ಟ್ರಂಪ್‌- ಪ್ರತಿಪಕ್ಷದ ಹಟದಿಂದಾಗಿ ಅಮೆರಿಕದಲ್ಲಿ ಸರ್ಕಾರವೇ ಸ್ಥಗಿತ

KannadaprabhaNewsNetwork |  
Published : Oct 03, 2025, 01:07 AM ISTUpdated : Oct 03, 2025, 03:43 AM IST
ಡೊನಾಲ್ಡ್‌ ಟ್ರಂಪ್‌ | Kannada Prabha

ಸಾರಾಂಶ

ಆರೋಗ್ಯ ಸೇವೆ ವೆಚ್ಚಕ್ಕೆ ಸಂಬಂಧಿಸಿ ಆಡಳಿತಾರೂಢ ರಿಪಬ್ಲಿಕನ್ಸ್‌ ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್‌ ಪಕ್ಷದ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಇದರ ಪರಿಣಾಮ ಅಮೆರಿಕದಲ್ಲಿ ಸರ್ಕಾರಿ ಸೇವೆಗಳು ಗುರುವಾರದಿಂದಲೇ ಜಾರಿಗೆ ಬರುವಂತೆ ಸ್ಥಗಿತ (ಶಟ್‌ಡೌನ್‌)ಗೊಂಡಿವೆ.

 -ವಾಷಿಂಗ್ಟನ್‌: ಆರೋಗ್ಯ ಸೇವೆ ವೆಚ್ಚಕ್ಕೆ ಸಂಬಂಧಿಸಿ ಆಡಳಿತಾರೂಢ ರಿಪಬ್ಲಿಕನ್ಸ್‌ ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್‌ ಪಕ್ಷದ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಇದರ ಪರಿಣಾಮ ಅಮೆರಿಕದಲ್ಲಿ ಸರ್ಕಾರಿ ಸೇವೆಗಳು ಗುರುವಾರದಿಂದಲೇ ಜಾರಿಗೆ ಬರುವಂತೆ ಸ್ಥಗಿತ (ಶಟ್‌ಡೌನ್‌)ಗೊಂಡಿವೆ. ವಿದೇಶಗಳ ಮೇಲಿನ ದಾಳಿ ಬಳಿಕ ಇದೀಗ ಸ್ವದೇಶದಲ್ಲೇ ವಿಪಕ್ಷಗಳ ಮೇಲೆ ಟ್ರಂಪ್‌ ಸಾರಿರುವ ಈ ತೆರಿಗೆ ಸಮರದಿಂದಾಗಿ ಅಮೆರಿಕ ಹೊಸ ಬಿಕ್ಕಟ್ಟಿಗೆ ಸಿಕ್ಕಿಬಿದ್ದಂತಾಗಿದೆ.

ಬಜೆಟ್‌ ಮಂಡನೆಗೆ ಇನ್ನೂ ಸಾಕಷ್ಟು ಸಮಯಾವಕಾಶವಿದ್ದಾಗ ಸರ್ಕಾರಿ ಸಿಬ್ಬಂದಿಯ ವೇತನ ಸೇರಿ ಸರ್ಕಾರದ ತಾತ್ಕಾಲಿಕ ವೆಚ್ಚಕ್ಕೆ ಸಂಬಂಧಿಸಿದ ಬಿಲ್‌ ಅನ್ನು ಸಂಸತ್ತಿನಲ್ಲಿ ಮಂಡಿಸಿ ಪಾಸು ಮಾಡುವುದು ಸಂಪ್ರದಾಯ. ಆದರೆ ಈ ಬಿಲ್‌ ಅಂಗೀಕಾರದ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಒಮ್ಮತಾಭಿಪ್ರಾಯಕ್ಕೆ ಬಾರದ ಹಿನ್ನೆಲೆಯಲ್ಲಿ ಇದೀಗ ಅಮೆರಿಕದ ಆಡಳಿತ ಶಟ್‌ಡೌನ್‌ನ ಕಪಿಮುಷ್ಟಿಗೆ ಸಿಲುಕಿದೆ.

