ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು

KannadaprabhaNewsNetwork |  
Published : Dec 21, 2025, 04:00 AM ISTUpdated : Dec 21, 2025, 05:34 AM IST
Sydney

ಸಾರಾಂಶ

15 ಜನರನ್ನು ಬಲಿಪಡೆದ ಇತ್ತೀಚಿನ ಆಸ್ಟ್ರೇಲಿಯಾದ ಬೋಂಡಿ ಬೀಚ್‌ ಉಗ್ರ ದಾಳಿ, ಇದೀಗ ಜಗತ್ತಿನ ಹಲವು ದೇಶಗಳಲ್ಲಿ ಹೊಸ ವರ್ಷಾಚರಣೆಯನ್ನೇ ರದ್ದುಗೊಳಿಸುವಂತೆ ಮಾಡಿದೆ. ಹೊಸ ವರ್ಷಾಚರಣೆ ವೇಳೆ ಉಗ್ರ ದಾಳಿಯ ಶಂಕೆ ವೇಳೆ ಹಲವು ದೇಶಗಳಲ್ಲಿ ಭದ್ರತೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ

 ಸಿಡ್ನಿ/ಪ್ಯಾರಿಸ್‌/ಟೋಕಿಯೋ: 15 ಜನರನ್ನು ಬಲಿಪಡೆದ ಇತ್ತೀಚಿನ ಆಸ್ಟ್ರೇಲಿಯಾದ ಬೋಂಡಿ ಬೀಚ್‌ ಉಗ್ರ ದಾಳಿ, ಇದೀಗ ಜಗತ್ತಿನ ಹಲವು ದೇಶಗಳಲ್ಲಿ ಹೊಸ ವರ್ಷಾಚರಣೆಯನ್ನೇ ರದ್ದುಗೊಳಿಸುವಂತೆ ಮಾಡಿದೆ. ಹೊಸ ವರ್ಷಾಚರಣೆ ವೇಳೆ ಉಗ್ರ ದಾಳಿಯ ಶಂಕೆ ವೇಳೆ ಹಲವು ದೇಶಗಳಲ್ಲಿ ಭದ್ರತೆ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದರೆ, ಕೆಲ ದೇಶಗಳಲ್ಲಿ ಜನತೆ ಒಂದೆಡೆ ಸೇರಿ ನಡೆಸುವ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನೇ ರದ್ದು ಮಾಡಲಾಗಿದೆ. ಕೇವಲ ಪಟಾಕಿ ಸಿಡಿತಕ್ಕೆ ಆಚರಣೆ ಸೀಮಿತಗೊಳಿಸಲು ನಿರ್ಧರಿಸಿವೆ.

ಜನಸಂದಣಿ ಇರುವಲ್ಲಿ ಆಗಬಹುದಾದ ದಾಳಿ, ಉಗ್ರ ಕೃತ್ಯಗಳಂತಹ ದುರ್ಘಟನೆಗಳನ್ನು ತಪ್ಪಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಎಲ್ಲೆಲ್ಲಿ ಕ್ಯಾನ್ಸಲ್‌?:

ಪ್ಯಾರಿಸ್‌ (ಫ್ರಾನ್ಸ್‌):

ಪ್ರತಿ ವರ್ಷ ಡಿಸೆಂಬರ್‌ ಅಂತ್ಯದಲ್ಲಿ ಬಣ್ಣಬಣ್ಣದ ದೀಪಗಳು, ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿಕೊಂಡು, ಅಂಗಡಿ-ಮುಗ್ಗಟ್ಟು, ಅಲ್ಲಿಗೆ ಲಗ್ಗೆಯಿಡುವ ಗ್ರಾಹಕರಿಂದ ತುಂಬಿಹೋಗುವ ಇಲ್ಲಿನ ಪ್ರಸಿದ್ಧ ಚಾಂಪ್ಸ್-ಎಲಿಸೀಸ್‌ನಲ್ಲಿ ಈ ಬಾರಿ ಹೊಸ ವರ್ಷ ಬಣ್ಣ ಕಳೆದುಕೊಳ್ಳಲಿದೆ. ಕಾರಣ, ಆ ವೇಳೆ ನೆರೆಯಬಹುದಾದ ಜನಸ್ತೋಮವನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗಿರುವುದರಿಂದ, ಆಚರಣೆಯನ್ನೇ ರದ್ದು ಮಾಡಲಾಗಿದೆ. ಆರ್ಕ್ ಡಿ ಟ್ರಿಯೋಂಫ್‌ ಎಂಬಲ್ಲಿ ಎಂದಿನಂತೆ ವರ್ಣರಂಜಿತ ಪಟಾಕಿಗಳ ಪ್ರದರ್ಶನ ನಡೆಯಲಿದೆಯಾದರೂ ಅದನ್ನು ಮೊದಲೇ ರೆಕಾರ್ಡ್‌ ಮಾಡಿಡಲಾಗುವುದು ಅಥವಾ ಟೀವಿಗಳಲ್ಲಿ ನೇರಪ್ರಸಾರ ಮಾಡಲಾಗುವುದು.

