ಲೆಬನಾನ್‌ನಲ್ಲಿ ಸರಣಿ ಕುರಿ ಬಾಂಬ್ ಸ್ಫೋಟ : ಹಿಜ್ಬುಲ್ಲಾ ಮೇಲೆ ಇಸ್ರೇಲ್ ಕುತಂತ್ರ?

KannadaprabhaNewsNetwork | Updated : Sep 21 2024, 04:17 AM IST

ಸಾರಾಂಶ

ಲೆಬನಾನ್‌ನಲ್ಲಿ ಸರಣಿ ಕುರಿ ಬಾಂಬ್‌ ಸ್ಫೋಟಗೊಂಡು, ಭಾರೀ ಸಾವುನೋವು ಸಂಭವಿಸಿದೆ ಎಂದು ವರದಿಯಾಗಿದೆ. ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಟೆಲ್‌ ಅವೀವ್‌: ಪೇಜರ್‌, ವಾಕಿಟಾಕಿ, ರೇಡಿಯೋ ಸೆಟ್‌, ಸೋಲಾರ್‌ ಸಿಸ್ಟಂ ಬಳಸಿ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಮೇಲೆ ದಾಳಿ ನಡೆದ ಬೆನ್ನಲ್ಲೇ, ಲೆಬನಾನ್‌ನ ಹಲವು ಪ್ರದೇಶಗಳಲ್ಲಿ ಗುರುವಾರ ಸರಣಿ ಕುರಿ ಬಾಂಬ್‌ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ವರದಿಗಳು ಹೇಳಿವೆ.

ಹಮಾಸ್‌ ಉಗ್ರರಿಗೆ ಹಿಜ್ಬುಲ್ಲಾ ಉಗ್ರರ ನೆರವನ್ನು ಖಂಡಿಸಿ ಬುಧವಾರ ಮಾತನಾಡಿದ್ದ ಇಸ್ರೇಲಿನ ರಕ್ಷಣಾ ಸಚಿವ, ‘ನಾವು ಏನು ಬೇಕಾದರೂ ಮಾಡಬಲ್ಲೆವು. ನಮ್ಮ ಬಳಿ ಅಗಾಧ ಸಾಮರ್ಥ್ಯ ಇದೆ. ನಾವು ಸರಿಯಾಗಿ ಏಟು ನೀಡಿದರೆ ಹಿಜ್ಬುಲ್ಲಾಗಳು ಊಟ ಮಾಡಲೂ, ಶೌಚಾಲಯಕ್ಕೆ ಹೋಗಲು ಯೋಚಿಸಬೇಕಾಗುತ್ತದೆ’ ಎಂದು ಗುಡುಗಿದ್ದರು. ಅದರ ಬೆನ್ನಲ್ಲೇ ಕುರಿ ಬಾಂಬ್‌ ಸ್ಫೋಟಗೊಂಡಿದೆ ಎಂದು ಅಮೆರಿಕದ ಸಿಎನ್‌ಎನ್‌ ಸುದ್ದಿ ವಾಹಿನಿ ವರದಿ ಮಾಡಿದೆ. ಆದರೆ ಈ ಕುರಿತು ಲೆಬನಾನ್‌ ಸರ್ಕಾರವಾಗಲೀ, ಹಿಜ್ಬುಲ್ಲಾ ಉಗ್ರರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಏನಿದು ಕುರಿ ಬಾಂಬ್‌?:

ಕುರಿಗಳಲ್ಲಿ ನಿಗೂಢ ಸ್ಫೋಟಕ ವಸ್ತುಗಳನ್ನು ಅಡಗಿಸಿಟ್ಟು ಅದನ್ನು ಬಯಸಿದ ಸಮಯದಲ್ಲಿ, ಪೇಜರ್‌ ಸ್ಫೋಟಿಸಿದಂತೆ ಸ್ಫೋಟಿಸುವುದೇ ಕುರಿ ಬಾಂಬ್‌ ಸ್ಫೋಟ. ಗುರುವಾರ ಲೆಬನಾನ್‌ನ ಹಲವು ಪ್ರದೇಶಗಳಲ್ಲಿ ಇಂಥ ಸರಣಿ ಕುರಿ ಬಾಂಬ್‌ ಸ್ಫೋಟಗೊಂಡಿದೆ ಎಂದು ಸಿಎನ್‌ಎನ್‌ ವರದಿ ಮಾಡಿದೆ.

