;Resize=(412,232))
ವಿಕ್ಟೋರಿಯಾ (ಸೀಶೆಲ್ಸ್) : ವಿಶ್ವದ ಅತಿ ಹಿರಿಯ ಭೂವಾಸಿ ಜೀವಿ ಎಂಬ ದಾಖಲೆ ಬರೆದಿರುವ 194 ವರ್ಷದ ದೈತ್ಯ ಆಮೆ ‘ಜೋನಾಥನ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವೀಕ್ಷಿಸಿದರು.
ಸೀಶೆಲ್ಸ್ ಪ್ರವಾಸದಲ್ಲಿರುವ ಮೋದಿ, ಅಲ್ಲಿನ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಜತೆ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿದರು. ಅಲ್ಲಿ ಜೋನಾಥನ್ ಆಮೆಯನ್ನು ವೀಕ್ಷಿಸಿ, ಅದಕ್ಕೆ ಆಹಾರ ನೀಡಿದರು. ಬಳಿಕ ಸಸ್ಯೋದ್ಯಾನದ ಸಿಬ್ಬಂದಿ ಜತೆ ಮಾತುಕತೆ ನಡೆಸಿದರು. ಇದೇ ವೇಳೆ ಭೇಟಿಯ ನೆನಪಿಗಾಗಿ ಸಸಿಯೊಂದನ್ನು ನೆಟ್ಟರು.
ಜೋನಾಥನ್ 1832ರಲ್ಲಿ ಜನಿಸಿದ ದೈತ್ಯ ಆಮೆ. ಇದರ ವಯಸ್ಸು ಸುಮಾರು 194 ವರ್ಷಗಳು. ಗಿನ್ನೆಸ್ ವಿಶ್ವ ದಾಖಲೆ ಇದನ್ನು ವಿಶ್ವದ ಅತ್ಯಂತ ಹಿರಿಯ ಭೂವಾಸಿ ಪ್ರಾಣಿ ಎಂದು ಗುರುತಿಸಿದೆ. ಇಷ್ಟು ವಯಸ್ಸಾದರೂ ದೃಷ್ಟಿದೋಷವನ್ನು ಹೊರತುಪಡಿಸಿ ಆರೋಗ್ಯವಾಗಿದೆ. ವಿಜ್ಞಾನ ಲೋಕದ ಅಚ್ಚರಿಯಾಗಿರುವ ಈ ಆಮೆ, ಸೀಶೆಲ್ಸ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದು.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ‘ಆಲ್ಡಬ್ರಾ ದೈತ್ಯ ಆಮೆ ಭಾರತ ಮತ್ತು ಸೇಶಲ್ಸ್ ನಡುವಿನ ವಿಶೇಷ ಸ್ನೇಹದೊಂದಿಗೆ ಸಂಬಂಧ ಹೊಂದಿದೆ. 2014ರಲ್ಲಿ ಸೀಶೆಲ್ಸ್ ಕೋಲ್ಕತ್ತಾದ ಅಲಿಪೋರ್ ಮೃಗಾಲಯಕ್ಕೆ 2 ಆಮೆಗಳನ್ನು ಉಡುಗೊರೆಯಾಗಿ ನೀಡಿತು. ಕೆಲವು ವರ್ಷಗಳ ನಂತರ, ಹೈದರಾಬಾದ್ ಮೃಗಾಲಯಕ್ಕೆ ಇನ್ನೂ ಕೆಲವು ಆಮೆಗಳನ್ನು ನೀಡಿತು’ ಎಂದು ಸ್ಮರಿಸಿದ್ದಾರೆ.