ಬ್ರಿಟನ್‌ಗೆ ಶಿಕ್ಷಣಕ್ಕೆ ಹೋಗಲು ಇನ್ನು ಯುಎಇ ನೆರವು ಇಲ್ಲ!

KannadaprabhaNewsNetwork |  
Published : Jan 11, 2026, 02:00 AM ISTUpdated : Jan 11, 2026, 04:54 AM IST
ವಿದ್ಯಾರ್ಥಿ | Kannada Prabha

ಸಾರಾಂಶ

 ಮುಸ್ಲಿಂ ಬ್ರದರ್‌ಹುಡ್‌ ಸಂಘಟನೆ, ತನ್ನ ದೇಶದ ಯುವ ವಿದ್ಯಾರ್ಥಿಗಳನ್ನು ತೀವ್ರ ಮತೀಯವಾದದತ್ತ ಸೆಳೆಯಬಹುದು ಎಂದು ತೀವ್ರ ಕಳವಳ ವ್ಯಕ್ತಪಡಿಸಿರುವ ಇಸ್ಲಾಮಿಕ್‌ ದೇಶವಾದ ಯುಇಎ, ಬ್ರಿಟನ್‌ಗೆ ತೆರಳುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೇ ಇರುವ ಮಹತ್ವದ ನಿರ್ಧಾರ 

 

- ಯುಕೆಯಲ್ಲಿ ಮತೀಯವಾದ ಹೆಚ್ಚಳಕ್ಕೆ ಕಳವಳ

- ಆತಂಕದ ನಡೆ

 

 

--

ಅಬುಧಾಬಿ: ಬ್ರಿಟನ್‌ನ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಿಸಿರುವ ಮುಸ್ಲಿಂ ಬ್ರದರ್‌ಹುಡ್‌ ಸಂಘಟನೆ, ತನ್ನ ದೇಶದ ಯುವ ವಿದ್ಯಾರ್ಥಿಗಳನ್ನು ತೀವ್ರ ಮತೀಯವಾದದತ್ತ ಸೆಳೆಯಬಹುದು ಎಂದು ತೀವ್ರ ಕಳವಳ ವ್ಯಕ್ತಪಡಿಸಿರುವ ಇಸ್ಲಾಮಿಕ್‌ ದೇಶವಾದ ಯುಇಎ, ಬ್ರಿಟನ್‌ಗೆ ತೆರಳುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೇ ಇರುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಮತೀಯ ಸಂಘಟನೆಯೆಂದು ಗುರುತಿಸಿಕೊಂಡಿರುವ ‘ಮುಸ್ಲಿಂ ಬ್ರದರ್‌ಹುಡ್‌’ ನಿಷೇಧಿಸಲು ಬ್ರಿಟನ್‌ ಹಿಂದೇಟು ಹಾಕಿದ ಬೆನ್ನಲ್ಲೇ, ಯುಎಇ ಈ ಕ್ರಮ ಕೈಗೊಂಡಿದೆ.

ಕಳೆದ ಜೂನ್‌ನಲ್ಲಿ ಯುಎಇಯ ಉನ್ನತ ಶಿಕ್ಷಣ ಸಚಿವಾಲಯವು, ವಿದ್ಯಾರ್ಥಿವೇತನ ಪಡೆಯುವ ಮತ್ತು ಪ್ರಮಾಣಪತ್ರಗಳಿಗೆ ಮಾನ್ಯತೆ ಸಿಗುವ ವಿವಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಅದರಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಇಸ್ರೇಲ್‌, ಫ್ರಾನ್ಸ್‌ಗಳ ವಿವಿಗಳಿದ್ದವು. ಆದರೆ ಬ್ರಿಟನ್‌ನ ಒಂದೇ ಒಂದು ವಿವಿಯ ಹೆಸರಿರಲಿಲ್ಲ. ಈ ಬಗ್ಗೆ ಬ್ರಿಟನ್‌ ಅಧಿಕಾರಿಗಳು ವಿಚಾರಿಸಿದಾಗ, ‘ನಮ್ಮ ವಿದ್ಯಾರ್ಥಿಗಳು ಬ್ರಿಟನ್‌ ಕಾಲೇಜುಗಳಲ್ಲಿ ಮತೀಯವಾದಿಗಳಾಗಿ ಬದಲಾಗುವುದು ನಮಗಿಷ್ಟವಿಲ್ಲ’ ಎಂಬ ಉತ್ತರ ಸಿಕ್ಕಿದೆ.