ಶಟ್‌ಡೌನ್‌ ಪರಿಣಾಮ ಹಲವು ಸರ್ಕಾರಿ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಸೇನೆ, ಗಡಿಭದ್ರತಾ ಪಡೆಯಂಥ ತುರ್ತು ಸೇವೆ ಹೊರತುಪಡಿಸಿ ರಾಷ್ಟ್ರೀಯ ಲೈಬ್ರೆರಿ, ರಾಷ್ಟ್ರೀಯ ಪಾರ್ಕ್‌ನಂಥ ಸೇವೆಗಳು ತಾತ್ಕಾಲಿಕವಾಗಿ ಬಂದ್‌ ಆಗಿವೆ. ಮುಂದಿನ ದಿನಗಳಲ್ಲಿ ಸುಮಾರು 7.5 ಲಕ್ಷ ಸಿಬ್ಬಂದಿಯನ್ನು ಸರ್ಕಾರ ಸೀಮಿತ ಅವಧಿಗೆ ವೇತನರಹಿತ ರಜೆ ಮೇಲೆ ಕಳುಹಿಸುವ ಆತಂಕ ಎದುರಾಗಿದೆ.

ಆರೋಗ್ಯ ವೆಚ್ಚಕ್ಕೆ ಕತ್ತರಿ ವಿವಾದ:

ಆರೋಗ್ಯ ಸೇವೆಗಳಿಗೆ ನೀಡುವ ಕೆಲವು ರಿಯಾಯ್ತಿ ಮುಂದುವರೆಸಬೇಕು ಎಂಬುದು ವಿಪಕ್ಷಗಳ ಬೇಡಿಕೆ. ಆದರೆ ಇದಕ್ಕೆ ಟ್ರಂಪ್‌ ಒಪ್ಪುತ್ತಿಲ್ಲ. ಹೀಗಾಗಿ ಸಂಸತ್ತಿನ ಮೇಲ್ಮನೆಯಲ್ಲಿ ವೇತಾನುದಾನ ಬಿಲ್‌ ಅನ್ನು ವಿಪಕ್ಷಗಳು ತಡೆ ಹಿಡಿದಿವೆ. ವಿಪಕ್ಷಗಳ ಬೆಂಬಲ ಸಿಗದ ಹೊರತೂ ಬಿಲ್‌ ಪಾಸಾಗದು. ಆದರೆ ನಮ್ಮ ಬೇಡಿಕೆ ಒಪ್ಪದ ಹೊರತೂ ಅನುಮತಿ ನೀಡಲ್ಲ ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಹೀಗಾಗಿ ಲೇಖಾನುದಾನಕ್ಕೆ ಗಡುವಿನೊಳಗೆ ಅನುಮತಿ ಸಿಗದೇ, ಸರ್ಕಾರ ಶಟ್‌ಡೌನ್‌ ಆಗಿದೆ.

ಈ ಹಿಂದೆ 2018ರಲ್ಲಿ ಇದೇ ರೀತಿ ಅಮೆರಿಕದ ಸರ್ಕಾರಿ ಸೇವೆಗಳು ಸ್ಥಗಿತಗೊಂಡಿದ್ದವು. ಆಗ ಸುಮಾರು 35 ದಿನಗಳ ಕಾಲ ಶಟ್‌ಡೌನ್‌ ಮುಂದುವರಿದಿತ್ತು. ಅಮೆರಿಕದ ಇತಿಹಾಸದಲ್ಲೇ ಅದು ಅತಿ ಸುದೀರ್ಘ ಶಟ್‌ಡೌನ್‌ ಆಗಿದೆ.

