ಮೈಕ್ರೋಸಾಫ್ಟ್‌ ಸಾಫ್ಟ್‌ವೇರ್‌ನಲ್ಲಿ ಕಂಡುಬಂದ ವ್ಯತ್ಯಯ : ವಿಮಾನಯಾನ, ರೈಲು, ಬ್ಯಾಂಕಿಂಗ್‌ಗೆ ಭಾರೀ ಹೊಡೆತ

KannadaprabhaNewsNetwork |  
Published : Jul 20, 2024, 12:45 AM ISTUpdated : Jul 20, 2024, 04:18 AM IST
ವಿಮಾನ ನಿಲ್ದಾಣ | Kannada Prabha

ಸಾರಾಂಶ

ಮೈಕ್ರೋಸಾಫ್ಟ್‌ ಸಾಫ್ಟ್‌ವೇರ್‌ನಲ್ಲಿ ಕಂಡುಬಂದ ವ್ಯತ್ಯಯ ಶುಕ್ರವಾರ ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿಮಾನಯಾನ, ರೈಲ್ವೆ, ಬ್ಯಾಂಕಿಂಗ್, ಮಾದ್ಯಮ ವಲಯಗಳನ್ನು ಬಹುವಾಗಿ ಬಾಧಿಸಿದೆ.

ನ್ಯೂಯಾರ್ಕ್‌/ನವದೆಹಲಿ: ಮೈಕ್ರೋಸಾಫ್ಟ್‌ ಸಾಫ್ಟ್‌ವೇರ್‌ನಲ್ಲಿ ಕಂಡುಬಂದ ವ್ಯತ್ಯಯ ಶುಕ್ರವಾರ ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿಮಾನಯಾನ, ರೈಲ್ವೆ, ಬ್ಯಾಂಕಿಂಗ್, ಮಾದ್ಯಮ ವಲಯಗಳನ್ನು ಬಹುವಾಗಿ ಬಾಧಿಸಿದೆ. ಹೀಗಾಗಿ ವಿಶ್ವಾದ್ಯಂತ ಸಾವಿರಾರು ವಿಮಾನಗಳು ರದ್ದಾಗಿವೆ ಅಥವಾ ವಿಳಂಬವಾಗಿ ಸಂಚರಿಸಿವೆ. ಇದರಿಂದ ಪ್ರಯಾಣಿಕರು ಗಂಟೆಗಟ್ಟಲೆ ತಾವು ತೆರಳಬೇಕಾಗಿದ್ದ ಸ್ಥಳ ಬಿಟ್ಟು ಹೊರಟ ಸ್ಥಳದಲ್ಲೇ ಗಂಟೆಗಟ್ಟಲೆ ಉಳಿಯುವಂತಾಯಿತು. ಬ್ಯಾಂಕ್‌ಗಳಲ್ಲೂ ತೊಂದರೆ ಆದ ಕಾರಣ ಕೋಟ್ಯಂತರ ಗ್ರಾಹಕರು ಭಾರೀ ತೊಂದರೆಗೆ ತುತ್ತಾದರು.

ಭಾರತದಲ್ಲಿ..:

ಭಾರತದಲ್ಲಿ ಪ್ರಮುಖವಾಗಿ ವಿಮಾನಯಾನ ಸಂಸ್ಥೆಗಳು ದೊಡ್ಡಮಟ್ಟಿನ ತೊಂದರೆಗೆ ಒಳಗಾದವು. ಇಂಡಿಗೋ, ಸ್ಪೈಸ್‌ಜೆಟ್‌, ಅಕಾಸಾ ಏರ್‌, ವಿಸ್ತಾರಾ ಕಂಪನಿಗಳ ಟಿಕೆಟ್‌ ಬುಕಿಂಗ್‌, ಚೆಕ್‌ ಇನ್‌ ಮತ್ತು ಸಂಚಾರದ ಮಾಹಿತಿ ಸೇವೆಗೆ ತೊಂದರೆ ಆಯಿತು. ಹೀಗಾಗಿ ಪ್ರಯಾಣಿಕರ ಚೆಕ್‌ ಇನ್‌ ಪ್ರಕ್ರಿಯೆಯನ್ನು ವಿಮಾನಯಾನ ಕಂಪನಿಗಳು ಮ್ಯಾನ್ಯುಯಲ್‌ ಆಗಿ ನಡೆಸುವಂತಾಯಿತು. ದೇಶದಲ್ಲಿ ಶುಕ್ರವಾರ ಸಂಜೆಯವರೆಗೆ ಒಟ್ಟಾರೆ ನೂರಾರು ವಿಮಾನ ರದ್ದಾದ ಅಥವಾ ವಿಳಂಬವಾದ ವರದಿಗಳು ಲಭಿಸಿವೆ. ರದ್ದಾದ ಇಂಡಿಗೋ ವಿಮಾನಗಳ ಸಂಖ್ಯೆಯೇ 200 ದಾಟಿದೆ. ಹೀಗಾಗಿ ಪ್ರಯಾಣಿಕರು ಏರ್‌ಪೋರ್ಟ್‌ಗಳಲ್ಲಿ ಭಾರಿ ಪರದಾಟ ಅನುಭವಿಸುವಂತಾಯಿತು.

