ಮೋದಿ ಸೋಲಿಸಲು ಬೈಡೆನ್‌ ಸರ್ಕಾರ ಯತ್ನಿಸಿತ್ತು :ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಸ್ಫೋಟಕ ಆರೋಪ

KannadaprabhaNewsNetwork |  
Published : Feb 21, 2025, 12:47 AM ISTUpdated : Feb 21, 2025, 03:59 AM IST
ಟ್ರಂಪ್‌ | Kannada Prabha

ಸಾರಾಂಶ

 ಈ ಹಿಂದಿನ ಜೋ ಬೈಡೆನ್‌ ಆಡಳಿತವು ಭಾರತದಲ್ಲಿ ‘ಬೇರೊಬ್ಬರನ್ನು ಆಯ್ಕೆ ಮಾಡುವ’ ಪ್ರಯತ್ನ ನಡೆಸುತ್ತಿತ್ತು ಎಂಬ ಶಂಕೆ ಇದೆ’ ಎಂದಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಸೋಲಿಸಲು ಬೈಡೆನ್‌ ಯತ್ನಿಸಿದ್ದರು ಎಂದು ಟ್ರಂಪ್‌ ಪರೋಕ್ಷವಾಗಿ ಹೇಳಿದ್ದಾರೆ.

 ವಾಷಿಂಗ್ಟನ್‌/ನವದೆಹಲಿ: ಭಾರತದ ಚುನಾವಣೆಗಳ ಕುರಿತು ಸ್ಫೋಟಕ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದಲ್ಲಿ ಮತದಾನ ಪ್ರಕ್ರಿಯೆಗೆ ನೆರವಾಗಲು ಅಮೆರಿಕದ ಹಿಂದಿನ ಸರ್ಕಾರಗಳು ‘ಯುಎಸ್‌ ಏಡ್‌’ ಯೋಜನೆ ಅಡಿ ನೀಡುತ್ತಿದ್ದ 180 ಕೋಟಿ ರು. ನಿಧಿಯನ್ನು ಮತ್ತೊಮ್ಮೆ ಪ್ರಶ್ನಿಸಿದ್ದಾರೆ. ಅಲ್ಲದೆ, ‘ಈ ಹಿಂದಿನ ಜೋ ಬೈಡೆನ್‌ ಆಡಳಿತವು ಭಾರತದಲ್ಲಿ ‘ಬೇರೊಬ್ಬರನ್ನು ಆಯ್ಕೆ ಮಾಡುವ’ ಪ್ರಯತ್ನ ನಡೆಸುತ್ತಿತ್ತು ಎಂಬ ಶಂಕೆ ಇದೆ’ ಎಂದಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಸೋಲಿಸಲು ಬೈಡೆನ್‌ ಯತ್ನಿಸಿದ್ದರು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಅಲ್ಲದೆ, ‘ಭಾರತದ ಚುನಾವಣೆಗಳಲ್ಲಿ ಬೈಡನ್ ಆಡಳಿತವು ಹಸ್ತಕ್ಷೇಪ ಮಾಡುತ್ತಿತ್ತು’ ಎಂಬ ಸ್ಪಷ್ಟ ಸುಳಿವು ನೀಡಿರುವ ಟ್ರಂಪ್, ‘ನನ್ನ ಸರ್ಕಾರ ಈ ವಿಷಯವನ್ನು ಕೈಗೆತ್ತಿಕೊಂಡು ಮೋದಿ ಸರ್ಕಾರದೊಂದಿಗೆ ಮಾತುಕತೆ ನಡೆಸಲಿದೆ’ ಎಂದು ಹೇಳಿದ್ದಾರೆ.

