಲೂ ಸಚಿವರ ನಡೆಗೆ ವಿರೋಧ ವ್ಯಕ್ತವಾಗಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಇದೇ ವೇಳೆ, ಭಾರತೀಯರು ಮಾಲ್ಡೀವ್ಸ್ ಪ್ರವಾಸಕ್ಕೆ ಬಹಿಷ್ಕಾರ ಹಾಕಲು ಕರೆ ನೀಡಿದ ಕಾರಣ, ದೇಶದ ಆರ್ಥಿಕತೆಗೆ ಹೊಡೆತ ಬೀಳುವ ಮುನ್ಸೂಚನೆ ಅರಿತು ಅಲ್ಲಿನ ಸರ್ಕಾರ ಸಚಿವರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.ಇದೇ ವೇಳೆ ಸಚಿವರ ಹೇಳಿಕೆಗಳಿಗೆ ಭಾರತ ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ತಣ್ಣಗಾಗಿರುವ ಮಾಲ್ಡೀವ್ಸ್ ಸರ್ಕಾರ, ‘ಈ ಹೇಳಿಕೆ ವೈಯಕ್ತಿಕವಾದುದು’ ಎಂದು ವಿವಾದದಿಂದ ದೂರ ಉಳಿಯಲು ಯತ್ನಿಸಿದೆ.
ಆಗಿದ್ದೇನು?: ಮೋದಿ ಅವರು ಲಕ್ಷದ್ವೀಪ ತೀರದಲ್ಲಿ ಸ್ನಾರ್ಕೆಲಿಂಗ್ ಮಾಡುವ ಹಾಗೂ ಓಡಾಡುತ್ತಿರುವ ಫೋಟೋಗಳನ್ನು ಇತ್ತೀಚೆಗೆ ಟ್ವೀಟರ್‌ನಲ್ಲಿ ಹಾಕಿಕೊಂಡಿದ್ದರು. ಲಕ್ಷದ್ವೀಪ ಪ್ರವಾಸೋದ್ಯಮ ಉತ್ತೇಜಿಸಲೆಂದೇ ಅವರು ಹೀಗೆ ಮಾಡಿದ್ದರು ಹಾಗೂ ಮೋದಿ ಅವರ ಈ ನಡೆಯು ಕಡಲತೀರ ಪ್ರವಾಸೋದ್ಯಮಕ್ಕೆ ಹೆಸರಾದ ಮಾಲ್ಡೀವ್ಸ್‌ಗೆ ಹೊಡೆತ ನೀಡಲಿದೆ ಎಂದು ವಿಶ್ಲೇಷಿಸಲಾಗಿತ್ತು.
ಇದರ ಬೆನ್ನಲ್ಲೇ ಮಾಲ್ಡೀವ್ಸ್ ಉಪ ಸಚಿವೆಯಾಗಿರುವ ಮಾರಿಯಂ ಶಿಯುನಾ ‘ವಿದೂಷಕ’, ‘ಇಸ್ರೇಲ್ ದೇಶದ ಕೈಗೊಂಬೆ’ ಹಾಗೂ ‘ಸ್ನಾರ್ಕೆಲಿಂಗ್ ಮಾಡುವ ವ್ಯಕ್ತಿಗಳು ಯಾವತ್ತಾದರೂ ಲೈಫ್ ಜಾಕೆಟ್ ಧರಿಸುತ್ತಾರಾ?’ ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ, ಮಜೀದ್ ಹಾಗೂ ಮಲ್ಷಾ ಷರೀಫ್ ಅವರೂ ಸೋಷಿಯಲ್ ಮೀಡಿಯಾದಲ್ಲಿ ಮೋದಿ ಬಗ್ಗೆ ಟೀಕೆ ಟಿಪ್ಪಣಿ ಮಾಡಿದ್ದರು. ಇನ್ನು ಸಂಸದರೊಬ್ಬರು, ‘ಲಕ್ಷದ್ವೀಪದ ಹೋಟೆಲ್ ಕೋಣೆಗಳು ವಾಸನೆ ಹೊಡೆಯುತ್ತವೆ’ ಎಂದು ಅವಮಾನಕಾರಿಯಾಗಿ ಹೇಳಿಕೆ ನೀಡಿದ್ದರು.
ಈ ಟೀಕೆಗಳು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸ್ವತಃ ಮಾಲ್ಡೀವ್ಸ್ ಸರ್ಕಾರ ಹಾಗೂ ಸ್ಥಳೀಯ ಜನರ ಆಕ್ರೋಶಕ್ಕೆ ಗುರಿಯಾಗಿತ್ತು. ಭಾರತೀಯರು ಮಾರಿಯಂ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಸಾರಿ, ಮಾಲ್ಡೀವ್ಸ್‌ಗೆ ಇನ್ನು ಯಾವ ಭಾರತೀಯರೂ ಪ್ರವಾಸಕ್ಕೆ ಹೋಗಬಾರದು ಎಂದು ‘ಬಾಯ್ಕಾಟ್ ಮಾಲ್ಡೀವ್ಸ್’ ಹೆಸರಿನ ಆಂದೋಲನವನ್ನು ಸೋಷಿಯಲ್ ಮೀಡಿಯಾದಲ್ಲಿ ಆರಂಭಿಸಿದ್ದರು. ಇದರ ಬೆನ್ನಲ್ಲೇ ಮಾರಿಯಂ ಅವರು ತಮ್ಮ ಟ್ವೀಟ್ ಅನ್ನು ಅಳಿಸಿ ಹಾಕಿದ್ದರು.
