ಟಿಯಾನ್‌ಜಿನ್: ಎಷ್ಟು ಸಾಧ್ಯವೋ ಅಷ್ಟು ಬೇಗ ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಿ, ಶಾಂತಿಸ್ಥಾಪನೆ ಮಾಡಬೇಕೆಂಬುದು ಮಾನವೀಯತೆಯ ಕರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲಿ ಮನವಿ ಮಾಡಿದ್ದಾರೆ.
ರಷ್ಯಾದಿಂದ ತೈಲ ಖರೀದಿ ವಿರೋಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಕಠಿಣ ತೆರಿಗೆ ಹೇರಿ ಸಂಬಂಧ ಹಳಸಿರುವ ನಡುವೆಯೇ, ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಉಕ್ರೇನ್ ಹಾಗೂ ರಷ್ಯಾದ ನಡುವಿನ ಸಂಘರ್ಷ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು.
ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪಿಸಿ:
ಉಕ್ರೇನ್ ಜತೆಗಿನ ಯುದ್ಧವನ್ನು ಶೀಘ್ರದಲ್ಲಿ ಮುಕ್ತಾಯ ಮಾಡಬೇಕೆಂದು ಆಗ್ರಹಿಸಿದ ಮೋದಿ, ‘ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ಇತ್ತೀಚೆಗೆ ಕೈಗೊಂಡ ಎಲ್ಲ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಸಂಬಂಧಿತ ಮುಖಗಳೂ ರಚನಾತ್ಮಕವಾಗಿ ಮುಂದುವರಿಯುತ್ತವೆ ಎಂದು ಆಶಿಸುತ್ತೇವೆ. ಆದಷ್ಟು ಬೇಗ ಸಂಘರ್ಷವನ್ನು ಅಂತ್ಯಗೊಳಿಸುವುದು ಹಾಗೂ ಉಕ್ರೇನ್‌ನಲ್ಲಿ ಶಾಶ್ವತವಾದ ಶಾಂತಿಯನ್ನು ಸ್ಥಾಪಿಸುವುದು ಮಾನವತೆಯ ಕರೆಯಾಗಿದೆ’ ಎಂದರು.
ಭಾರತಕ್ಕೆ ಬರಲು ಪುಟಿನ್‌ಗೆ ಆಹ್ವಾನ:
ಇದೇ ವೇಳೆ, ಭಾರತಕ್ಕೆ ಬರುವಂತೆ ರಷ್ಯಾ ಅಧ್ಯಕ್ಷ ಪುಟಿನ್‌ರಿಗೆ ಆಹ್ವಾನ ನೀಡಿದ ಮೋದಿ, ‘ಭಾರತ ಮತ್ತು ರಷ್ಯಾ ಕಷ್ಟಕರ ಸಂದರ್ಭಗಳಲ್ಲೂ ಹೆಗಲಿಗೆ ಹೆಗಲು ಕೊಟ್ಟು ಮುಂದೆ ಹೆಜ್ಜೆ ಹಾಕಿವೆ. ಜಾಗತಿಕ ಶಾಂತಿಗಾಗಿ ನಮ್ಮಿಬ್ಬರ ನಡುವಿನ ಆಪ್ತ ಸಂಬಂಧ ಅತ್ಯಗತ್ಯ. ಭಾರತ ಪುಟಿನ್‌ರನ್ನು ಬರಮಾಡಿಕೊಳ್ಳಲು ಕಾಯುತ್ತಿದೆ’ ಎಂದರು.