ಸಾವಿರಾರು ಸಿಬ್ಬಂದಿ ವಜಾ:

ಶಟ್‌ಡೌನ್‌ನ ಈ ಸಂದರ್ಭವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಿಬ್ಬಂದಿ ಕಡಿತಕ್ಕೆ ಸಿಕ್ಕ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕ ಇದೀಗ ಎದುರಾಗಿದೆ. ಟ್ರಂಪ್‌ ಅವರು ಹಿಂದೆಯೂ ವೆಚ್ಚ ಕಡಿತದ ಭಾಗವಾಗಿ ಸಿಬ್ಬಂದಿ ಕಡಿತಕ್ಕೆ ಕೈಹಾಕಿದ್ದರು. ಇದೀಗ ಶಟ್‌ಡೌನ್‌ನಿಂದಾಗಿ ಹಲವು ಸಿಬ್ಬಂದಿ ತಾತ್ಕಾಲಿಕವಾಗಿ ವಜಾಗೊಳ್ಳಲಿದ್ದಾರೆ. ಇದೇ ಸಂದರ್ಭ ಬಳಸಿಕೊಂಡು ಕೆಲ ಸಿಬ್ಬಂದಿಯನ್ನು ಶಾಶ್ವತವಾಗಿ ಮನೆಗೆ ಕಳುಹಿಸುವ ಸುಳಿವು ಸಾಧ್ಯತೆಯೂ ಇಲ್ಲದಿಲ್ಲ. ಇದರ ಜತೆಗೆ ಡೆಮಾಕ್ರಟಿಕ್‌ ಪಕ್ಷದ ಪ್ರಾಬಲ್ಯವಿರುವ ಪ್ರದೇಶಗಳಿಗೆ ಘೋಷಣೆ ಮಾಡಲಾಗಿರುವ ಸಬ್‌ವೇನಂಥ ಮೂಲಸೌಲಭ್ಯ ಯೋಜನೆಗಳ ಫಂಡಿಂಗ್‌ ಅನ್ನೂ ತಡೆಹಿಡಿಯುವ ಮೂಲಕ ಟ್ರಂಪ್‌ ಅವರು ಪ್ರತೀಕಾರದ ಕ್ರಮಕ್ಕೆ ಕೈಹಾಕಿದ್ದಾರೆ.

ನಿತ್ಯ 3500 ಕೋಟಿ ರು.ನಷ್ಟ

ಶಟ್‌ಡೌನ್‌ನಿಂದಾಗಿ ಪ್ರತಿದಿನ ಅಮೆರಿಕಕ್ಕೆ 3500 ಕೋಟಿ ರು. ನಷ್ಟ ಆಗುತ್ತದೆ. 7.50 ಲಕ್ಷ ನೌಕರರು ಫೆಡರಲ್‌ ಸಿಬ್ಬಂದಿ ರಜೆ ಮೇಲೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಮಿಲಿಟರಿ, ಗಡಿ ಭದ್ರತಾ ಪಡೆ, ಏರ್‌ಟ್ರಾಫಿಕ್‌ ಕಂಟ್ರೋಲರ್‌ಗಳಂಥ ಅನಿವಾರ್ಯ ಸಿಬ್ಬಂದಿ ವೇತನವಿಲ್ಲದೆ ಕೆಲಸ ಮಾಡಲಿದ್ದಾರೆ. ರಾಷ್ಟ್ರೀಯ ಮ್ಯೂಸಿಯಂ, ರಾಷ್ಟ್ರೀಯ ಕೇಂದ್ರಗಳು, ರಾಷ್ಟ್ರೀಯ ಪಾರ್ಕ್‌, ಲೈಬ್ರೆರಿಗಳು ತಾತ್ಕಾಲಿಕವಾಗಿ ಬಂದ್ ಆಗಲಿವೆ. ಶಟ್‌ಡೌನ್ ಸಮಸ್ಯೆ ಇಷ್ಟಕ್ಕೇ ಮುಗಿಯುವುದಿಲ್ಲ. ಇದರಿಂದ ಸರ್ಕಾರಿ ಯೋಜನೆಗಳು, ಸಂಶೋಧನೆಗಳು ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿದ ಸರ್ಕಾರದ ಫಂಡ್‌ಗಳು ವಿಳಂಬವಾಗಲಿವೆ. ಇದು ಹೂಡಿಕೆದಾರರ ಮೇಲೂ ಋಣಾತ್ಮಕ ಪರಿಣಾಮ ಬೀರಲಿದೆ. ಅಮೆರಿಕದಲ್ಲಿ ಈ ರೀತಿ ಶಟ್‌ಡೌನ್‌ ಆಗುವುದು ಇದೇ ಮೊದಲೇನಲ್ಲ. ಈಗಾಗಲೇ ಇಂಥ 21 ಶಟ್‌ಡೌನ್‌ಗಳು ಆಗಿ ಹೋಗಿವೆ.