ಇದರ ನಡುವೆ ಪ್ರತಿಕ್ರಿಯೆ ನೀಡಿದ್ದ ಮಾಲ್ಡೀವ್ಸ್ ಮಾಜಿ ಅಧ್ಯಕ್ಷರಾದ ಮೊಹಮ್ಮದ್ ನಶೀದ್ ಮತ್ತು ಇಬ್ರಾಹಿಂ ಸೊಲೇಹ್ ಮತ್ತು ಮಾಜಿ ಉಪಾಧಕ್ಷ ಅಹ್ಮದ್ ಅದೀಬ್ ಅವರು, ‘ದ್ವಿಪಕ್ಷೀಯ ಸಂಬಂಧ ಹಾಳು ಮಾಡಲು ಕಾರಣರಾಗಿರುವ ಇಂಥ ಸಚಿವರ ಮೇಲೆ ಕ್ರಮ ಜರುಗಿಸಬೇಕು. ಟೀಕೆ ವೇಳೆಯ ಭಾಷಾ ಬಳಕೆ ತೀರಾ ಅವಹೇಳನಕಾರಿಯಾಗಿದೆ’ ಎಂದಿದ್ದರು.
ಬಳಿಕ ಭಾರತ ಸರ್ಕಾರ ಕೂಡ ಮಾಲ್ಡೀವ್ಸ್ ಸರ್ಕಾರಕ್ಕೆ ತನ್ನ ಕಟು ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮಾಲ್ಡೀವ್ಸ್ ಸರ್ಕಾರ, ‘ಸಚಿವೆ ನೀಡಿರುವ ಹೇಳಿಕೆ ವೈಯಕ್ತಿಕ. ಸರ್ಕಾರದ ಅಭಿಪ್ರಾಯವನ್ನು ಅವು ಪ್ರತಿಬಿಂಬಿಸುವುದಿಲ್ಲ. ವಾಕ್ ಸ್ವಾತಂತ್ರ್ಯದ ಹಕ್ಕನ್ನು ಪ್ರಜಾಸತ್ತಾತ್ಮಕವಾಗಿ ಹಾಗೂ ಜವಾಬ್ದಾರಿಯುತವಾಗಿ ವ್ಯಕ್ತಪಡಿಸಬೇಕು.
ಎರಡು ದೇಶಗಳ ನಡುವಣ ಸಂಬಂಧಕ್ಕೆ ಧಕ್ಕೆಯಾಗುವ ರೀತಿಯಲ್ಲ’ ಎಂದು ತಪರಾಕಿ ಹಾಕಿದೆ ಹಾಗೂ ಉಪ ಸಚಿವರನ್ನು ಸಸ್ಪೆಂಡ್ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಹಳಸುತ್ತಿರುವ ಸಂಬಂಧ: ಮಾಲ್ಡೀವ್ಸ್‌ಗೂ ಭಾರತಕ್ಕೂ ಇತ್ತೀಚೆಗೆ ಸಂಬಂಧ ಸರಿಯಿಲ್ಲ. ಮಾಲ್ಡೀವ್ಸ್‌ಗೆ ಹೊಸ ಅಧ್ಯಕ್ಷರಾಗಿ ಮೊಹಮ್ಮದ್ ಮಿಜು ಆಯ್ಕೆಯಾದ ನಂತರ ಅವರು ಭಾರತದ ವಿರುದ್ಧ ದ್ವೇಷ ಸಾಧಿಸುತ್ತಿದ್ದು ಚೀನಾ ಪರ ವಾಲಿದ್ದಾರೆ. ಮಾಲ್ಡೀವ್ಸ್ ರಕ್ಷಣೆಗೆ ನಿಯೋಜನೆ ಆಗಿದ್ದ ಭಾರತೀಯ ಸೇನೆಗೂ ಇತ್ತೀಚೆಗೆ ಅವರು ದೇಶ ಬಿಡುವಂತೆ ಸೂಚಿಸಿದ್ದರು.
ಭಾರತೀಯರಿಂದ ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನ, ಪ್ರವಾಸ ರದ್ದು!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿ ಮಾಲ್ಡೀವ್ಸ್ ಸಚಿವೆ ಟ್ವೀಟ್ ಮಾಡಿರುವ ಬೆನ್ನಲ್ಲೇ ಮಾಲ್ಡೀವ್ಸ್ ಪ್ರವಾಸವನ್ನು ಭಾರತೀಯರು ರದ್ದು ಮಾಡುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ‘ಬಾಯ್ಕಾಟ್ ಮಾಲ್ಡೀವ್ಸ್’ (ಮಾಲ್ಡೀವ್ಸ್‌ಗೆ ಬಹಿಷ್ಕಾರ ಹಾಕಿ) ಎಂಬುದು ಟ್ರೆಂಡ್ ಆಗಿದೆ.ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಿರುವ ಸ್ಕ್ರೀನ್‌ಶಾಟ್‌ಗಳನ್ನು ಹಲವು ಜನ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಭಾರತವು ಆತ್ಮನಿರ್ಭರವಾಗಬೇಕು. ಮಾಲ್ಡೀವ್ಸ್‌ಗೆ ಹೋಗದೇ ಅವರಿಗೆ ತಿರುಗೇಟು ನೀಡಬೇಕು ಎಂಬ ಸಂದೇಶಗಳು ಹರಿದಾಡುತ್ತಿವೆ.
ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಭಾರತೀಯ ಪ್ರವಾಸಿಗಳ ಪಾಲೇ ಅಧಿಕವಾಗಿದೆ.ಇತ್ತೀಚಿನ ಕೆಲವು ದಿನಗಳಿಂದ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿತ್ತು. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ, ಮಾಲ್ಡೀವ್ಸ್ ನಾಯಕರು ಭಾರತದ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದರು.