- ಅಧ್ಯಕ್ಷನ ಇನ್ನೊಂದು ‘ತುಘಲಕ್ ಘೋಷಣೆ’
- ರಷ್ಯಾ-ಭಾರತ ತೈಲ ವಹಿವಾಟಿಗೆ ಕ್ಯಾತೆ------ ಭಾರತ ನಮ್ಮೊಂದಿಗೆ ಉತ್ತಮ ವ್ಯಾಪಾರ ಪಾಲುದಾರನಲ್ಲ
- ಅವರು ನಮ್ಮ ಮೇಲೆ ಭಾರೀ ಪ್ರಮಾಣದ ತೆರಿಗೆ ಹೇರಿದ್ದಾರೆ- ರಷ್ಯಾ ತೈಲ ಖರೀದಿ ಮೂಲಕ ಯುದ್ಧಕ್ಕೆ ಕುಮ್ಮಕ್ಕು ನೀಡಿದ್ದಾರೆ
- 24 ಗಂಟೆಯಲ್ಲಿ ಭಾರತದ ಮೇಲೆ ಗಣನೀಯ ತೆರಿಗೆ ಹೆಚ್ಚಳ- ಅಮೆರಿಕ ಅಧ್ಯಕ್ಷನ ಇನ್ನೊಂದು ಉದ್ಧಟತನದ ಘೋಷಣೆ
- ಈ ಹಿಂದೆ ಭಾರತದ ಮೇಲೆ ದಂಡ ಹೇರುವೆ ಎಂದಿದ್ದ ಟ್ರಂಪ್==
ನ್ಯೂಯಾರ್ಕ್: ದಿನಕ್ಕೊಂದು ಹೇಳಿಕೆ ಮೂಲಕ ತುಘಲಕ್ ನೀತಿ ಪಾಲಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ಮತ್ತದೇ ಕೆಲಸ ಮಾಡಿದ್ದಾರೆ. ರಷ್ಯಾದಿಂದ ತೈಲ ಆಮದು ನಿಲ್ಲಿಸದಿದ್ದರೆ, ಭಾರತದ ಮೇಲೆ ಈಗಾಗಲೇ ಘೋಷಿಸಿರುವ ಶೇ.25ರಷ್ಟು ಸುಂಕವನ್ನು ಮತ್ತಷ್ಟು ಏರಿಸುವುದಾಗಿ ಬೆದರಿಕೆ ಒಡ್ಡಿದ್ದ ಟ್ರಂಪ್, 24 ಗಂಟೆಯ ಒಳಗೆ ಆ ನಿರ್ಧಾರವನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ‘ಭಾರತ ಅತಿ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರವಾಗಿದೆ. ಅವರ ತೆರಿಗೆ ಅತಿ ಹೆಚ್ಚಾಗಿರುವುದರಿಂದ ನಾವು ಅವರೊಂದಿಗೆ ಅತ್ಯಂತ ಕಡಿಮೆ ವ್ಯವಹಾರ ನಡೆಸುತ್ತೇವೆ. ಅವರು ಅತಿ ಗರಿಷ್ಠ ತೆರಿಗೆ ವಿಧಿಸುವ ಕಾರಣ ನಾವು ಅವರ ಮೇಲೆ ಶೇ.25ರಷ್ಟು ತೆರಿಗೆ ನಿಗದಿಪಡಿಸಿದ್ದೆವು. ಆದರೆ ಮುಂದಿನ 24 ಗಂಟೆಗಳಲ್ಲಿ ನಾನು ಅದನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ. ಏಕೆಂದರೆ ಅವರು ರಷ್ಯಾದ ತೈಲವನ್ನು ಖರೀದಿಸುತ್ತಿದ್ದಾರೆ. ಯುದ್ಧಯಂತ್ರಕ್ಕೆ ಅವರು ಇಂಧನ ಪೂರೈಸುತ್ತಿದ್ದಾರೆ. ಅವರು ಅದನ್ನು ಮುಂದುವರಿಸಿದರೆ ನನಗೆ ಸಂತೋಷವಾಗುವುದಿಲ್ಲ’ ಎಂದಿದ್ದಾರೆ.
ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸದಿದ್ದರೆ, ತೆರಿಗೆಯನ್ನು ಇತ್ತಷ್ಟು ಏರಿಸುವುದಾಗಿ ಸೋಮವಾರವಷ್ಟೇ ಟ್ರಂಪ್ ಬೆದರಿಕೆ ಹಾಕಿದ್ದರು. ಇದೀಗ 24 ಗಂಟೆಯೊಳಗೆ ಅದನ್ನು ಜಾರಿಗೆ ತರಲು ಮುಂದಾಗಿದ್ದಾರೆ.