ಬಾಂಗ್ಲಾದಲ್ಲಿ ಮುಂದುವರೆದ ಹಿಂದೂಗಳ ಮೇಲಿನ ದೌರ್ಜನ್ಯ

KannadaprabhaNewsNetwork |  
Published : Jan 06, 2026, 02:00 AM IST
Bangladesh

ಸಾರಾಂಶ

ಆಂತರಿಕ ಸಂಘರ್ಷದಲ್ಲಿ ನಲುಗಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಸೋಮವಾರ ಹಿಂದೂ ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮತ್ತು ಹಿಂದೂ ವಿಧವಾ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾ*ರವೆಸಗಿದ ಹೀನ ಘಟನೆಗಳು ನಡೆದಿವೆ.

 ಢಾಕಾ: ಆಂತರಿಕ ಸಂಘರ್ಷದಲ್ಲಿ ನಲುಗಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಸೋಮವಾರ ಹಿಂದೂ ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮತ್ತು ಹಿಂದೂ ವಿಧವಾ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾ*ರವೆಸಗಿದ ಹೀನ ಘಟನೆಗಳು ನಡೆದಿವೆ.

5ನೇ ಹತ್ಯೆ ಪ್ರಕರಣ

ಇದು ಕಳೆದ 3 ವಾರದಲ್ಲಿ ನೆರೆಯ ದೇಶದಲ್ಲಿ ನಡೆದ ಹಿಂದೂಗಳ 5ನೇ ಹತ್ಯೆ ಪ್ರಕರಣವಾಗಿದೆ.

ಈ ಘಟನೆಗಳನ್ನು ಬಾಂಗ್ಲಾದೇಶದಲ್ಲಿನ ಹಿಂದೂ ಸಮುದಾಯ ಕಟುವಾಗಿ ಟೀಕಿಸಿದೆ ಹಾಗೂ ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಮಾತ್ರ ಮಾತನಾಡುವ ಪ್ರಗತಿಪರರು ಹಾಗೂ ಮಾನವ ಹಕ್ಕು ಕಾರ್ಯಕರ್ತರು ಈಗ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದೆ.

ಅಲ್ಲದೆ, ‘ದೂರದ ಸಿರಿಯಾ, ಗಾಜಾದಲ್ಲಿ ನಡೆಯುವ ಘಟನೆಗಳಲ್ಲಿ ಹತರಾಗುವ ವ್ಯಕ್ತಿಗಳ ಬಗ್ಗೆ ಕಂಬನಿ ಮಿಡಿಯುವ ಭಾರತದ ಪ್ರಗತಿಪರ ಚಿಂತಕರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯೆ ನಡೆದರೂ ಮೌನ ವಹಿಸಿದ್ದು ಏಕೆ?’ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತ ಹತ್ಯೆ:

ಜಶೋರ್ ಜಿಲ್ಲೆಯ ಮಣಿರಾಂಪುರ ಉಪಜಿಲ್ಲೆಯಲ್ಲಿ ರಾಣಾ ಪ್ರತಾಪ್‌ ಬೈರಾಗಿ ಎಂಬ ಪತ್ರಕರ್ತ ಮಾರುಕಟ್ಟೆಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ತೀವ್ರತೆಗೆ ಬೈರಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅರೋಪಿಗಳ ಪತ್ತೆಗೆ ಶೋಧ ಆರಂಭಿಸಿದ್ದಾರೆ. ಬೈರಾಗಿ, ಬಾಂಗ್ಲಾದೇಶ್‌ ಡೈಲಿ ಎಂಬ ಪತ್ರಿಕೆಯ ಹಂಗಾಮಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಬೈರಾಗಿ ಹತ್ಯೆಯೊಂದಿಗೆ ಕಳೆದ 3 ವಾರದ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಮತಾಂಧರ ದಾಳಿಗೆ ಬಲಿಯಾದ ಹಿಂದೂಗಳ ಸಂಖ್ಯೆ 5ಕ್ಕೆ ಏರಿದೆ. ಈ ಮೊದಲು ದೀಪು ಚಂದ್ರದಾಸ್‌, ಅಮೃತ್ ಮೊಂಡಲ್, ಬಜೇಂದ್ರ ಬಿಸ್ವಾಸ್‌, ಖೊಕೋನ್‌ ದಾಸ್‌ರನ್ನು ಹತ್ಯೆಗೈಯ್ಯಲಾಗಿತ್ತು.

ಹಿಂದು ವಿಧವೆ ಮೇಲೆ ಅತ್ಯಾ*ರ:

ಕಾಲಿಗಂಜ್‌ ಎಂಬಲ್ಲಿ 40 ವರ್ಷದ ಹಿಂದೂ ವಿಧವೆಯೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾ*ರ ನಡೆಸಿದ್ದಲ್ಲದೆ, ಆಕೆಯನ್ನು ಮರಕ್ಕೆ ಕಟ್ಟಿ ಕೂದಲು ಕತ್ತರಿಸಿ ಚಿತ್ರಹಿಂಸೆ ನೀಡಿದ್ದಾರೆ.

ಸಂತ್ರಸ್ತ ಮಹಿಳೆಯು ಶಾಹೀನ್‌ ಮತ್ತು ಆತನ ಸಹೋದರನಿಂದ 0.03 ಎಕರೆ ಭೂಮಿ ಮತ್ತು ಎರಡಂತಸ್ತಿನ ಮನೆಯನ್ನು 14 ಲಕ್ಷ ರು.ಗೆ ಖರೀದಿಸಿದ್ದರು. ಆ ಬಳಿಕ ಅವರಿಬ್ಬರಿಂದ ಆಕೆಗೆ ಕಿರುಕುಳ ಆರಂಭವಾಗಿತ್ತು. ಶನಿವಾರ ಏಕಾಏಕಿ ಮಹಿಳೆಯ ಮನೆಯೊಳಗೆ ನುಗ್ಗಿದ ಶಾಹೀನ್‌ ಮತ್ತು ಹಸನ್‌ ಆಕೆಯ ಮೇಲೆ ಅತ್ಯಾ*ರ ಎಸಗಿದ್ದಾರೆ.  

ಬಳಿಕ 37,000 ರು. ಕೊಡುವಂತೆ ಒತ್ತಾಯಿಸಿದರು. ಆಕೆ ನಿರಾಕರಿಸಿದಾಗ ಸಂಬಂಧಿಕರ ಮುಂದೆಯೇ ಎಳೆದೊಯ್ದ ಮರವೊಂದಕ್ಕೆ ಕಟ್ಟಿ ಕೂದಲನ್ನು ಕತ್ತರಿಸಿ, ಆಕೆ ಪ್ರಜ್ಞೆತಪ್ಪುವ ವರೆಗೂ ಹಿಂಸಿಸಿದ್ದಾರೆ. ಅದರ ವಿಡಿಯೋವನ್ನೂ ಚಿತ್ರಿಸಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆಕೆ ಕಾಲಿಗಂಜ್ ಪೊಲೀಸ್ ಠಾಣೆಯನ್ನು ದೂರು ದಾಖಲಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

‘ಮೇಡ್‌ ಇನ್‌ ಚೀನಾ’ ಅಸ್ತ್ರಗಳು ಈಗ ವೆನಿಜುವೆಲಾದಲ್ಲೂ ಫೇಲ್‌!
ನಮ್ಮ ಯುದ್ಧ ವಿಮಾನಕ್ಕೆ ಭಾರೀ ಡಿಮ್ಯಾಂಡ್‌, ಸಾಲ ಬೇಡ : ಪಾಕ್‌