ಮಾಸ್ಕೋ/ವಾಷಿಂಗ್ಟನ್
ಉಕ್ರೇನ್ ವಿರುದ್ಧದ ಯುದ್ಧದಲ್ಲಿ 30 ದಿನಗಳ ಕದನ ವಿರಾಮಕ್ಕಾಗಿ ಅಮೆರಿಕ ಮುಂದಿಟ್ಟ ಪ್ರಸ್ತಾವನೆಯನ್ನು ತಾತ್ವಿಕವಾಗಿ ಒಪ್ಪುವುದಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಹೇಳಿದ್ದಾರೆ. ಆದರೆ ಕದನವಿರಾಮಕ್ಕೆ ನಿಯಮಗಳನ್ನು ರೂಪಿಸಬೇಕು ಎಂಬ ಷರತ್ತು ಮುಂದಿಟ್ಟಿರುವ ಅವರು, ಯಾವುದೇ ಕದನ ವಿರಾಮವು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಇತ್ತೀಚೆಗೆ 30 ದಿನಗಳ ಕದನವಿರಾಮಕ್ಕೆ ತಾನು ಬದ್ಧ ಎಂದು ಅಮೆರಿಕಕ್ಕೆ ಉಕ್ರೇನ್ ಭರವಸೆ ನೀಡಿತ್ತು. ಇದಕ್ಕೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಪುಟಿನ್, ‘ಈ ಕಲ್ಪನೆ (ಕದನವಿರಾಮ) ಸರಿ, ಮತ್ತು ನಾವು ಅದನ್ನು ಖಂಡಿತವಾಗಿಯೂ ಬೆಂಬಲಿಸುತ್ತೇವೆ. ಆದರೆ ನಮ್ಮ ಕದನವಿರಾಮಕ್ಕೆ ನಿಯಮ ರೂಪುಗೊಳ್ಳಬೇಕು’ ಎಂದರು.
ಈ ನಡುವೆ ತಮ್ಮ ಮಾತುಕತೆ ವೇಳೆ ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವ ಟ್ರಂಪ್, ‘ನಮ್ಮ ನಡುವೆ (ಅಮೆರಿಕ-ರಷ್ಯಾ) ನಡುವೆ ಗುರುವಾರ ಧನಾತ್ಮಕ ಮಾತುಕತೆ ನಡೆದಿದೆ. ಈ ರಕ್ತಪಾತ ನಿಲ್ಲುವ ಆಶಾವಾದವಿದೆ. ಸಂಪೂರ್ಣ ದಿಗ್ಬಂಧನಕ್ಕೆ ಒಳಗಾಗಿರುವ ಉಕ್ರೇನಿ ಯೋಧರನ್ನು ಬಿಟ್ಟುಬಿಡಿ ಎಂದು ನಾನು ಪುಟಿನ್‌ರಲ್ಲಿ ಬೇಡಿಕೊಂಡಿದ್ದೇನೆ. ರಷ್ಯಾದಿಂದ ಉತ್ತಮ ಸಂಕೇತ ಬರುತ್ತಿವೆ’ ಎಂದಿದ್ದಾರೆ.
ಶಾಂತಿ ಸ್ಥಾಪನೆ ಉದ್ದೇಶದಿಂದ ಟ್ರಂಪ್ ಅವರ ರಾಯಭಾರಿ ಸ್ಟೀವ್ ವಿಟ್ಕಾಫ್ ಮಾಸ್ಕೋಗೆ ಭೇಟಿ ನೀಡುತ್ತಿರುವ ಸಮಯದಲ್ಲಿಯೇ ವಿದ್ಯಮಾನ ನಡೆದಿದೆ.
ಶಾಂತಿಗೆ ಶ್ರಮಿಸಿದ ಮೋದಿಗೆ ಅಧ್ಯಕ್ಷ ಪುಟಿನ್ ಧನ್ಯವಾದಮಾಸ್ಕೋ: ಉಕ್ರೇನ್ ಮತ್ತು ರಷ್ಯಾ ನಡುವಿನ ಹೋರಾಟವನ್ನು ಕೊನೆಗೊಳಿಸಬೇಕು ಎಂಬ ಉದಾತ್ತ ಧ್ಯೇಯ ಹೊಂದಿದ್ದಕ್ಕಾಗಿ ಮತ್ತು ಶಾಂತಿ ಸ್ಥಾಪನೆ ಶ್ರಮಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವ ನಾಯಕರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಧನ್ಯವಾದ ಅರ್ಪಿಸಿದ್ದಾರೆ.=
ಕದನವಿರಾಮ ಪ್ರಸ್ತಾವಕ್ಕೆ ಮೊದಲ ಪ್ರತಿಕ್ರಿಯೆ ನೀಡಿದ ಅವರು, ‘ಜನರ ಜೀವ ಉಳಿಸುವ ಏಕೈಕ ಉದ್ದೇಶದಿಂದ ಈ ನಾಯಕರು ಶಾಂತಿಗಾಗಿ ಮನವಿ ಮಾಡಿದ್ದರು. ಅದಕ್ಕೆ ನನ್ನ ಧನ್ಯವಾದ’ ಎಂದರು.