ಭಾರತ ವಿರೋಧಿ ಮಾಲ್ಡೀವ್ಸ್‌ ಅಧ್ಯಕ್ಷಗೆ ಈಗ ಪದಚ್ಯುತಿ ಭೀತಿ

KannadaprabhaNewsNetwork | Updated : Jan 30 2024, 09:01 AM IST

ಸಾರಾಂಶ

ಭಾರತ ವಿರೋಧಿ ಹಾಗೂ ಚೀನಾದ ಪರ ನಿಲುವು ತಾಳಿರುವ ಮಾಲ್ಡೀವ್ಸ್‌ನ ವಿವಾದಿತ ಅಧ್ಯಕ್ಷ ಮೊಹಮ್ಮದ್‌ ಮುಯಿಝುಗೆ ಇದೀಗ ಪದಚ್ಯುತಿಯ ಭೀತಿ ಎದುರಾಗಿದೆ.

ನವದೆಹಲಿ: ಭಾರತ ವಿರೋಧಿ ಹಾಗೂ ಚೀನಾದ ಪರ ನಿಲುವು ತಾಳಿರುವ ಮಾಲ್ಡೀವ್ಸ್‌ನ ವಿವಾದಿತ ಅಧ್ಯಕ್ಷ ಮೊಹಮ್ಮದ್‌ ಮುಯಿಝುಗೆ ಇದೀಗ ಪದಚ್ಯುತಿಯ ಭೀತಿ ಎದುರಾಗಿದೆ. 

ದೇಶದ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಪ್ರಮುಖ ಪ್ರತಿಪಕ್ಷ ಮಾಲ್ಡೀವಿಯನ್‌ ಡೆಮಾಕ್ರೆಟಿಕ್‌ ಪಾರ್ಟಿ (ಎಂಡಿಪಿ) ಸದಸ್ಯರು ಈಗಾಗಲೇ ಅಧ್ಯಕ್ಷರ ವಿರುದ್ಧ ವಾಗ್ದಂಡನೆ ಮಸೂದೆ ಮಂಡಿಸಲು ಅಗತ್ಯವಿರುವಷ್ಟು ಸಹಿ ಸಂಗ್ರಹಿಸಿದ್ದಾರೆ.

ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಹೊಡೆದಾಟ ನಡೆದ ಮರುದಿನವೇ ಈ ಬೆಳವಣಿಗೆ ನಡೆದಿದೆ. ಒಟ್ಟು 34 ಸಂಸದರು ಅಧ್ಯಕ್ಷರ ವಾಗ್ದಂಡನೆ ಮಸೂದೆ ಮಂಡನೆಗೆ ಸಹಿ ಮಾಡಿದ್ದಾರೆ. 

ವಾಗ್ದಂಡನೆ ನಡೆದರೆ ಅವರು ಅಧಿಕಾರ ಬಿಡಬೇಕಾಗುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಮಾಲ್ಡೀವ್ಸ್‌ನ ವಿಪಕ್ಷಗಳು ಭಾರತಸ್ನೇಹಿ ನಿಲುವು ಹೊಂದಿವೆ. 

ಆದರೆ ಮುಯಿಝು ಅಧ್ಯಕ್ಷರಾದ ಬಳಿಕ ಭಾರತ ವಿರೋಧಿ ವಿದೇಶಾಂಗ ನೀತಿ ಅಳವಡಿಸಿಕೊಂಡಿದ್ದಾರೆ. ಇದು ದೇಶದಲ್ಲಿ ರಾಜಕೀಯ ಸಮರಕ್ಕೆ ಕಾರಣವಾಗಿದೆ.

ಭಾನುವಾರ ನಾಲ್ವರು ಸಚಿವರ ನೇಮಕಕ್ಕೆ ಸಂಬಂಧಿಸಿದ ಪ್ರಸ್ತಾವಕ್ಕೆ ಆಡಳಿತಾರೂಢ ಮೈತ್ರಿಕೂಟದ ಸದಸ್ಯ ಪಕ್ಷಗಳು ಹಾಗೂ ವಿರೋಧ ಪಕ್ಷಗಳು ಒಪ್ಪಿಗೆ ನೀಡಲು ನಿರಾಕರಿಸಿದ್ದರಿಂದ ಸಂಸತ್ತಿನಲ್ಲಿ ಕೋಲಾಹಲ ಉಂಟಾಗಿತ್ತು. 

ಸೋಮವಾರವೂ ಇದಕ್ಕೆ ಪರಿಹಾರ ಲಭಿಸಿಲ್ಲ. ಅದರ ಬೆನ್ನಲ್ಲೇ ಅಧ್ಯಕ್ಷರ ಪದಚ್ಯುತಿಗೆ ಸಿದ್ಧತೆ ಆರಂಭವಾಗಿದೆ.

ನವೆಂಬರ್‌ನಲ್ಲಿ ಅಧಿಕಾರಕ್ಕೆ ಬಂದ ಮುಯಿಝುಗೆ ಭಾರತ ವಿರೋಧಿ ನಿಲುವಿನಿಂದಾಗಿಯೇ ದೇಶದಲ್ಲಿ ತೀವ್ರ ವಿರೋಧ ಎದುರಾಗಿದೆ.

Share this article