ಸ್ಫೋಟ ಹೇಗೆ?:

ಹಿಜ್ಬುಲ್ಲಾಗಳ ಮೇಲೆ ದಾಳಿಗೆ ಈ ಮೊದಲೇ ಯೋಜಿಸಿದ್ದ ಇಸ್ರೇಲಿ ಸೇನಾಪಡೆ, ಹಿಜ್ಬುಲ್ಲಾಗಳು ಬಳಸುವ ಕುರಿಗಳನ್ನು ಅಪಹರಿಸಿ ಅವುಗಳ ಗುದನಾಳದಲ್ಲಿ ಸ್ಫೋಟಕಗಳನ್ನು ಅಡಗಿಸಿದ್ದರು ಎನ್ನಲಾಗಿದೆ. ಬಳಿಕ ಗುರುವಾರ ಹಿಜ್ಬುಲ್ಲಾ ಉಗ್ರರು ಕುರಿಗಳನ್ನು ಬಳಕೆ ಮಾಡುವ ವೇಳೆ ಏಕಕಾಲಕ್ಕೆ ಸ್ಫೋಟ ನಡೆಸಲಾಗಿದೆ ಎಂದು ವರದಿ ಹೇಳಿದೆ.

ಅನುಮಾನದ ಹುತ್ತ?:

ಕಳೆದ ಭಾನುವಾರವಷ್ಟೇ ಇಸ್ರೇಲಿ ಯೋಧರು, ಲೆಬನಾನ್‌ ಗಡಿಯಲ್ಲಿ ಕುರಿ ಕಾಯುವವರನ್ನು ಬೆದರಿಸಿ 500ಕ್ಕೂ ಹೆಚ್ಚು ಕುರಿಗಳನ್ನು ತಮ್ಮ ವಶಕ್ಕೆ ಪಡೆದಿದ್ದರು. ಬಳಿಕ ಅವುಗಳನ್ನು ಬಿಡುಗಡೆ ಮಾಡಲಾಗಿತ್ತು. ಆರಂಭದಲ್ಲಿ, ಗಡಿ ದಾಟಿ ಬರದಂತೆ ಕುರಿಗಾಹಿಗಳನ್ನು ಬೆದರಿಸಲು ಹೀಗೆ ಕುರಿಗಳನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಯ್ತು ಎಂದು ವರದಿಯಾಗಿತ್ತು.ಆದರೆ ಕುರಿಗಳ ಬಿಡುಗಡೆ ಬೆನ್ನಲ್ಲೇ ಹಲವು ಕಡೆ ಕುರಿ ಬಾಂಬ್‌ ಸ್ಫೋಟಗೊಂಡಿರುವುದು, ಇಸ್ರೇಲಿ ಯೋಧರು ಕುರಿಗಳನ್ನು ಬಳಸಿ ಸ್ಫೋಟ ನಡೆಸಿರಬಹುದು ಎಂಬ ಶಂಕೆಗೆ ಕಾರಣವಾಗಿದೆ.ಒಂದೋ ವಶಪಡಿಸಿಕೊಂಡ ಕುರಿಗಳಲ್ಲಿ ಸ್ಫೋಟಕ ಇಟ್ಟು ಬಿಡುಗಡೆ ಮಾಡಿರಬಹುದು, ಅಥವಾ ಮೊದಲೇ ಕೆಲವೊಂದಿಷ್ಟು ಕುರಿಗಳಿಗೆ ಸ್ಫೋಟಕ ಅಳವಡಿಸಿ, ಅದನ್ನು ಲೆಬನಾನ್‌ನ ಕುರಿಗಾಹಿಗಳಿಂದ ವಶಪಡಿಸಿಕೊಂಡ ಕುರಿಗಳ ಬದಲಾಗಿ ಕಳುಹಿಸಿರಬಹುದು ಎಂಬ ವಾದ ಕೇಳಿಬಂದಿದೆ.

ಏನಿದು ಕುರಿ ಬಾಂಬ್‌?

- ಕಳೆದ ವಾರವಷ್ಟೇ ಲೆಬನಾನ್‌ ಗಡಿಯಲ್ಲಿ 500ಕ್ಕೂ ಹೆಚ್ಚು ಕುರಿಗಳನ್ನು ಅಪಹರಿಸಿದ್ದ ಇಸ್ರೇಲ್‌ ಯೋಧರು

- ಬಳಿಕ ಆ ಕುರಿಗಳ ಬಿಡುಗಡೆ

- ಗುರುವಾರ ಲೆಬನಾನ್‌ನ ಗಡಿ ಪ್ರದೇಶದಲ್ಲಿ ಅನೇಕ ಕುರಿಗಳು ಸ್ಫೋಟ

- ಹೀಗಾಗಿ ಇದು ಇಸ್ರೇಲ್‌ ಕೃತ್ಯ ಎಂಬ ಶಂಕೆ

- ಕುರಿಗಳ ಗುದನಾಳದಲ್ಲಿ ಬಾಂಬ್‌ ಇರಿಸಿ ಸ್ಫೋಟಿಸಿರುವ ಸಾಧ್ಯತೆ

Share this article