ನರೇಂದ್ರ ಮೋದಿ 3ನೇ ಗೆಲುವಿಗೆ ವಿಶ್ವ ನಾಯಕರ ಅಭಿನಂದನೆ

KannadaprabhaNewsNetwork | Updated : Jun 06 2024, 06:39 AM IST

ಸಾರಾಂಶ

ಶ್ರೀಲಂಕಾ, ಮಾಲ್ಡೀವ್ಸ್‌ ಸೇರಿ ಇತರ ರಾಷ್ಟ್ರ ನಾಯಕರ ಶುಭ ಹಾರೈಕೆಗಳು ಟ್ವೀಟ್‌ನಲ್ಲಿ ಉಲ್ಲೇಖವಾಗಿದ್ದು, ಕೆಲವು ಟ್ವೀಟ್‌ಗಳನ್ನು ಇಲ್ಲಿ ಅನುವಾದಿಸಿ ಕೊಡಲಾಗಿದೆ.

ನವದೆಹಲಿ: ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ಭಾರತದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹಲವು ಜಾಗತಿಕ ನಾಯಕರು ನರೇಂದ್ರ ಮೋದಿಗೆ ಟ್ವೀಟ್‌ ಮಾಡಿ ಅಭಿನಂದಿಸಿದ್ದಾರೆ. ಅಲ್ಲದೆ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಮತ್ತಷ್ಟು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲಿ ಎಂದು ಆಶಿಸಿದ್ದಾರೆ. ಅಂತಹ ಹಲವು ನಾಯಕರ ಟ್ವೀಟ್‌ ಹಾರೈಕೆಗಳು ಇಲ್ಲಿವೆ.

ಇಂಡಿಯಾ-ಇಟಲಿ ಸಂಬಂಧ ಸುಧಾರಣೆ

ನರೇಂದ್ರ ಮೋದಿ ಮತ್ತೊಮ್ಮೆ ಗೆಲುವು ಸಾಧಿಸಿದ್ದಕ್ಕೆ ಅಭಿನಂದಿಸಿಇ ಮತ್ತಷ್ಟು ಪ್ರಗತಿಪರ ಕೆಲಸಗಳನ್ನು ಮಾಡಲಿ ಎಂದು ಆಶಿಸುವೆ. ಅಲ್ಲದೆ ಭಾರತ ಹಾಗೂ ಇಟಲಿ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದ್ದು, ಹಲವು ವಿಷಯಗಳಲ್ಲಿ ಸಹಕಾರ ನೀಡಿ ಎರಡೂ ರಾಷ್ಟ್ರಗಳ ಜನರ ಶ್ರೇಯೋಭಿವೃದ್ಧಿಗೆ ಒಟ್ಟಾಗಿ ದುಡಿಯುತ್ತೇವೆ.

ಜಾರ್ಜಿಯಾ ಮೆಲೋನಿ, ಇಟಲಿ ಪ್ರಧಾನಮಂತ್ರಿ

ಅತಿದೊಡ್ಡ ಪ್ರಜಾಪ್ರಭುತ್ವ ಮತ್ತಷ್ಟು ಅಭಿವೃದ್ಧಿ

ಮೂರನೇ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ ಪ್ರಧಾನಿ ಮೋದಿಗೆ ಅಭಿನಂದಿಸುತ್ತೇನೆ. ನಿಮ್ಮ ನಾಯಕತ್ವದಲ್ಲಿ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಭಾರತ ಮಾರಿಷಸ್‌ ಸಂಬಂಧ ಸದಾಕಾಲ ಚಿರಸ್ಥಾಯಿಯಾಗಿರಲಿ ಎಂದು ಆಶಿಸುತ್ತೇನೆ

