ಮುಸ್ಲಿಂ ದೇಶ ತಜಕಿಸ್ತಾನದಲ್ಲಿ ಹಿಜಾಬ್‌ ನಿಷೇಧ!

KannadaprabhaNewsNetwork |  
Published : Jun 22, 2024, 01:34 AM ISTUpdated : Jun 22, 2024, 04:07 AM IST
ಹಿಜಾಬ್‌ | Kannada Prabha

ಸಾರಾಂಶ

  ಮುಸ್ಲಿಮರೇ ಹೆಚ್ಚಿರುವ ತಜಕಿಸ್ತಾನ ದೇಶದಲ್ಲಿ ಸರ್ಕಾರ ಹಿಜಾಬ್‌ ಸೇರಿದಂತೆ ಇಸ್ಲಾಮಿಕ್‌ ವಸ್ತ್ರಗಳನ್ನೇ ನಿಷೇಧಿಸಿ ಅಚ್ಚರಿಯ ನಿರ್ಧಾರ ಕೈಗೊಂಡಿದೆ.

ದುಶಾನ್ಬೆ: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಲು ಅವಕಾಶ ನಿರಾಕರಿಸಿದ ಘಟನೆ ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಭಾರೀ ಗದ್ದಲ, ಕಾನೂನು ಹೋರಾಟಕ್ಕೆ ಕಾರಣವಾಗಿದ್ದರೆ, ಅತ್ತ ಮುಸ್ಲಿಮರೇ ಹೆಚ್ಚಿರುವ ತಜಕಿಸ್ತಾನ ದೇಶದಲ್ಲಿ ಸರ್ಕಾರ ಹಿಜಾಬ್‌ ಸೇರಿದಂತೆ ಇಸ್ಲಾಮಿಕ್‌ ವಸ್ತ್ರಗಳನ್ನೇ ನಿಷೇಧಿಸಿ ಅಚ್ಚರಿಯ ನಿರ್ಧಾರ ಕೈಗೊಂಡಿದೆ.

ಹಿಜಾಬ್‌ ಧರಿಸುವುದು ಬಡತನ ಮತ್ತು ಅನಾಗರಿಕತೆಯ ಸೂಚಕ ಎಂದು ಬಣ್ಣಿಸಿರುವ ಅಧ್ಯಕ್ಷ ಎಮೋಮಲಿ ರೆಹಮಾನ್‌ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಸುಮಾರು 1 ಕೋಟಿ ಜನಸಂಖ್ಯೆ ಹೊಂದಿರುವ ತಜಕಿಸ್ತಾನದಲ್ಲಿ ಶೇ.96ರಷ್ಟು ಜನರು ಮುಸ್ಲಿಮರು. ಆದರೆ ಹಾಲಿ ಆಡಳಿತದಲ್ಲಿರುವ ಅಧ್ಯಕ್ಷ ಎಮೋಮಲಿ ರೆಹಮಾನ್‌ ಸರ್ಕಾರವು, ತಜಕಿಸ್ತಾನವನ್ನು ಜಾತ್ಯತೀತ ದೇಶ ಎಂದು ಜಗತ್ತಿನ ಮುಂದೆ ತೆರೆದಿಡುವ ಭಾಗವಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.ಸಂಸತ್ತಿನ ಉಭಯ ಸದನಗಳಲ್ಲೂ ಅಂಗೀಕಾರವಾದ ಮಸೂದೆ ಅನ್ವಯ, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್‌ ಸೇರಿದಂತೆ ಯಾವುದೇ ಇಸ್ಲಾಮಿಕ್‌ ಧಾರ್ಮಿಕ ವಸ್ತ್ರ ಧರಿಸುವಂತಿಲ್ಲ. 

ಒಂದು ವೇಳೆ ಧರಿಸಿದರೆ 3ರಿಂದ 5 ಲಕ್ಷ ರು.ವರೆಗೆ ದಂಡ ಕಟ್ಟಬೇಕಾಗುತ್ತದೆ. ಇದರ ಜೊತೆಗೆ ಹಬ್ಬದ ವೇಳೆ ಮಕ್ಕಳು, ಮನೆಯ ಹಿರಿಯರು ಅಥವಾ ಇತರರಿಂದ ಹಣ ಕೇಳುವ ಸಂಪ್ರದಾಯವನ್ನೂ ಸರ್ಕಾರ ಮಸೂದೆ ಮೂಲಕ ನಿಷೇಧಿಸಿದೆ.

ಹೆಣ್ಣು ಮಕ್ಕಳು ಹಿಜಾಬ್‌ ಧರಿಸುವುದು ಬಡತನ ಮತ್ತು ಅನಾಗರಿಕತೆ ಸೂಚಕ ಎಂದೇ ಟೀಕಿಸಿಕೊಂಡು ಬಂದಿರುವ ರೆಹಮಾನ್‌ 2007ರಲ್ಲೇ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿದ್ದರು. ಬಳಿಕ ಅದನ್ನು ಸಾರ್ವಜನಿಕ ಸಂಸ್ಥೆಗಳಿಗೂ ವಿಸ್ತರಿಸಲಾಗಿತ್ತು. ಇದೀಗ ಅದನ್ನು ದೇಶವ್ಯಾಪಿ ವಿಸ್ತರಣೆ ಮಾಡಲಾಗಿದೆ.

ಆದರೆ ಸರ್ಕಾರದ ನಿರ್ಧಾರವನ್ನು ದೇಶದ ಸಂಪ್ರದಾಯವಾದಿಗಳು ಕಟುವಾಗಿ ಟೀಕಿಸಿದ್ದಾರೆ. ಇದು ದೇಶದ ಸಂಸ್ಕೃತಿ, ಇಸ್ಲಾಮಿಕ್‌ ಸಂಪ್ರದಾಯಕ್ಕೆ ಆಪಾಯ ತರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಲಾಟರಿ ಮೂಲಕ ವೀಸಾ ವಿತರಣೆಗೆ ಟ್ರಂಪ್‌ ಬ್ರೇಕ್‌
ಕಾಂಬೋಡಿಯಾದ 30 ಅಡಿಯ ವಿಷ್ಣು ಪ್ರತಿಮೆ ಥಾಯ್ಲೆಂಡಿಂದ ಧ್ವಂಸ