ಏನಿದು ಶಟ್‌ಡೌನ್‌?

ಅಮೆರಿಕ ಸರ್ಕಾರದ ವಿವಿಧ ಇಲಾಖೆಗಳಿಗೆ ಪ್ರತಿ ತಿಂಗಳು ಭಾರೀ ಮೊತ್ತದ ಹಣ ಬೇಕಾಗುತ್ತದೆ. ವೇತನ, ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಈ ಹಣ ಬಳಕೆಯಾಗುತ್ತವೆ. ರಾಜಕೀಯ ಕಾರಣಗಳಿಗಾಗಿ ಬಜೆಟ್‌ ಅಥವಾ ಲೇಖಾನುದಾನಕ್ಕೆ ಸೆನೆಟ್‌ನ ಒಪ್ಪಿಗೆ ಸಿಗದೆ ಹೋದರೆ ಅಮೆರಿಕದ ಕಾನೂನು ಪ್ರಕಾರ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ ಸೇವೆಗಳು ಮತ್ತು ವಿಭಾಗಗಳನ್ನು ಬಂದ್‌ ಮಾಡಬೇಕಾಗುತ್ತದೆ. ಇದನ್ನೇ ಶಟ್‌ಡೌನ್‌ ಎಂದು ಹೇಳಲಾಗುತ್ತದೆ.

-ಏನಿದು ಸಮಸ್ಯೆ?

- ಸರ್ಕಾರಿ ಸಿಬ್ಬಂದಿ ವೇತನ ಪಾವತಿಗೆ ಅನುಮತಿ ಕೇಳಿ ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಲಾಗುತ್ತೆ- ಆರೋಗ್ಯ ಸೇವೆಗಳಿಗೆ ನೀಡುವ ಕೆಲ ರಿಯಾಯಿತಿಗಳನ್ನು ಮುಂದುವರಿಸುವಂತೆ ವಿಪಕ್ಷಗಳಿಂದ ಬೇಡಿಕೆ- ಟ್ರಂಪ್‌ ಒಪ್ಪದ ಕಾರಣ ಮಸೂದೆಗೆ ಒಪ್ಪಿಗೆ ನೀಡಲು ವಿಪಕ್ಷಗಳ ಪಟ್ಟು. ಮಸೂದೆಗೆ ಸಿಗದ ಅನುಮತಿ- ಅನುಮತಿ ಇಲ್ಲದ ಕಾರಣ ಸರ್ಕಾರ ವೆಚ್ಚ ಮಾಡುವಂತಿಲ್ಲ. ಇದನ್ನು ಶಟ್‌ಡೌನ್‌ ಎಂದು ಕರೆಯಲಾಗುತ್ತದೆ- ಹಲವು ಸರ್ಕಾರಿ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತವೆ. ನಿತ್ಯ 3500 ಕೋಟಿ ರು. ನಷ್ಟವಾಗುತ್ತದೆ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ - 27 ವರ್ಷಗಳ ಬಳಿಕ ನಾಸಾದ ವೃತ್ತಿಗೆ ವಿದಾಯ
ಗ್ರೀನ್‌ಲ್ಯಾಂಡ್‌ನ ಬಳಿಕ ಹಿಂದು ಹಿಂದೂ ಮಹಾಸಾಗರಕ್ಕೆ ಟ್ರಂಪ್‌ ಕಣ್ಣು