ಜಪಾನ್‌ನ ನಿಹೋನ್‌ ಹಿಡನ್ಕ್ಯೋ ಸಂಘಟನೆಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ನೊಬೆಲ್‌ ಶಾಂತಿ ಪುರಸ್ಕಾರ

KannadaprabhaNewsNetwork | Updated : Oct 13 2024, 04:08 AM IST

ಸಾರಾಂಶ

1945ರಲ್ಲಿ ಅಮೆರಿಕ ನಡೆಸಿದ ಪರಮಾಣು ಬಾಂಬ್‌ ದಾಳಿಯಲ್ಲಿ ಬದುಕುಳಿದು, ಬಳಿಕ ಸಂಕಷ್ಟದ ನಡುವೆಯೂ ಅಣ್ವಸ್ತ್ರ ಬಳಕೆ ವಿರುದ್ಧ ಹೋರಾಡುತ್ತಿರುವ ಜಪಾನ್‌ನ ನಿಹೋನ್‌ ಹಿಡನ್ಕ್ಯೋ ಸಂಘಟನೆಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ನೊಬೆಲ್‌ ಶಾಂತಿ ಪುರಸ್ಕಾರ ಪ್ರಕಟಿಸಲಾಗಿದೆ.

ಓಸ್ಲೋ: 1945ರಲ್ಲಿ ಅಮೆರಿಕ ನಡೆಸಿದ ಪರಮಾಣು ಬಾಂಬ್‌ ದಾಳಿಯಲ್ಲಿ ಬದುಕುಳಿದು, ಬಳಿಕ ಸಂಕಷ್ಟದ ನಡುವೆಯೂ ಅಣ್ವಸ್ತ್ರ ಬಳಕೆ ವಿರುದ್ಧ ಹೋರಾಡುತ್ತಿರುವ ಜಪಾನ್‌ನ ನಿಹೋನ್‌ ಹಿಡನ್ಕ್ಯೋ ಸಂಘಟನೆಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ನೊಬೆಲ್‌ ಶಾಂತಿ ಪುರಸ್ಕಾರ ಪ್ರಕಟಿಸಲಾಗಿದೆ.

1945ರ ಆ.9ರಂದು ಅಮೆರಿಕ ಹಿರೋಷಿಮಾ ಮತ್ತು ನಾಗಾಸಾಕಿ ನಗರದ ಮೇಲೆ ನಡೆಸಿದ ಎರಡು ಪರಮಾಣು ಬಾಂಬ್‌ ದಾಳಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಬದುಕುಳಿದ ವ್ಯಕ್ತಿಗಳು ಸೇರಿ ನಿಹೋನ್‌ ಹಿಡನ್ಕ್ಯೋ ಎಂಬ ಸಂಘಟನೆ ಸ್ಥಾಪಿಸಿ ಅದರ ಮೂಲಕ ಜಾಗತಿಕ ಮಟ್ಟದಲ್ಲಿ ಅಣ್ವಸ್ತ್ರ ಬಳಕೆ ವಿರುದ್ಧ ಹೋರಾಡುತ್ತಿದ್ದಾರೆ.

ಅಣ್ವಸ್ತ್ರ ಬಳಕೆ ಮೇಲಿನ ನಿಷೇಧ ಒತ್ತಡಕ್ಕೆ ಒಳಗಾಗಿರುವ ಸಮಯದಲ್ಲಿ 1956ರಲ್ಲಿ ಸ್ಥಾಪನೆಯಾದ ಇಂಥ ಸಂಘಟನೆಯ ಹೋರಾಟ ಇನ್ನಷ್ಟು ಹೆಚ್ಚು ಅರ್ಥಪೂರ್ಣವಾಗಿದೆ. ಹೀಗಾಗಿ ಸಂಘಟನೆಯನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಹೇಳಿದೆ.

ಇತ್ತೀಚೆಗೆ ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾ ಅಣ್ವಸ್ತ್ರ ದಾಳಿಯ ಆತಂಕ ಮತ್ತು ಇರಾನ್‌ ಪರಮಾಣು ಘಟಕಗಳ ಮೇಲೆ ಇಸ್ರೇಲ್‌ ದಾಳಿಯ ಭೀತಿ ಎದುರಾಗಿರುವ ಹೊತ್ತಿನಲ್ಲೇ ಅಣ್ವಸ್ತ್ರ ದಾಳಿಯ ವಿರುದ್ಧದ ಹೋರಾಟಕ್ಕೆ ನೊಬೆಲ್ ಶಾಂತಿ ಪ್ರಕಟಿಸಿರುವುದು ಗಮನಾರ್ಹ.

ಈ ಹಿಂದೆ 2017ರಲ್ಲಿ ‘ದ ಇಂಟರ್‌ ನ್ಯಾಷನಲ್‌ ಕ್ಯಾಂಪೇನ್‌ ಟು ಅಬಾಲಿಷ್‌ ನ್ಯೂಕ್ಲಿಯರ್‌ ವೆಪನ್ಸ್‌’ ಮತ್ತು 1995ರಲ್ಲಿ ‘ಜೋಸೆಫ್‌ ರೋಟ್‌ಬಾಲ್ಟ್‌ ಆ್ಯಂಡ್‌ ಪಗ್‌ವಾಷ್‌ ಸಮ್ಮೇಳನ’ಗಳು ಕೂಡಾ ತಮ್ಮ ಅಣ್ವಸ್ತ್ರ ವಿರೋಧಿ ಹೋರಾಟಕ್ಕಾಗಿ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದವು.

ನಾಳೆ ಅರ್ಥಶಾಸ್ತ್ರ ನೊಬೆಲ್‌ ಪ್ರಕಟ

ಇದರೊಂದಿಗೆ ವೈದ್ಯಕೀಯ, ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಶಾಂತಿ ಪುರಸ್ಕಾರಗಳನ್ನು ಪ್ರಕಟಿಸಿದಂತಾಗಿದ್ದು, ಸೋಮವಾರದ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಪ್ರಕಟದೊಂದಿಗೆ ಈ ವರ್ಷದ ಘೋಷಣೆಗಳು ಮುಕ್ತಾಯವಾಗಲಿದೆ.

Share this article