ಇತ್ತೀಚೆಗೆ ಟ್ರಂಪ್‌ ಆಡಳಿತವು ಭಾರತಕ್ಕೆ ನೀಡುತ್ತಿದ್ದ ಈ 180 ಕೋಟಿ ರು. ಚುನಾವಣಾ ನೆರವು ನಿಲ್ಲಿಸುವುದಾಗಿ ಘೋಷಿಸಿತ್ತು. ಈ ಬಗ್ಗೆ ಮತ್ತೆ ಗುರುವಾರ ವಾಷಿಂಗ್ಟನ್‌ನಲ್ಲಿ ನಡೆದ ಶೃಂಗಸಭೆಯೊಂದರಲ್ಲಿ ಮಾತನಾಡಿದ ಟ್ರಂಪ್‌, ‘ಭಾರತದಲ್ಲಿ ಮತದಾನದ ಪ್ರಕ್ರಿಯೆಗಾಗಿ ನಾವು 21 ಮಿಲಿಯನ್ ಡಾಲರ್ (180 ಕೋಟಿ ರು.) ಖರ್ಚು ಏಕೆ ಮಾಡಬೇಕು? ಅವರು (ಬೈಡೆನ್‌) ಬೇರೆಯವರನ್ನು ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನಾವು ಭಾರತ ಸರ್ಕಾರಕ್ಕೆ ಹೇಳಬೇಕಾಗಿದೆ’ ಎಂದರು.2024ರಲ್ಲಿ ಗೆದ್ದರೂ ಕ್ಷೀಣಿಸಿದ್ದ ಬಿಜೆಪಿ ಬಲ:

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಆಗ ಬಿಜೆಪಿ ಏಕಾಂಗಿಯಾಗಿ ಬಹುಮತ ಗಳಿಸಲು ವಿಫಲವಾಗಿತ್ತು. ಆದರೆ ಎನ್‌ಡಿಎ ಅಂಗಪಕ್ಷಗಳ ನೆರವಿನಿಂದ ಬಹುಮತ ಗಿಟ್ಟಿಸಿತ್ತು. ಸೋತರೂ ಕಾಂಗ್ರೆಸ್‌ ಹಾಗೂ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಬಲವರ್ಧನೆ ಮಾಡಿಕೊಂಡಿದ್ದವು ಎಂಬುದು ಇಲ್ಲಿ ಗಮನಾರ್ಹ.ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ:ಟ್ರಂಪ್ ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ‘ಯುಎಸ್‌ ಏಡ್‌ ನಿಧಿಯ ಕುರಿತು ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳು, ‘2024 ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವುದನ್ನು ತಡೆಯಲು ವಿದೇಶಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂಬ ಹೇಳಿಕೆಯ ಪುನರುಚ್ಚರಣೆಯಾಗಿದೆ’ ಎಂದು ಬಿಜೆಪಿ ವಕ್ತಾರರಾದ ರವಿಶಂಕರ ಪ್ರಸಾದ್‌ ಹಾಗೂ ಅಮಿತ್‌ ಮಾಳವೀಯ ಹೇಳಿದ್ದಾರೆ.

ಅಲ್ಲದೆ, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಜಾಗತಿಕ ಜಾಲಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಮತ್ತು ವಿದೇಶಿ ಸಂಸ್ಥೆಗಳ ದಾಳವಾಗಿ ಕಾರ್ಯನಿರ್ವಹಿಸಿದ್ದರು ಎಂದು ಮತ್ತೆ ಸಾಬೀತಾಗಿದೆ’ ಎಂದೂ ಆರೋಪಿಸಿದ್ದಾರೆ.ಟ್ರಂಪ್‌ ಹೇಳಿಕೆಗೆ ಕಾಂಗ್ರೆಸ್‌ ಕಿಡಿ:

