ಗ್ರೀನ್‌ಲ್ಯಾಂಡ್‌ಗೆ ನ್ಯಾಟೋ ಸೈನಿಕರ ಪ್ರವೇಶ

Published : Jan 16, 2026, 05:28 AM IST
Nato Countries

ಸಾರಾಂಶ

ನಮಗೆ ಗ್ರೀನ್‌ಲ್ಯಾಂಡ್‌ ಬೇಕೇ ಬೇಕು ಎಂದು ಅಮೆರಿಕ ಪಟ್ಟು ಹಿಡಿದು ಕೂತಿರುವ ನಡುವೆಯೇ ಅಮೆರಿಕದ್ದೇ ನೇತೃತ್ವ ಹೊಂದಿರುವ ನ್ಯಾಟೋ ಮಿಲಿಟರಿ ಕೂಟದ ಭಾಗವಾಗಿರುವ ಫ್ರಾನ್ಸ್‌, ಜರ್ಮನಿ ಸೇರಿ ಇತರೆ ಯುರೋಪಿಯನ್‌ ದೇಶಗಳು ಗ್ರೀನ್‌ಲ್ಯಾಂಡ್‌ ರಕ್ಷಣೆಗಾಗಿ ತಮ್ಮ ಸೇನೆಯನ್ನು ಕಳುಹಿಸಿಕೊಟ್ಟಿವೆ

ನೂಕ್‌ (ಗ್ರೀನ್‌ಲ್ಯಾಂಡ್‌): ಬಲವಂತವಾಗಿಯಾದರೂ ಸರಿ, ನಮಗೆ ಗ್ರೀನ್‌ಲ್ಯಾಂಡ್‌ ಬೇಕೇ ಬೇಕು ಎಂದು ಅಮೆರಿಕ ಪಟ್ಟು ಹಿಡಿದು ಕೂತಿರುವ ನಡುವೆಯೇ ಅಮೆರಿಕದ್ದೇ ನೇತೃತ್ವ ಹೊಂದಿರುವ ನ್ಯಾಟೋ ಮಿಲಿಟರಿ ಕೂಟದ ಭಾಗವಾಗಿರುವ ಫ್ರಾನ್ಸ್‌, ಜರ್ಮನಿ ಸೇರಿ ಇತರೆ ಯುರೋಪಿಯನ್‌ ದೇಶಗಳು ಗ್ರೀನ್‌ಲ್ಯಾಂಡ್‌ ರಕ್ಷಣೆಗಾಗಿ ತಮ್ಮ ಸೇನೆಯನ್ನು ಕಳುಹಿಸಿಕೊಟ್ಟಿವೆ. ಈ ಮೂಲಕ ಗ್ರೀನ್‌ಲ್ಯಾಂಡ್ ವಶದ ಅಮೆರಿಕದ ಯತ್ನಕ್ಕೆ ಸಡ್ಡು ಹೊಡೆಯುವ ಯತ್ನ ಮಾಡಿವೆ.

ಫ್ರಾನ್ಸ್‌, ಜರ್ಮನಿ, ನಾರ್ವೆ ಮತ್ತು ಸ್ವೀಡನ್‌

ಫ್ರಾನ್ಸ್‌, ಜರ್ಮನಿ, ನಾರ್ವೆ ಮತ್ತು ಸ್ವೀಡನ್‌ ದೇಶಗಳು ತಮ್ಮ ಸೇನೆಯನ್ನು ಕಳುಹಿಸಿಕೊಡುವ ಪ್ರಕ್ರಿಯೆ ಆರಂಭಿಸಿದ್ದು, ಡೆನ್ಮಾರ್ಕ್‌ ಕೂಡ ತನ್ನ ಸೇನೆಯ ಉಪಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸುವುದಾಗಿ ತಿಳಿಸಿದೆ. ಈ ಮೂಲಕ ಗ್ರೀನ್‌ಲ್ಯಾಂಡ್‌ನ ಭದ್ರತೆ ಬಿಗಿಗೊಳಿಸಲು ಮುಂದಾಗಿವೆ.

ಅಮೆರಿಕದ ವಿದೇಶಾಂಗ ಸಚಿವರ ಜತೆಗೆ ಮಾತುಕತೆ

ಬುಧವಾರವಷ್ಟೇ ಡೆನ್ಮಾರ್ಕ್‌, ಗ್ರೀನ್‌ಲ್ಯಾಂಡ್‌ ವಿದೇಶಾಂಗ ಸಚಿವರು ಅಮೆರಿಕದ ವಿದೇಶಾಂಗ ಸಚಿವರ ಜತೆಗೆ ಮಾತುಕತೆ ನಡೆಸಿದ್ದರು. ಆದರೆ ಆ ಮಾತುಕತೆ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಯುರೋಪ್‌ ದೇಶಗಳು ಸೇನೆ ನಿಯೋಜಿಸಲು ಮುಂದಾಗಿವೆ. ಈಗಾಗಲೇ ಫ್ರಾನ್ಸ್‌ನ ಸೇನೆಯ ಯೋಧರು ಗ್ರೀನ್‌ಲ್ಯಾಂಡ್‌ಗೆ ತೆರಳಿದ್ದು, ಉಳಿದ ದೇಶಗಳ ಯೋಧರೂ ಅಲ್ಲಿಗೆ ತೆರಳಲು ಸಿದ್ಥತೆ ಆರಂಭಿಸಿದ್ದಾರೆ ಎಂದು ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್‌ ಮಾಕ್ರೋನ್‌ ಹೇಳಿದ್ದಾರೆ.

