;Resize=(412,232))
ವಾಷಿಂಗ್ಟನ್: ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಪದಚ್ಯುತಿ ಮಾಡಿದ್ದಕ್ಕಾಗಿ ಅಲ್ಲಿನ ಸರ್ಕಾರ ಅಮೆರಿಕಕ್ಕೆ 5 ಕೋಟಿ ಬ್ಯಾರಲ್‌ಗಳಷ್ಟು ಕಚ್ಚಾತೈಲವನ್ನು ನೀಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಟ್ರಂಪ್‌ರ ಈ ಹೇಳಿಕೆ ವೆನಿಜುವೆಲಾದಲ್ಲಿ ಗೊಂದಲ ಮೂಡಿಸಿದ್ದರೆ, ಸಾರ್ವಭೌಮ ದೇಶವೊಂದರ ಪ್ರಾಕೃತಿಕ ಸಂಪತ್ತನ್ನು ಹೀಗೆ ವಶಪಡಿಸಿಕೊಳ್ಳುತ್ತಿರುವುದು ಹೊಸ ಆತಂಕಕಾರಿ ಬೆಳವಣಿಗೆ ಎಂದು ಜಾಗತಿಕ ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.
ಮಂಗಳವಾರ ಇಲ್ಲಿ ಮಾತನಾಡಿದ ಟ್ರಂಪ್, ‘ವೆನಿಜುವೆಲಾದ ಮಧ್ಯಂತರ ಸರ್ಕಾರದೊಂದಿಗೆ ನಾವು ಮಾಡಿಕೊಂಡ ಒಪ್ಪಂದದ ಅನ್ವಯ ಮಡುರೋ ಪದಚ್ಯುತಿ ಮಾಡಿದ್ದಕ್ಕೆ ನಮಗೆ ಆ ದೇಶ 5 ಕೋಟಿ ಬ್ಯಾರಲ್ ತೈಲ ನೀಡಲಿದೆ. ನಾವು ಅದನ್ನು ಸಂಸ್ಕರಿಸಲಿದ್ದೇವೆ. ಇದು ಅಮೆರಿಕದ ಆರ್ಥಿಕತೆ ಮತ್ತು ವೆನಿಜುವೆಲಾ ಜನತೆ ಇಬ್ಬರಿಗೂ ಲಾಭದಾಯಕ ಎಂದಿದ್ದಾರೆ. ಜೊತೆಗೆ ಈ ತೈಲದ ಮೊತ್ತ ಅಂದಾಜು 25000 ಕೋಟಿ ರು.ನಷ್ಟು ಇರಲಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, ನಮ್ಮ ತೈಲವನ್ನು ವೆನಿಜುವಲಾ ಕಬಳಿಸಿಕೊಂಡಿದೆ. ಇದೀಗ ಮಡುರೋ ಪದಚ್ಯುತಿ ಬಳಿಕ ಅಮೆರಿಕ ಕಂಪನಿಗಳು ಅಲ್ಲಿ ಹೂಡಿಕೆ ಮಾಡಲಿವೆ. ನಾವು ನಮ್ಮ ಪಾಲಿನ ತೈಲವನ್ನು ವಶಪಡಿಸಿಕೊಳ್ಳಲಿದ್ದೇವೆ ಎಂದು ಟ್ರಂಪ್ ಹೇಳಿದ್ದರು.
ವಾಷಿಂಗ್ಟನ್: ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಅಮೆರಿಕದ ಯಾವುದೇ ಯತ್ನ ನ್ಯಾಟೋ ಕೂಟವನ್ನೇ ನಾಶ ಮಾಡಬಹುದು ಎಂಬ ಡೆನ್ಮಾರ್ಕ್ ಹೇಳಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಅಮೆರಿಕ ಇಲ್ಲದಿದ್ದರೆ ನ್ಯಾಟೋ ಇಲ್ಲ ಎಂದು ಹೇಳಿದ್ದಾರೆ. ಇದು ಪರೋಕ್ಷವಾಗಿ ನ್ಯಾಟೋ ದೇಶಗಳಿಗೆ ನೀಡಿದ ಸಂದೇಶ ಎಂದೇ ವಿಶ್ಲೇಷಿಸಲಾಗಿದೆ.