ಟ್ರಂಪ್‌ ಹೇಳಿಕೆಗೆ ಕಾಂಗ್ರೆಸ್‌ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ‘ಯುಎಸ್‌ ಏಡ್‌ ನಿಧಿ ಇಂದು ನಿನ್ನೆಯದಲ್ಲ. ಇದನ್ನು ನವೆಂಬರ್ 3, 1961 ರಂದು ಸ್ಥಾಪಿಸಲಾಯಿತು. ಅಮೆರಿಕ ಅಧ್ಯಕ್ಷರು ಮಾಡುತ್ತಿರುವ ಆರೋಪ ಅಸಂಬದ್ಧವಾಗಿವೆ’ ಎಂದು ಅದರ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹೇಳಿದ್ದಾರೆ.‘ಹಾಗಿದ್ದರೂ, ಭಾರತ ಸರ್ಕಾರವು ದಶಕಗಳಲ್ಲಿ ಭಾರತದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಯುಎಸ್ ಏಡ್‌ ನಿಧಿ ಬಳಕೆ ಆದ ಬಗ್ಗೆ ಆದಷ್ಟು ಬೇಗ ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

--ಅಮೆರಿಕ ನಿಧಿ ಪಡೆದವರಿಗೆ ತನಿಖೆ ಬಿಸಿ

- ಪ್ರಶ್ನಾವಳಿ ಕಳಿಸುತ್ತಿರುವ ಸರ್ಕಾರ

ನವದೆಹಲಿ: ಅಮೆರಿಕವು 1961ರಿಂದ ನೀಡುತ್ತಿರುವ ‘ಯುಎಸ್‌ ಏಡ್‌’ ಅಡಿ ಹಣ ಪಡೆದಿರುವ ಭಾರತೀಯರಿಗೆ ತನಿಖೆ ಬಿಸಿ ಎದುರಾಗುವ ಸಾಧ್ಯತೆ ಇದೆ. ಅಮೆರಿಕದಿಂದ ಹಣ ಪಡೆದು ಭಾರತದ ಚುನಾವಣೆ ಮೇಲೆ ಪ್ರಭಾವ ಬೀರುವ ಯತ್ನ ನಡೆದಿತ್ತು. ಬಿಜೆಪಿಯನ್ನು ಸೋಲಿಸಲೂ ಹಿಂದಿನ ಬೈಡೆನ್‌ ಸರ್ಕಾರ ಯತ್ನಿಸಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡಿದ ಆರೋಪದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.ಅಮೆರಿಕವು ಭಾರತದ ಚುನಾವಣಾ ಪ್ರಕ್ರಿಯೆಗೆ ಮಾತ್ರವಲ್ಲ. ಭಾರತಕ್ಕೆ ವಿವಿಧ ವಲಯಗಳಿಗೆ ಹಣ ನೀಡುತ್ತದೆ. ಅಮೆರಿಕದಿಂದ ಭಾರತದ ಎನ್‌ಜಿಒಗಳು, ಗಣ್ಯರು, ಸಮಾಜ ಸೇವಾ ಕಾರ್ಯಕರ್ತರು, ಪತ್ರಕರ್ತರು ಸೇರಿ ಹಲವರು ‘ಯುಎಸ್‌ ಏಡ್‌’ ಅಡಿ ನಿಧಿ ಸ್ವೀಕರಿಸಿದ್ದುಂಟು. ಇವರು ಏತಕ್ಕೆ ಈ ಹಣ ಬಳಸಿದರು ಎಂಬ ಬಗ್ಗೆ ತನಿಖೆಗೆ ಮೋದಿ ಸರ್ಕಾರ ಮುಂದಾಗುವ ಸಾಧ್ಯತೆ ಇದೆ. ಇದಕ್ಕೆ ಪೂರ್ವಭಾವಿಯಾಗಿ ಕೆಲವರಿಗೆ ಈಗ ಪ್ರಶ್ನಾವಳಿಗಳನ್ನು ಕಳಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವೀಣಾ ರೆಡ್ಡಿ ವಿರುದ್ಧ ತನಿಖೆಗೆ ಆಗ್ರಹ: 2022ರಲ್ಲಿ 1982 ಕೋಟಿ ರು. ಯುಎಸ್‌ ಏಡ್‌ ಮೂಲಕ ಭಾರತಕ್ಕೆ ಹರಿದು ಬಂದಿದ್ದುಂಟು. ಇದು ಒಂದು ವರ್ಷದ ಗರಿಷ್ಠ ನಿಧಿ. 2024ಕ್ಕಿಂತ ಮುಂಚೆ ಭಾರತೀಯ ಮೂಲದ ಅಮೆರಿಕ ಅಧಿಕಾರಿಣಿ ವೀಣಾ ರೆಡ್ಡಿ ಯುಎಸ್‌ ಏಡ್‌ನ ಭಾರತದ ಉಸ್ತುವಾರಿ ಆಗಿದ್ದರು. ಇವರು ಯಾರಿಗೆ ಯಾವ ಉದ್ದೇಶಕ್ಕೆ ಹಣ ನೀಡಿದರು ಎಂಬ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಬಿಜೆಪಿ ನಾಯಕ ಮಹೇಶ ಜೇಠ್ಮಲಾನಿ ಆಗ್ರಹಿಸಿದ್ದಾರೆ.