2023-24 ಅವಧಿಯಲ್ಲಿ ಬ್ರಿಟನ್‌ ವಿವಿಗಳಲ್ಲಿ ವ್ಯಾಸಂಗ ಮಾಡಿದ 30 ಲಕ್ಷ ವಿದ್ಯಾರ್ಥಿಗಳ ಪೈಕಿ 70 ಮಂದಿ ಮತೀಯವಾದಿಗಳಾಗಿ ಬದಲಾಗಿದ್ದರು. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 2 ಪಟ್ಟು ಹೆಚ್ಚು. ಇದಕ್ಕೆ ತನ್ನ ದೇಶದವರು ಬಲಿಯಾಗದೆ ಇರಲಿ ಎಂಬುದು ಯುಎಇಯ ಕಾಳಜಿ.

ಪರಿಣಾಮವೇನು?:

ಕಳೆದ ವರ್ಷ ಸೆಪ್ಟೆಂಬರ್‌ ವರೆಗೆ ಕೇವಲ 213 ಯುಎಇ ವಿದ್ಯಾರ್ಥಿಗಳಿಗೆ ಬ್ರಿಟನ್‌ನ ವಿದ್ಯಾರ್ಥಿ ವೀಸಾ ಸಿಕ್ಕಿತ್ತು. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.27ರಷ್ಟು ಕಡಿಮೆ. 2022ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಇದು ಶೇ.55ರಷ್ಟು ತಗ್ಗಿದೆ. ಅವರಿಗೆ ಸರ್ಕಾರದಿಂದ ನೆರವು ಸಿಗದ ಕಾರಣ ಓದಿನ ಖರ್ಚು ಹೆಚ್ಚುತ್ತದೆ. ಜತೆಗೆ ಅಲ್ಲಿನ ವಿವಿಗಳು ಕೊಡುವ ಪ್ರಮಾಣಪತ್ರಕ್ಕೆ ಮಾನ್ಯತೆಯೇ ಇಲ್ಲವಾಗುವ ಕಾರಣ, ಉದ್ಯೋಗಕ್ಕೆ ಕಷ್ಟವಾಗಲಿದೆ. ಆದರೆ ಈಗಾಗಲೇ ಬ್ರಿಟನ್‌ನಲ್ಲಿರುವವರಿಗೆ ಯಾವುದೇ ಸಮಸ್ಯೆಯಾಗದೆ, ವಿದ್ಯಾರ್ಥಿವೇತನ ಸಿಗುತ್ತಿರುತ್ತದೆ.

ಅತ್ತ ಅತಿಹೆಚ್ಚು ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯುವ ಬ್ರಿಟನ್‌ ವಿವಿಗಳಿಗೆ ಭಾರೀ ನಷ್ಟವಾಗಲಿದೆ.

