ಕರಾಚಿ: ಇತ್ತೀಚೆಗೆ ಪಾಕ್ ನಟಿ ಹುಮೈರಾ ಅಸ್ಗರ್‌ರ ಶವ ಅವರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದ್ದು, ತನಿಖೆ ಹಾಗೂ ಶವಪರೀಕ್ಷೆ ವೇಳೆ ಆಕೆ 9 ತಿಂಗಳ ಹಿಂದೆಯೇ ಮೃತಪಟ್ಟಿದ್ದರು ಎಂಬ ಬೆಚ್ಚಿಬೀಳಿಸುವ ವಿಷಯ ಈಗ ಬೆಳಕಿಗೆ ಬಂದಿದೆ.
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ‘ಆಕೆಯ ದೇಹವು ಗುರುತು ಸಿಗಲಾರದಷ್ಟು ಕೊಳೆತು ಹೋಗಿತ್ತು. ಆದಕಾರಣ ಡಿಎನ್‌ಎ ಪರೀಕ್ಷೆ ನಡೆಸಿ ಧೃಡಪಡಿಸಿಕೊಳ್ಳಲಾಯಿತು’ ಎಂದಿದ್ದಾರೆ.
ಹುಮೈರಾರನ್ನು ಕೊನೆಯ ಸಲ ಕಳೆದ ವರ್ಷ ಸೆಪ್ಟೆಂಬರ್ ಅಥವಾ ಆಕ್ಟೋಬರ್‌ನಲ್ಲಿ ನೋಡಿದ್ದಾಗಿ ಅವರ ನೆರೆಹೊರೆಯವರು ಹೇಳಿದ್ದಾರೆ. ಅವರ ಕರೆ ವಿವರಗಳನ್ನು ಪರಿಶೀಲಿಸಿದಾಗ, ಕೊನೆಯ ಕರೆಯನ್ನು ಅಕ್ಟೋಬರ್‌ನಲ್ಲಿ ಮಾಡಿದ್ದುದು ಪತ್ತೆಯಾಗಿದೆ.
ಅದೇ ತಿಂಗಳಿಂದ, ಬಿಲ್ ಪಾವತಿಸದ ಕಾರಣ ಅವರ ಮನೆಗೆ ವಿದ್ಯುತ್ ಸರಬರಾಜನ್ನೂ ಕಡಿತಗೊಳಿಸಲಾಗಿತ್ತು. ಆಗಲೇ ಆಕೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಹುಮೈರಾ ವಾಸವಿದ್ದ ಮಹಡಿ ಅಕ್ಕಪಕ್ಕದ ಮನೆಗಳೆಲ್ಲ ಖಾಲಿ ಇದ್ದವು. ಹೀಗಾಗಿ ದೇಹದ ದುರ್ಗಂಧ ಯಾರಿಗೂ ಬಡಿದಿಲ್ಲ.
ಹೆಚ್ಚಾಗಿ ಶವದ ಕೊಳೆತ ವಾಸನೆ 2 ತಿಂಗಳು ಮಾತ್ರ ಇರುವ ಕಾರಣ ನಂತರ ಅದು ಯಾರ ಅರಿವಿಗೂ ಬಂದಿಲ್ಲ ಎಂದು ಹೇಳಲಾಗಿದೆ. ಈಗ ಆಕೆ ಮನೆ ಬಾಡಿಗೆ ಪಾವತಿಸಿಲ್ಲ ಎಂದು ಮನೆ ಮಾಲೀಕ ದೂರಿದ ಕಾರಣ ಮನೆ ಬಾಗಿಲು ಒಡೆಯಲಾಗಿದೆ. ಆಗ ಶವ ಪತ್ತೆ ಆಗಿದೆ.7 ವರ್ಷಗಳ ಹಿಂದೆ ಲಾಹೋರ್‌ನಿಂದ ಕರಾಚಿಗೆ ಬಂದಿದ್ದ ಹುಮೈರಾ, ಹಲವು ಟೀವಿ ಕಾರ್ಯಕ್ರಮಗಳು, ಸರಣಿಗಳನ್ನು ನಟಿಸಿದ್ದರು. 2023ರಲ್ಲಿ ಅತ್ಯುತ್ತಮ ಉದಯೋನ್ಮುಖ ಪ್ರತಿಭೆ ಪ್ರಶಸ್ತಿಯನ್ನೂ ಪಡೆದಿದ್ದರು.