ಈ ನಡುವೆ, ಗ್ರೀನ್‌ಲ್ಯಾಂಡ್‌ ಮೇಲೆ ಅಮೆರಿಕ ಸೇನಾ ಕಾರ್ಯಾಚರಣೆ ನಡೆಸುವ ಸಾಧ್ಯತೆಯನ್ನು ನಿರಾಕರಿಸಿರುವ ಡೆನ್ಮಾರ್ಕ್‌ನ ವಿದೇಶಾಂಗ ಸಚಿವ ರಾಸ್‌ಮುಸೇನ್‌, ಹಾಗೇನಾದರೂ ಆದರೆ ನ್ಯಾಟೋ ಒಕ್ಕೂಟ ಮುರಿದುಬೀಳಲಿದೆ. ಹಣಕಾಸು ನೆರವಿನ ಆಮಿಷ ತೋರಿದರೂ ಗ್ರೀನ್‌ಲ್ಯಾಂಡ್‌ನ ಜನ ಅಮೆರಿಕದ ಪರ ಮತ ಹಾಕುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದರು.

- ಅಮೆರಿಕ ಹಟದ ಬೆನ್ನಲ್ಲೇ ಫ್ರಾನ್ಸ್‌, ಜರ್ಮನಿ, ನಾರ್ವೆ, ಸ್ವೀಡನ್‌ನಿಂದ ಯೋಧರ ರವಾನೆ

- ವಿಶ್ವದ ದೊಡ್ಡ ದ್ವೀಪವಾಗಿರುವ ಗ್ರೀನ್‌ಲ್ಯಾಂಡ್‌ ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾಗಿದೆ

- ರಷ್ಯಾ, ಚೀನಾ ದೇಶಗಳು ಅಮೆರಿಕದ ಮೇಲೆ ದಾಳಿ ಮಾಡಲು ಇದು ಸುಲಭ ಮಾರ್ಗ

- ಗ್ರೀನ್‌ಲ್ಯಾಂಡ್‌ ವಶಕ್ಕೆ ಪಡೆದು ವಾಯುರಕ್ಷಣೆ ವ್ಯವಸ್ಥೆ ನಿಯೋಜನೆಗೆ ಅಮೆರಿಕ ಪ್ಲಾನ್‌

- ಅಪರೂಪದ ಖನಿಜಗಳ ಸಂಗ್ರಹಗಳು ಗ್ರೀನ್‌ಲ್ಯಾಂಡ್‌ ಇದ್ದು, ಅದರ ಮೇಲೂ ಕಣ್ಣು

ಗ್ರೀನ್‌ಲ್ಯಾಂಡ್‌ ಬೆಲೆ 63 ಲಕ್ಷ ಕೋಟಿ ರು.?

ವಾಷಿಂಗ್ಟನ್‌: ಉತ್ತರ ಅಟ್ಲಾಂಟಿಕ್‌ ಸಮುದ್ರದಲ್ಲಿರುವ ವಿಶ್ವದ ಅತಿದೊಡ್ಡ ದ್ವೀಪ ಗ್ರೀನ್‌ ಲ್ಯಾಂಡ್‌ ಅನ್ನು ಹಣಕೊಟ್ಟು ಖರೀದಿಸುವ ಪ್ರಸ್ತಾಪವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈಗಾಗಲೇ ಡೆನ್ಮಾರ್ಕ್‌ ಸರ್ಕಾರದ ಮುಂದಿಟ್ಟಿದ್ದಾರೆ. ಒಂದು ವೇಳೆ ಈ ದ್ವೀಪವನ್ನು ಹಣ ಕೊಟ್ಟು ಖರೀದಿಸುವುದೇ ಆಗಿದ್ದರೆ ಎಷ್ಟು ಹಣ ನೀಡಬೇಕಾಗಬಹುದು? ವರದಿಯೊಂದರ ಪ್ರಕಾರ ಸರಿಸುಮಾರು 63 ಲಕ್ಷ ಕೋಟಿ ರು!

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಬಾಹ್ಯಾಕಾಶದಲ್ಲೂ ಆರೋಗ್ಯ ತುರ್ತುಪರಿಸ್ಥಿತಿ : ತುರ್ತು ಕಾರ್ಯಾಚರಣೆ
ಇರಾನ್‌ನತ್ತ ಅಮೆರಿಕದ ನೌಕಾಪಡೆಯ ದಂಡು