ತನ್ನ ಭಯೋತ್ಪಾದಕ ನೆಲೆಯ ಮೇಲೆ ದಾಳಿ ಮಾಡಿದ್ದ ಇರಾನ್‌ ಮೇಲೆ ಪ್ರತೀಕಾರ ತೀರಿಸಿಕೊಂಡ ಪಾಕಿಸ್ತಾನ

KannadaprabhaNewsNetwork |  
Published : Jan 19, 2024, 01:50 AM ISTUpdated : Jan 19, 2024, 09:38 AM IST
Iran_Pak

ಸಾರಾಂಶ

ತನ್ನ ಮೇಲೆ ಇರಾನ್‌ ನಡೆಸಿದ ಸರ್ಜಿಕಲ್‌ ದಾಳಿಗೆ ಪಾಕ್‌ ಸೇನೆ ಪ್ರತೀಕಾರವಾಗಿ ಕಿಲ್ಲರ್‌ ಡ್ರೋನ್‌, ರಾಕೆಟ್‌ ಬಳಸಿ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಪರಿಸ್ಥಿತಿ ಹದಗೆಟ್ಟಿದೆ. ಈ ನಡುವೆ ಮಧ್ಯಸ್ಥಿಕೆಗೆ ಚೀನಾ ಉತ್ಸುಕವಾಗಿದೆ.

ಪಿಟಿಐ ಇಸ್ಲಾಮಾಬಾದ್‌/ ಬೀಜಿಂಗ್‌

ತನ್ನ ಗಡಿಯೊಳಗಿರುವ ಭಯೋತ್ಪಾದಕ ನೆಲೆಗಳ ಮೇಲೆ ಇರಾನ್‌ ನಡೆಸಿದ ಸರ್ಜಿಕಲ್‌ ದಾಳಿಗೆ ಕ್ರುದ್ಧನಾಗಿರುವ ಪಾಕಿಸ್ತಾನದ ಸೇನೆ ಪ್ರತೀಕಾರಾತ್ಮಕವಾಗಿ ಗುರುವಾರ ಇರಾನ್‌ನ ಗಡಿಯೊಳಗೆ ಕಿಲ್ಲರ್‌ ಡ್ರೋನ್‌ ಹಾಗೂ ರಾಕೆಟ್‌ ಬಳಸಿ ‘ನಿಖರ ದಾಳಿ’ ನಡೆಸಿದೆ. 

ದಾಳಿಯಲ್ಲಿ 9 ಮಂದಿ ಮೃತರಾಗಿದ್ದಾರೆ ಎಂದು ಹೇಳಲಾಗಿದೆ.ಇದರ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಎರಡೂ ದೇಶಗಳಿಗೆ ಮಿತ್ರನಾಗಿರುವ ಚೀನಾ ಮಧ್ಯಸ್ಥಿಕೆ ವಹಿಸಿ ಶಾಂತಿ ಸ್ಥಾಪನೆಗೆ ಸಿದ್ಧವಿರುವುದಾಗಿ ಪ್ರಕಟಿಸಿದೆ. 

ಈ ನಡುವೆ ತನ್ನ ದೇಶದಲ್ಲಿನ ಪಾಕ್‌ ರಾಯಭಾರಿಯನ್ನು ಕರೆಸಿಕೊಂಡಿರುವ ಇರಾನ್‌ ಸರ್ಕಾರ, ದಾಳಿ ಕುರಿತು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.ಮಂಗಳವಾರ ರಾತ್ರಿ ಪಾಕಿಸ್ತಾನದ ಗಡಿಯೊಳಗಿರುವ ಬಲೂಚಿಸ್ತಾನದಲ್ಲಿ ಜೈಷ್‌-ಎ-ಅದ್ಲ್‌ ಎಂಬ ಉಗ್ರ ಸಂಘಟನೆಯ ಎರಡು ಅಡಗುದಾಣಗಳ ಮೇಲೆ ಇರಾನ್‌ ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ನಡೆಸಿತ್ತು.

ಅದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಪಾಕಿಸ್ತಾನ ಸರ್ಕಾರ ಬುಧವಾರ ಇರಾನ್‌ನಿಂದ ತನ್ನ ರಾಯಭಾರಿಯನ್ನು ವಾಪಸ್‌ ಕರೆಸಿಕೊಂಡಿತ್ತು. 

ಬಳಿಕ ಗುರುವಾರ ಮುಂಜಾನೆ ಇರಾನ್‌ ಮೇಲೆ ಸೇಡು ತೀರಿಸಿಕೊಳ್ಳಲು ಪಾಕ್‌ ಸೇನೆ ಕಿಲ್ಲರ್‌ ಡ್ರೋನ್‌, ರಾಕೆಟ್‌ ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು ಬಳಸಿ ಇರಾನ್‌ ಗಡಿಯೊಳಗಿರುವ ಸಿಯೆಸ್ತಾನ್‌-ಒ-ಬಲೂಚಿಸ್ತಾನ್‌ ಪ್ರದೇಶದ ಮೇಲೆ ನಿಖರ ದಾಳಿ ನಡೆಸಿದೆ. 

