ಇಸ್ಲಾಮಾಬಾದ್: ತೆಹ್ರೀಕ್ ಎ ತಾಲಿಬಾನ್ ಸಂಘಟನೆಯ ಬಾಂಬ್ ಕಾರ್ಖಾನೆ ಹಾಗೂ ಉಗ್ರ ನೆಲೆಗಳಿವೆ ಎಂದು ಶಂಕಿಸಿ ತನ್ನದೇ ಭೂಪ್ರದೇಶವಾದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮೇಲೆ ಪಾಕಿಸ್ತಾನ ವಾಯುಪಡೆ ಸೋಮವಾರ ವೈಮಾನಿಕ ದಾಳಿ ನಡೆಸಿದೆ. ಈ ವೇಳೆ ಉಗ್ರರ ಬದಲು ಮಕ್ಕಳು, ಮಹಿಳೆಯರು ಸೇರಿದಂತೆ ಕನಿಷ್ಠ 30 ನಾಗರಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಭಾನುವಾರ ತಡರಾತ್ರಿ 2 ಗಂಟೆಗೆ ಪಾಕಿಸ್ತಾನದ ಯುದ್ಧವಿಮಾನಗಳು 8 ಎಲ್‌ಎಸ್-6 ಬಾಂಬ್‌ಗಳನ್ನು ತಿರಾಹ ಕಣಿವೆಯಲ್ಲಿರುವ ಮಾತ್ರೆ ದಾರಾ ಹಳ್ಳಿಯ ಮೇಲೆ ಸ್ಫೋಟಿಸಿದ ಕಾರಣ ಭಾರೀ ಸಾವು ನೋವು ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಸ್ಥಳೀಯ ಆಡಳಿತ ಪಾಕ್ ವೈಮಾನಿಕ ದಾಳಿಯನ್ನು ನಿರಾಕರಿಸಿದ್ದು, ಪಾಕಿಸ್ತಾನಿ ತಾಲಿಬಾನ್ ಒಡೆತನದ ಕಾಂಪೌಂಡ್‌ನಲ್ಲಿ ಸಂಗ್ರಹಿಸಲಾದ ಸ್ಫೋಟಕ ವಸ್ತುಗಳು ಸಿಡಿದಿದ್ದರಿಂದ ಘಟನೆ ಸಂಭವಿಸಿದೆ ಎಂದಿದೆ. ಸ್ಥಳೀಯರು ಮಾತ್ರ ವೈಮಾನಿಕ ದಾಳಿಯಿಂದಲೇ ಘಟನೆ ನಡೆದಿದ್ದಾಗಿ ತಿಳಿಸಿದ್ದಾರೆ.
ಉಗ್ರಗಾಮಿಗಳ ತಾಣ:
ಈ ಸ್ಥಳ ಆಫ್ಘನ್ ಉಗ್ರರು, ತೆಹ್ರೀಕ್ ಎ ತಾಲಿಬಾಣ್ ಸೇರಿದಂತೆ ಉಗ್ರಗಾಮಿಗಳ ಆಶ್ರಯತಾಣವಾಗಿತ್ತು. ಸುಧಾರಿತ ಬಾಂಬ್ ಉತ್ಪಾದನೆ ಮತ್ತು ಸ್ನೈಪರ್ ತರಬೇತಿಯ ಕೇಂದ್ರವಾಗಿತ್ತು. ಉಗ್ರಗಾಮಿಗಳು ನಾಗರಿಕ ಪ್ರದೇಶದೊಳಗೆ ವಾಸವಾಗಿದ್ದು, ಮಾನವ ಗುರಾಣಿಯಂತೆ ಅವರನ್ನು ಬಳಸುತ್ತಿದ್ದರು ಹಾಗೂ ಸ್ಫೋಟಕಗಳನ್ನು ತಯಾರಿಸುತ್ತಿದ್ದರು ಎಂದು ಗೊತ್ತಾಗಿದೆ, ಇವರನ್ನು ಗುರಿಯಾಗಿಸಿ ಈ ದಾಳಿ ನಡೆದಿತ್ತು ಎನ್ನಲಾಗಿದೆ.
ಖೈಬರ್ ಪಖ್ತುಂಖ್ವಾ ಪೊಲೀಸರ ಪ್ರಕಾರ, ಈ ವರ್ಷ ಜನವರಿಯಿಂದ ಆಗಸ್ಟ್‌ವರೆಗೆ 605 ಉಗ್ರ ಕೃತ್ಯಗಳು ನಡೆದಿವೆ. ಕನಿಷ್ಠ 138 ನಾಗರಿಕರು, 79 ಪಾಕಿಸ್ತಾನಿ ಪೊಲೀಸರು ಸಾವನ್ನಪ್ಪಿದ್ದಾರೆ. ಭಾರತದ ಆಪರೇಷನ್ ಸಿಂದೂರದಿಂದ ಬೆಚ್ಚಿದ ಜೈಷ್, ಹಿಜ್ಬುಲ್ ಮುಜಾಹಿದೀನ್‌ನಂತಹ ಉಗ್ರ ಸಂಘಟನೆಗಳು ಪಾಕ್ ಆಕ್ರಮಿತ ಕಾಶ್ಮೀರದಿಂದ ಕಾಲ್ಕಿತ್ತು, ಖೈಬರ್ ಪಖ್ತುಂಖ್ವಾದಲ್ಲಿ ನೆಲೆಯೂರುತ್ತಿದ್ದಾರೆ ಎಂದೂ ತಿಳಿದುಬಂದಿದೆ.
ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ತೆಹ್ರೀಕ್ ಎ ತಾಲಿಬಾನ್ ಸಂಘಟನೆಯ ಬಾಂಬ್ ಕಾರ್ಖಾನೆ, ಉಗ್ರ ನೆಲೆಗಳಿಗೆ ಎಂದು ಪಾಕ್ ಸೇನೆಗೆ ಶಂಕೆ
ಈ ಪ್ರಾಂತ್ಯದಲ್ಲಿ ಈ ವರ್ಷ ಆಗಸ್ಟ್‌ವರೆಗೆ 605 ಉಗ್ರ ಕೃತ್ಯಗಳು ನಡೆದಿದ್ದು, ಕನಿಷ್ಠ 138 ನಾಗರಿಕರು, 79 ಪಾಕ್ ಪೊಲೀಸರು ಸಾವನ್ನಪ್ಪಿದ್ದಾರೆ
ಈ ಪ್ರದೇಶದಲ್ಲಿ ಜನವಸತಿ ಪ್ರದೇಶಗಳಲ್ಲೇ ಇದ್ದ ಉಗ್ರರು ಜನರನ್ನು ಮಾನವ ಗುರಾಣಿಯಾಗಿ ಬಳಸಿ ಪಾಕ್ ಸೇನೆ ಮೇಲೆ ದಾಳಿ ನಡೆಸುತ್ತಿದ್ದರು
ಈ ಹಿನ್ನೆಲೆಯಲ್ಲಿ ಶಂಕಿತ ಪ್ರದೇಶದ ಮೇಲೆ ಪಾಕ್ ಸೇನೆಯಿಂದ ವೈಮಾನಿಕ ದಾಳಿ. ಈ ವೇಳೆ ಉಗ್ರರ ಬದಲು 30 ಅಮಾಯಕ ನಾಗರಿಕರು ಬಲಿ