ಪ್ರವೀಂದ್‌ ಕುಮಾರ್ ಜುಗ್‌ನಾಥ್‌, ಮಾರಿಷಸ್‌ ಪ್ರಧಾನಮಂತ್ರಿ

ಅತಿದೊಡ್ಡ ಚುನಾವಣೆ ಗೆದ್ದಿದ್ದಕ್ಕೆ ಅಭಿನಂದನೆ

ನನ್ನ ಮಿತ್ರ ನರೇಂದ್ರ ಮೋದಿ ಜಾಗತಿಕವಾಗಿ ಅತಿದೊಡ್ಡ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಐತಿಹಅಸಿಕ ಗೆಲುವು ಸಾಧಿಸಿದ್ದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಅವರು ಭಾರತವನ್ನು ವಿಶ್ವದ ಭೂಪಟದಲ್ಲಿ ಮತ್ತಷ್ಟು ಪ್ರಕಾಶಿಸುವಂತೆ ಕಾರ್ಯ ನಿರ್ವಹಿಸಲು ಎಂದು ಆಶಿಸುತ್ತಾ, ಎರಡೂ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿಯಾಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲು ಎದುರು ನೋಡುತ್ತಿದ್ದೇನೆ.

ಷೇರಿಂಗ್‌ ತಾಬ್ಗೆ, ಭೂತಾನ್‌ ಪ್ರಧಾನಮಂತ್ರಿ

ಮೋದಿಗೆ ಅಭಿನಂದನೆ

ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ಸತತ ಮೂರನೇ ಬಾರಿಗೆ ಲೋಕಸಭೆಯಲ್ಲಿ ಗೆಲುವು ಸಿಗಲು ಶ್ರಮಿಸಿದ ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ. ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಭಾರತೀಯರು ಬಹಳ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಯಾಗಿ ಮುಕ್ತಾಯವಾಗಿರುವುದನ್ನು ಕಾಣಲು ಸಂತಸವಾಗುತ್ತದೆ.

ಪ್ರಚಂಡ, ನೇಪಾಳ ಪ್ರಧಾನಮಂತ್ರಿ

ಭಾರತೀಯರ ವಿಶ್ವಾಸದ ದ್ಯೋತಕ

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು ದೊರಕಿರುವುದು ಭಾರತೀಯರಿಗೆ ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಕಾಣಲಿದೆ ಎಂಬ ವಿಶ್ವಾಸವನ್ನು ತೋರ್ಪಡಿಸುತ್ತದೆ. ಭಾರತದ ನೆರೆದೇಶವಾಗಿ ಅವರ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಬಯಸುತ್ತೇವೆ.

ರನಿಲ್‌ ವಿಕ್ರಮಸಿಂಘೆ, ಶ್ರೀಲಂಕಾ ಅಧ್ಯಕ್ಷ

ಮೋದಿಯ ಸೇವೆಗೆ ಜನರ ಗಿಫ್ಟ್‌

ಭಾರತದಲ್ಲಿ ಸತತವಾಗಿ ಮೂರನೇ ಬಾರಿಗೆ ಗೆದ್ದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಭಿನಂದಿಸುತ್ತೇನೆ. ದೇಶದ ಜನರು ಮೋದಿಯ ಸೇವೆ ಮತ್ತು ದೂರದೃಷ್ಟಿಗೆ ಮತ ನೀಡಿದ್ದಾರೆ. ಅವರ ಜೊತೆಗೆ ನಮ್ಮ ಸರ್ಕಾರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಬಯಸುತ್ತಿದೆ.