ಈ ಕಾರ್ಯಾಚರಣೆಗೆ ಪಾಕಿಸ್ತಾನವು ‘ಮಾರ್ಗ್‌ ಬಾರ್‌ ಸರಮಾಚರ್‌’ ಎಂದು ಹೆಸರಿಟ್ಟಿದೆ. ದಾಳಿಯಲ್ಲಿ ಇರಾನ್‌ನ ಒಂಭತ್ತು ಉಗ್ರರು ಮೃತಪಟ್ಟಿರುವುದಾಗಿ ಪಾಕ್‌ ಹೇಳಿಕೊಂಡಿದೆ.

ಆದರೆ, ದಾಳಿಯಲ್ಲಿ ಮೂವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಮೃತಪಟ್ಟಿದ್ದು, ಅವರ್ಯಾರೂ ಇರಾನ್‌ ಪ್ರಜೆಗಳಲ್ಲ ಎಂದು ಇರಾನ್‌ ಸರ್ಕಾರ ತಿಳಿಸಿದೆ.

ಗುರುವಾರ ಬೆಳಗಿನ ಜಾವ ನಾಲ್ಕು ಗಂಟೆಯ ಸಮಯದಲ್ಲಿ ಇರಾನ್‌ನ ಗಡಿಯಲ್ಲಿರುವ ಅಲಿ ರೇಜಾ ಮರ್ಹಾಮಾಟಿ ಎಂಬ ಹಳ್ಳಿಯ ಮೇಲೆ ಪಾಕಿಸ್ತಾನದ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. 

ತನ್ನ ಉಗ್ರರ ಮೇಲೇ ಪಾಕ್‌ ದಾಳಿ:‘ಇರಾನ್‌ ಗಡಿಯೊಳಗೆ ಸರಮಾಚರ್‌ ಎಂದು ಕರೆದುಕೊಳ್ಳುವ ಪಾಕಿಸ್ತಾನ ಮೂಲದ ಉಗ್ರರು ಸುರಕ್ಷಿತ ಅಡಗುದಾಣಗಳನ್ನು ನಿರ್ಮಿಸಿಕೊಂಡು ಪಾಕ್‌ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂದು ಇರಾನ್‌ ಬಳಿ ಸಾಕಷ್ಟು ಸಲ ಪಾಕ್‌ ಸರ್ಕಾರ ಕಳವಳ ವ್ಯಕ್ತಪಡಿಸಿತ್ತು. 

ಆದರೆ ಇರಾನ್‌ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ನಮ್ಮ ದೇಶದ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಲು ಉಗ್ರರ ಮೇಲೆ ದಾಳಿ ನಡೆಸಿದ್ದೇವೆ’ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ತಿಳಿಸಿದೆ.

ಸಂಧಾನಕ್ಕೆ ಸಿದ್ಧ ಎಂದ ಚೀನಾ:ಈಗಾಗಲೇ ಇಸ್ರೇಲ್‌, ಪ್ಯಾಲೆಸ್ತೀನ್‌, ಯೆಮನ್‌ ಹಾಗೂ ಇರಾನ್‌ ನಡುವಿನ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಅಶಾಂತಿ ಉಂಟಾಗಿದೆ.
ಈಗ ಪಾಕ್‌ ಹಾಗೂ ಇರಾನ್‌ ನಡುವೆ ಸಂಘರ್ಷ ತೀವ್ರಗೊಂಡರೆ ಇನ್ನಷ್ಟು ರಕ್ತಪಾತ ಉಂಟಾಗಬಹುದು ಎಂದು ಕಳವಳ ಚೀನಾ ಸರ್ಕಾರ ವ್ಯಕ್ತಪಡಿಸಿದೆ.

ತಾನು ಪಾಕ್‌ ಹಾಗೂ ಇರಾನ್‌ ನಡುವೆ ಸಂಧಾನ ನಡೆಸಲು ಸಿದ್ಧನಿದ್ದೇನೆ ಎಂದು ಗುರುವಾರ ತಿಳಿಸಿದೆ. ಪಾಕ್‌ ಹಾಗೂ ಇರಾನ್‌ ಎರಡೂ ದೇಶಕ್ಕೆ ಚೀನಾ ಮಿತ್ರ ರಾಷ್ಟ್ರವಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಭಾರತ-ಬಾಂಗ್ಲಾ ರಾಜತಾಂತ್ರಿಕ ಸಮರ
15 ವರ್ಷ ಬಳಿಕ ಜಪಾನ್‌ನಲ್ಲಿ ವಿಶ್ವದ ದೊಡ್ಡ ಅಣುವಿದ್ಯುತ್‌ ಸ್ಥಾವರಕ್ಕೆ ಮತ್ತೆ ಚಾಲನೆ