ಟೋಕಿಯೋ (ಜಪಾನ್‌):

ಶಿಬುಯಾ ಎಂಬಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಆಯೋಜಿಸಲಾಗುತ್ತಿದ್ದ ಕೌಂಟ್‌ಡೌನ್‌ ಸತತ 6ನೇ ವರ್ಷವೂ (2019ರಿಂದ) ರದ್ದಾಗಿದೆ. ಜನಸಂದಣಿ, ಪಾನಮತ್ತರ ಅವಾಂತರ ಮತ್ತು ಗೂಂಡಾಗಿರಿ ತಪ್ಪಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಅಲ್ಲಿನ ಮೇಯರ್‌ ಹೇಳಿದ್ದಾರೆ. ಜತೆಗೆ ಸಿಡ್ನಿ ದಾಳಿಯೂ ಇಲ್ಲಿನ ಆಡಳಿತಕ್ಕೆ ಎಚ್ಚರಿಕೆ ಕ್ರಮ ಕೈಗೊಳ್ಳಲು ಪ್ರೇರೇಪಿಸಿದೆ.

ಬೆಲ್‌ಗ್ರೇಡ್‌ (ಸರ್ಬಿಯಾ):

ಡಿ.31ರ ನಡುರಾತ್ರಿ ಅಥವಾ ಸರ್ಬಿಯಾದ ಹೊಸ ವರ್ಷವಾದ ಜ.13-14ರಂದು ಯಾವುದೇ ಸಾರ್ವಜನಿಕ ಪಾರ್ಟಿಗಳು ಇರುವುದಿಲ್ಲ. ‘ಆಚರಣೆಗೆ ಬರುವವರಲ್ಲಿ ಅನೇಕರು 13ರಿಂದ 15 ವರ್ಷದ ನಡುವಿನವರು. ಅದರಲ್ಲೂ ಹೆಣ್ಣುಮಕ್ಕಳೇ ಹೆಚ್ಚಿರುತ್ತಾರೆ. ಕಳೆದ ವರ್ಷ ಪುಂಡರ ಗುಂಪೊಂದು ಬೇಲಿ ಹಾರಿ ಬಂದು ಸಂಗೀತಗಾರರೊಂದಿಗೆ ಹೊಡೆದಾಟ ನಡೆಸಿದ್ದರು. ಈಗ ಸಿಡ್ನಿಯಲ್ಲಿ ದಾಳಿ ನಡೆದಿದೆ. ಅದು ಪುನರಾವರ್ತನೆ ಆಗಬಾರದು’ ಎಂದು ಬೆಲ್‌ಗ್ರೇಡ್‌ನ ಮೇಯರ್‌ ಹೇಳಿದ್ದಾರೆ.

ಹಾಂಕಾಂಗ್:

ವಿಕ್ಟೋರಿಯಾ ಬಂದರಿನಲ್ಲಿ ಪ್ರತಿ ವರ್ಷ ನಡೆದುಕೊಂಡು ಬಂದಿದ್ದ ಪಟಾಕಿ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಬದಲಿಗೆ ಕೌಂಟ್‌ಡೌನ್‌ ಅನ್ನು ನಗರದಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ನ್ಯೂಯಾರ್ಕ್‌, ಆಸ್ಟ್ರೇಲಿಯಾದ ಸಿಡ್ನಿಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಸಂಭ್ರಮದ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿಲ್ಲ.

ಕಾರಣವೇನು?:

ಇತ್ತೀಚೆಗೆ ಜನ ಅಪಾರ ಸಂಖ್ಯೆಯಲ್ಲಿ ಸೇರುವ ಸ್ಥಳಗಳಲ್ಲಿ, ವಿಶೇಷವಾಗಿ ಯಾವುದಾದರೂ ಹಬ್ಬದ ಆಚರಿಸುತ್ತಿರುವಾಗ ಮಾರಣಾಂತಿಕ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ತಾಜಾ ಉದಾಹರಣೆ, ಸಿಡ್ನಿಯಲ್ಲಿ ಹನಕ್ಕಾ ಹಬ್ಬದ ವೇಳೆ ನಡೆದ ಉಗ್ರದಾಳಿ. ಉಳಿದಂತೆ ಜರ್ಮನಿ, ಫ್ರಾನ್ಸ್‌, ಬ್ರಿಟನ್‌ಗಳಲ್ಲಿ ಕ್ರಿಸ್ಮಸ್‌ ಹಾಗೂ ಹೊಸ ವರ್ಷಾಚರಣೆಯ ಹೊತ್ತಿನಲ್ಲಿ ಹಲವು ದಾಳಿಗಳು ನಡೆದಿವೆ. ಖುಷಿಯಲ್ಲಿರುವವರು ಕಣ್ಣೀರಿಡುವಂತೆ ಆಗದಿರಲಿ ಎಂಬ ಉದ್ದೇಶದಿಂದ ಸಾರ್ವಜನಿಕ ಆಚರಣೆಗಳನ್ನು ಆಯೋಜಿಸಲಾಗುತ್ತಿಲ್ಲ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಬಾಂಗ್ಲಾ ಹಿಂದು ವ್ಯಕ್ತಿ ಹತ್ಯೆ : 7 ಮಂದಿ ಸೆರೆ
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