ವಿದೇಶಗಳಲ್ಲಿ:

ಅಮೆರಿಕದಲ್ಲಿ, ಡೆಲ್ಟಾ, ಅಮೆರಿಕನ್‌, ಅಲಿಗೆಂಟ್‌ ಕಂಪನಿಗಳ ವಿಮಾನ ಸೇವೆ ಪೂರ್ಣ ಸ್ಥಗಿತಗೊಂಡಿತು. ಉಳಿದ ಕಂಪನಿಗಳು ಕೂಡಾ ಸಾಕಷ್ಟು ಪ್ರಮಾಣದಲ್ಲಿ ವ್ಯತ್ಯಯಕ್ಕೆ ತುತ್ತಾದವು. ಅಮೆರಿಕವೊಂದರಲ್ಲೇ ಸಾವಿರಾರು ವಿಮಾನಗಳ ಸಂಚಾರ ರದ್ದು, ಮುಂದೂಡಿಕೆಯಂಥ ಘಟನೆಗಳಿಗೆ ಸಾಕ್ಷಿ ಆಯಿತು. ವಿಮಾನಯಾನ ಸಿಬ್ಬಂದಿ, ಪ್ರಯಾಣಿಕರು ಏರ್‌ಪೋರ್ಟ್‌ನಲ್ಲೇ ನಿದ್ದೆ ಹೋದ ದೃಶ್ಯಗಳು ಎಲ್ಲೆಡೆ ಕಂಡುಬಂದವು.ಆಸ್ಟ್ರೇಲಿಯಾದಲ್ಲಿ ವಿಮಾನ, ದೂರಸಂಪರ್ಕ, ಬ್ಯಾಂಕ್‌, ಮಾಧ್ಯಮ ಸಂಸ್ಥೆಗಳು ಮೈಕ್ರೋಸಾಫ್ಟ್‌ ಶಾಕ್‌ನಿಂದ ಕಂಗೆಟ್ಟವು. ಇದೇ ಪರಿಸ್ಥಿತಿ ಭಾರತ, ಬ್ರಿಟನ್‌, ನ್ಯೂಜಿಲೆಂಡ್‌, ನೆದರ್‌ಲೆಂಡ್‌, ಯುರೋಪ್‌, ಜರ್ಮನಿ, ಸ್ವಿಜರ್ಲೆಂಡ್‌, ಆಫ್ರಿಕಾ, ಇಸ್ರೇಲ್‌, ಇಟಲಿ ಸೇರಿದಂತೆ ಹಲವ ದೇಶಗಳಲ್ಲೂ ಪ್ರತಿಧ್ವನಿಸಿತು.

ಬ್ರಿಟನ್‌ನಲ್ಲಿ ವಿಮಾನ, ರೈಲು, ಮಾಧ್ಯಮ, ಆರೋಗ್ಯ ಸೇವೆಗಳಲ್ಲಿ ತೊಂದರೆ ಉಂಟಾಯಿತು. ಷೇರುಪೇಟೆಯೂ ಸಮಸ್ಯೆ ಎದುರಿಸಿತು.

ಟೀವಿ ಪ್ರಸಾರ ವ್ಯತ್ಯಯ:

ಆಸ್ಟ್ರೇಲಿಯಾದಲ್ಲಿ ಎಬಿಸಿ, ಸ್ಕೈನ್ಯೂಸ್‌ ಚಾನೆಲ್‌ಗಳಿಗೆ ತಮ್ಮ ಟೀವಿ ಮತ್ತು ರೇಡಿಯೋ ಕಾರ್ಯಕ್ರಮ ಪ್ರಸಾರ ಮಾಡಲು ಆಗಲಿಲ್ಲ. ಕಾರ್ಯಕ್ರಮದ ಪ್ರಸಾರದ ವೇಳೆಯೇ ತೊಂದರೆ ಕಾಣಿಸಿಕೊಂಡ ಪರಿಣಾಮ ನೇರ ಪ್ರಸಾರದಲ್ಲಿದ್ದ ಆ್ಯಂಕರ್‌ಗಳು ಕಂಗೆಡುವಂತಾಯಿತು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬರ್ಲಿನ್‌ನಲ್ಲಿ ಟಿವಿಎಸ್‌ ಬೈಕ್ : ರಾಹುಲ್‌ ಗಾಂಧಿ ಭಾರಿ ಮೆಚ್ಚುಗೆ
ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