ಈ ಕುರಿತು ಟ್ರುತ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಟ್ರಂಪ್, ‘ನಾನು ಅಧಿಕಾರಕ್ಕೆ ಬರುವ ಮುನ್ನ ನ್ಯಾಟೋ ದೇಶಗಳು ತಮ್ಮ ಜಿಡಿಪಿಯ ಶೇ.2ರಷ್ಟನ್ನು ಮಾತ್ರ ಪಡೆಗಳ ವೆಚ್ಚಕ್ಕೆ ನೀಡುತ್ತಿದ್ದವು. ಆದರೆ ನಾನು ಅಧ್ಯಕ್ಷನಾದ ಬಳಿಕ ಅವು ಈ ವೆಚ್ಚವನ್ನು ಶೇ.5ಕ್ಕೆ ಹೆಚ್ಚಿಸುವಂತೆ ಮಾಡಿದೆ. ನನ್ನ ಮಧ್ಯಪ್ರವೇಶ ಇಲ್ಲದೇ ಹೋಗಿದ್ದರೆ ಇಂದು ಉಕ್ರೇನ್, ರಷ್ಯಾದ ವಶವಾಗುತ್ತಿತ್ತು. ನಾನು 8 ಯುದ್ಧವನ್ನು ನಿಲ್ಲಿಸಿದೆ. ಆದರೂ ನ್ಯಾಟೋದ ಸದಸ್ಯ ದೇಶವಾದ ಮೂರ್ಖ ನಾರ್ವೆ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಿಲ್ಲ. ಆದರೆ ಅದು ದೊಡ್ಡ ವಿಷಯವಲ್ಲ. ನಾನು ಲಕ್ಷಾಂತರ ಜನರ ಜೀವ ಉಳಿಸಿದೆ ಎಂಬುದು ಮುಖ್ಯ. ಅಮೆರಿಕ ಇಲ್ಲದ ನ್ಯಾಟೋ ಬಗ್ಗೆ ರಷ್ಯಾ ಮತ್ತು ಚೀನಾ ಕಿಂಚಿತ್ತೂ ಹೆದರಿಕೆ ಹೊಂದಿರುವುದಿಲ್ಲ. ಆದರೆ ನಾವು ನೆರವು ಬಯಸಿದಾಗ ನ್ಯಾಟೋ ನಮ್ಮ ನೆರವಿಗೆ ಬರುವ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ ಎಂದೆಂದೂ ನಾವು ನ್ಯಾಟೋದ ಜೊತೆಗೆ ಇರುತ್ತೇವೆ ಎಂದು ಹೇಳಿದ್ದಾರೆ.
ವಾಷಿಂಗ್ಟನ್: ತನ್ನ ನಿರ್ಬಂಧಗಳಿಗೆ ಒಳಪಟ್ಟಿದ್ದ, ರಷ್ಯಾದಲ್ಲಿ ನೊಂದಾಯಿತ ಮರಿನೇರಾ ಎಂಬ ತೈಲ ಟ್ಯಾಂಕರ್ ಅನ್ನು ಅಮೆರಿಕದ ಕರಾವಳಿ ಪಡೆಗಳು ಉತ್ತರ ಅಟ್ಲಾಂಟಿಕ್‌ನಲ್ಲಿ ವಶಕ್ಕೆ ಪಡೆದಿದೆ. ಈ ಮೊದಲು ‘ಬೆಲ್ಲಾ-1’ ಎಂಬ ಹೆಸರು ಹೊಂದಿದ್ದ ಈ ಹಡಗಿಗೆ ವೆನಿಜುವೆಲಾ ನಂಟಿತ್ತೂ ಎಂಬುದೂ ತಿಳಿದುಬಂದಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕದ ಅಧಿಕಾರಿಗಳು, ‘ಕಳೆದ 2 ವಾರಗಳಿಂದ ನಮ್ಮ ಸೇನೆ ಹಿಂಬಾಲಿಸುತ್ತಿದ್ದ ಬೆಲ್ಲಾ-1 ಎಂಬ ವ್ಯಾಪಾರಿ ಹಡಗನ್ನು ಉತ್ತರ ಅಟ್ಲಾಂಟಿಕ್‌ನಲ್ಲಿ ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರಷ್ಯಾ, ‘ಅನ್ಯ ರಾಷ್ಟ್ರಗಳ ಹಡಗುಗಳ ಮೇಲೆ ಸೇನಾ ಕಾರ್ಯಾಚರಣೆ ನಡೆಸುವ ಹಕ್ಕು ಯಾವ ದೇಶಕ್ಕೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಜತೆಗೆ, ಅಮೆರಿಕದ ಸೈನಿಕರು ವಶಪಡಿಸಿಕೊಳ್ಳುವುದಕ್ಕೂ ಮುನ್ನ ರಷ್ಯಾ ತನ್ನ ನೌಕಾಪಡೆಯ ಮೂಲಕ ಅದನ್ನು ರಕ್ಷಿಸಲು ಯತ್ನಿಸಿತ್ತು ಎಂದು ತಿಳಿದುಬಂದಿದೆ.
ಇರಾನ್ ಬೆಂಬಲಿತ ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಗೆ ಸರಕನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಬೆಲ್ಲಾ-1ರ ಮೇಲೆ 2024ರಲ್ಲಿ ಅಮೆರಿಕ ನಿರ್ಬಂಧ ವಿಧಿಸಿತ್ತು. ಅದು ಕಳೆದ ಡಿಸೆಂಬರ್‌ನಲ್ಲಿ ವೆನಿಜುವೆಲಾ ಕಡೆ ಹೊರಟಿದ್ದಾಗ ಅಮೆರಿಕದ ಕರಾವಳಿ ಪಡೆ ಅದರ ಮೇಲೆ ಹತ್ತಿ ನಿಯಂತ್ರಣಕ್ಕೆ ಪಡೆಯಲು ಯತ್ನಿಸಿ ವಿಫಲರಾಗಿದ್ದವು. ಈ ಬಾರಿ ಅದರ ಹೆಸರನ್ನು ಮರಿನೆರಾ ಎಂದು ಬದಲಿಸಿ, ರಷ್ಯಾದ ಧ್ವಜವನ್ನು ಅಳವಡಿಸಲಾಗಿತ್ತು. ಆದರೆ ಇದನ್ನು ಅಮೆರಿಕ ಪತ್ತೆ ಮಾಡಿದ್ದು, ವಾಯುಪಡೆ ಬಳಸಿ ಬೆನ್ನಟ್ಟಿ ವಶಕ್ಕೆ ಪಡೆದಿದೆ.