ಮಹಿಂದಾ ರಾಜಪಕ್ಸ, ಶ್ರೀಲಂಕಾ ಮಾಜಿ ಪ್ರಧಾನಮಂತ್ರಿ ಹಾಗೂ ಮಾಜಿ ಅಧ್ಯಕ್ಷ

ನೆರೆಯವರಿಗೆ ಮೊದಲ ಆದ್ಯತೆ ಬಯಸುತ್ತೇವೆ

ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಗೆಲುವು ಸಾಧಿಸಿದ್ದಕ್ಕೆ ಶುಭ ಕೋರುತ್ತೇನೆ. ಇತ್ತೀಚೆಗೆ ಭಾರತ ತೆಗೆದುಕೊಂಡ ಕ್ರಾಂತಿಕಾರಕ ನೀತಿಗಳಿಂದ ಸ್ಫೂರ್ತಿ ಪಡೆದಿದ್ದು, ನೆರೆ ದೇಶಗಳಿಗೆ ಮೊದಲ ಆದ್ಯತೆ ಕೊಡುವಂತಹ ವಿದೇಶಾಂಗ ನೀತಿಯನ್ನು ಭಾರತ ಅನುಷ್ಠಾನಗೊಳಿಸಲಿ ಎಂದು ಬಯಸುತ್ತೇವೆ

ಸಜಿತ್‌ ಪ್ರೇಮದಾಸ, ಶ್ರೀಲಂಕಾ ಪ್ರತಿಪಕ್ಷ ನಾಯಕ

ಮೋದಿಗೆ ಅಭಿನಂದನೆ

ಭಾರತದ ಪ್ರಧಾನಿ ಮೋದಿ ಐತಿಹಾಸಿಕ ಗೆಲುವು ಸಾಧಿಸಿರುವುದಕ್ಕೆ ತುಂಬು ಹೃದಯದ ಶುಭಾಶಯ ಕೋರುತ್ತೇನೆಶೀ ಮೂಲಕ ಭಾರತೀಯರು ಕೆಲಸ ಮಾಡುವ ಜನರಿಗೆ ಎಂದಿಗೂ ಕೈ ಬಿಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ಧಾರೆ. ಪುರಾತನ ಕಾಲದಿಂದಲೂ ಭಾರತದ ಜೊತೆಗೆ ಶ್ರೀಲಂಕಾಗೆ ಸಂಬಂಧವಿದ್ದು, ಅವರೊಂದಿಗೆ ಕೆಲಸ ಮಾಡಿ ಎರಡೂ ದೇಶಗಳು ಅಭಿವೃದ್ಧಿಯತ್ತ ಸಾಗುವುದನ್ನು ಎದುರು ನೋಡುತ್ತಿದ್ದೇನೆ.

ಶರತ್‌ ಫೋನ್ಸೆಕಾ, ಶ್ರೀಲಂಕಾ ಸಚಿವ ಹಾಗೂ ಮಾಜಿ ಸೇನಾ ಕಮಾಂಡರ್‌.

ಒಟ್ಟಿಗೆ ಕೆಲಸ ಮಾಡಲು ಉತ್ಸುಕ

ಸತತವಾಗಿ ಮೂರನೇ ಬಾರಿಗೆ ಗೆಲುವು ಸಾಧಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಎರಡೂ ರಾಷ್ಟ್ರಗಳು ಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಒಟ್ಟಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.

ಮೊಹಮ್ಮದ್‌ ಮುಯಿಜು, ಮಾಲ್ಡೀವ್ಸ್‌ ಅಧ್ಯಕ್ಷಮಾಲ್ಡೀವ್ಸ್‌-ಭಾರತ ಬಂಧ ಗಟ್ಟಿಯಾಗಲಿದೆ.

ಮೂರನೇ ಬಾರಿಗೆ ಅಧಿಕಾರಕ್ಕೇರಿದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ತುಂಬು ಹೃದಯದ ಅಭಿನಂದನೆಗಳು. ಈ ಬಾರಿಯೂ ಸಹ ಯಾವುದೇ ಗೊಂದಲಗಳಿಲ್ಲದೆ ತಮ್ಮ ಅವಧಿಯನ್ನು ಪೂರೈಸುವ ವಿಶ್ವಾಸವಿದೆ. ಜೊತೆಗೆ ಮಾಲ್ಡೀವ್ಸ್‌-ಭಾರತದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸವಿದೆ.