ಯಾಕೆ ಜಿದ್ದಾಜಿದ್ದಿ?:

ಯುಎಇ ಇಸ್ಲಾಮಿಕ್‌ ದೇಶವಾಗಿರುವ ಹೊರತಾಗಿಯೂ, 2011ರಿಂದ ತನ್ನ ನೆಲದಲ್ಲಿ ನಡೆಯುವ ಇಸ್ಲಾಮಿಕ್ ಚಟುವಟಿಕೆಯ ಮೇಲೆ ಕಠಿಣ ನಿರ್ಬಂಧ ಹೇರಿರುತ್ತಿದೆ ಮತ್ತು ಅದು ರಾಜಕೀಯ ಪ್ರವೇಶ ಮಾಡದಂತೆ ತಡೆಯುತ್ತಿದೆ. ಜತೆಗೆ ಮುಸ್ಲಿಂ ಬ್ರದರ್‌ಹುಡ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬ್ರಿಟನ್‌ಗೆ ಆಗ್ರಹಿಸುತ್ತಿದ್ದರೂ, ಪ್ರಧಾನಿ ಕೀರ್‌ ಸ್ಟಾರ್ಮರ್‌ ಕಡೆಯಿಂದ ‘ಪರಿಶೀಲಿಸಲಾಗುತ್ತಿದೆ’ ಎಂಬ ಉತ್ತರ ಬಿಟ್ಟರೆ ಬೇರಾವ ಬೆಳವಣಿಗೆಗಳೂ ಆಗಿಲ್ಲ. ಜತೆಗೆ, ಬ್ರಿಟನ್‌ ವಿವಿಗಳಲ್ಲಿ ಇತ್ತೀಚೆಗೆ ಪ್ಯಾಲಿಸ್ತೀನ್‌ ಬೆಂಬಲಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು. ಈ ಎಲ್ಲಾ ಕಾರಣಗಳಿಂದಾಗಿ ಯುಎಇ ಈ ಕ್ರಮಕ್ಕೆ ಮುಂದಾಗಿದೆ.

- ಈಜಿಪ್ಟ್‌ನಲ್ಲಿ ಭಾರಿ ದಂಗೆಗೆ ಕಾರಣವಾಗಿದ್ದ ಕಟ್ಟರ್‌ ಸಂಘಟನೆ ಮುಸ್ಲಿಂ ಬ್ರದರ್‌ಹುಡ್‌

- ಇದೀಗ ಬ್ರಿಟನ್‌ನಲ್ಲೂ ಈ ಸಂಘಟನೆಯ ಚಟುವಟಿಕೆ. ಇದರ ಮೇಲೆ ಅಲ್ಲಿ ಲಗಾಮೇ ಇಲ್ಲ

- ತನ್ನ ವಿದ್ಯಾರ್ಥಿಗಳ ಮೇಲೂ ಈ ಸಂಘಟನೆ ಪ್ರಭಾವ ಬೀರುತ್ತಿದೆ ಎಂಬ ಆತಂಕ ಯುಎಇಗೆ

- ಕಳೆದ ವರ್ಷ ಅಧ್ಯಯನ ಮಾಡಿದ್ದ 70 ವಿದ್ಯಾರ್ಥಿಗಳು ಮತೀಯವಾದಿ ಆಗಿ ಬದಲಾಗಿದ್ದರು

- ಹೀಗಾಗಿ ಬ್ರಿಟನ್‌ಗೆ ತೆರಳುವ ತನ್ನ ವಿದ್ಯಾರ್ಥಿಗಳಿಗೆ ನೆರವು ನಿಲ್ಲಿಸಲು ಯುಎಇ ನಿರ್ಧಾರ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ವಿಶ್ವದ ಅತಿದೊಡ್ಡ ದ್ವೀಪದ ಮೇಲೆ ಟ್ರಂಪ್‌ ವ್ಯಾಮೋಹ ಏಕೆ? ಅಮೆರಿಕ ತೆಕ್ಕೆಗೆ ಗ್ರೀನ್‌‘ಲ್ಯಾಂಡ್‌’?
ಇರಾನ್‌ ಜನತಾ ದಂಗೆ ದೇಶವ್ಯಾಪಿ, ಎಲ್ಲೆಡೆ ಕಿಚ್ಚು! ಒಂದೇ ದಿನ 200 ಪ್ರತಿಭಟನಾಕಾರರ ಹತ್ಯೆ?