ಟ್ರಂಪ್‌ ಹೇಳಿದ್ದೇನು?

ಭಾರತದಲ್ಲಿ ಮತದಾನದ ಪ್ರಕ್ರಿಯೆಗಾಗಿ ನಾವು 21 ಮಿಲಿಯನ್ ಡಾಲರ್ (180 ಕೋಟಿ ರು.) ಖರ್ಚು ಏಕೆ ಮಾಡಬೇಕು? ಅವರು (ಬೈಡೆನ್‌) ಬೇರೆಯವರನ್ನು ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನಾವು ಭಾರತ ಸರ್ಕಾರಕ್ಕೆ ಹೇಳಬೇಕಾಗಿದೆ

ಕಾಂಗ್ರೆಸ್‌, ರಾಹುಲ್‌ ವಿದೇಶಗಳಿಗೆ ದಾಳ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಜಾಗತಿಕ ಜಾಲಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಮತ್ತು ವಿದೇಶಿ ಸಂಸ್ಥೆಗಳ ದಾಳವಾಗಿ ಕಾರ್ಯನಿರ್ವಹಿಸಿದ್ದರು ಎಂದು ಮತ್ತೆ ಸಾಬೀತಾಗಿದೆ.

- ರವಿಶಂಕರ್‌ ಪ್ರಸಾದ್‌ ಬಿಜೆಪಿ

ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿಕೆಗಳು ಅಸಂಬದ್ಧ

ಯುಎಸ್‌ ಏಡ್‌ ಇಂದು ನಿನ್ನೆಯದಲ್ಲ. ಇದನ್ನು ನವೆಂಬರ್ 3, 1961 ರಂದು ಸ್ಥಾಪಿಸಲಾಯಿತು. ಅಮೆರಿಕ ಅಧ್ಯಕ್ಷರು ಮಾಡುತ್ತಿರುವ ಆರೋಪ ಅಸಂಬದ್ಧವಾಗಿವೆ. ಈ ನಿಧಿ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿ.

- ಜೈರಾಮ್‌ ರಮೇಶ್‌ ಕಾಂಗ್ರೆಸ್‌

ವಿದೇಶಿ ಯತ್ನ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದರು ಮೋದಿ!

2024ರ ಏ.20ರಂದು ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ಮೋದಿಯನ್ನು ಸೋಲಿಸಲು ಜಗತ್ತಿನಲ್ಲಿ ಮತ್ತು ಭಾರತದಲ್ಲಿ ಅನೇಕ ಶಕ್ತಿಗಳು ಒಟ್ಟಾಗಿವೆ. ಆದರೆ ನಾರಿ ಶಕ್ತಿ, ಮಾತೃ ಶಕ್ತಿ ಹಾಗೂ ಸುರಕ್ಷಾ ಕವಚದಿಂದ ನನಗೆ ಏನೂ ಆಗಲ್ಲ’ ಎಂದು ಹೇಳಿದ್ದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ
ಸೌದಿ ಬಳಿಕ ದುಬೈ, ಅಬುದಾಭಿಯಲ್ಲೂ ಭಾರೀ ಮಳೆ