ಮೊಹಮ್ಮದ್‌ ನಶೀದ್‌, ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷಮಾಲ್ಡೀವ್ಸ್‌ ಸಂಬಂಧದಲ್ಲಿ ಸುಧಾರಣೆ

ಸತತವಾಗಿ ಮೂರನೇ ಬಾರಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಅಭಿನಂದಿಸುತ್ತೇನೆ. ನಿಮ್ಮ ಅವಧಿಯಲ್ಲಿ ಭಾರತ ಮಾಲ್ಡೀವ್ಸ್‌ ಸಂಬಂಧವನ್ನು ಸುಧಾರಿಸಲು ಬಹಳಷ್ಟು ಪ್ರಯತ್ನಪಟ್ಟಿದ್ದು, ನಿಮ್ಮ ಗೆಲುವು ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ರಹದಾರಿಯಾಗಲಿದೆ ಎಂಬ ವಿಶ್ವಾಸವಿದೆ.

ಅಬ್ದುಲ್ಲಾ ನಶೀದ್‌, ಮಾಲ್ಡೀವ್ಸ್‌ ಉದ್ಯಮಿ.

ನರೇಂದ್ರ ಮೋದಿಗೆ ಅಭಿನಂದನೆ

ಐತಿಹಾಸಿಕವಾಗಿ ಸತತ ಮೂರನೇ ಬಾರಿಗೆ ಭಾರತ ಸರ್ಕಾರವನ್ನು ಮುನ್ನಡೆಸಲು ಸಿದ್ಧರಾಗಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಶುಭ ಕೋರುತ್ತೇನೆ

ಆ್ಯಂಡ್ರ್ಯೂ ಹಾಲ್‌ನೆಸ್‌, ಜಮೈಕಾ ಪ್ರಧಾನಮಂತ್ರಿ.

ಸಂಬಂಧ ಮತ್ತಷ್ಟು ಗಟ್ಟಿಯಾಗಲಿ ಎಂದು ಆಶಿಸುವೆ

ಭಾರತದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಅಭಿನಂದಿಸುತ್ತೇನೆ. ನಿಮ್ಮ ನಾಯಕತ್ವದಲ್ಲಿ ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಮತ್ತಷ್ಟು ಗಟ್ಟಿಯಾಗಿ ಹಲವು ಯೋಜನೆಗಳಲ್ಲಿ ಸಹಕಾರ ನೀಡುವಂತಾಗಲಿ ಎಂದು ಆಶಿಸುತ್ತೇನೆ.

ಹುಸೇನ್‌ ಮೊಹಮ್ಮದ್‌ ಲತೀಫ್‌, ಮಾಲ್ಡೀವ್ಸ್‌ ಉಪಾಧ್ಯಕ್ಷ

ಭಾರತವನ್ನು ವಿಶ್ವಗುರು ಮಾಡಿದ ಮೋದಿ

ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಚುನಾವಣೆಯಲ್ಲಿ ಸತತವಾಗಿ ಮೂರನೇ ಬಾರಿ ಗೆಲುವು ಸಾಧಿಸಿರುವುದಕ್ಕೆ ಶುಭ ಕೋರುತ್ತೇನೆ. ಇವರ ನಾಯಕತ್ವದಲ್ಲಿ ಭಾರತ ಕೆರೆಬಿಯನ್‌ ಪ್ರಾಂತ್ಯಗಳ ಜೊತೆ ಸಂಬಂಧ ಬೆಳೆಸಿದ್ದು, ಈ ಸಂಬಂಧ ಮತ್ತಷ್ಟು ಗಟ್ಟಿಯಾಗಿ ಒಗ್ಗಟ್ಟಿನಿಂದ ಮುನ್ನಡೆಯೋಣ.

ಮಿಯಾ ಅಮೊರ್‌ ಮಾಟ್‌ಲಿ, ಬಾರ್ಬಡೋಸ್‌ ಪ್ರಧಾನಮಂತ್ರಿ

Share this article