ಸಾರಾಂಶ
ಬೆಂಗಳೂರು : ಶಾಲಾ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಖಾಸಗಿ ಶಾಲೆ ಅಧ್ಯಕ್ಷರಾಗಿರುವ ಕಾಂಗ್ರೆಸ್ ಮುಖಂಡರೊಬ್ಬರ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಖಾಸಗಿ ಶಾಲೆಯ ಮಾಜಿ ಶಿಕ್ಷಕಿಯಾಗಿರುವ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕಾಂಗ್ರೆಸ್ ಮುಖಂಡ ಗುರಪ್ಪ ನಾಯ್ಡು ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದೂರಿನಲ್ಲಿ ಏನಿದೆ?: ಸಂತ್ರಸ್ತೆ ನೀಡಿದ ದೂರಿನ ಅನ್ವಯ, ನಾನು 3 ವರ್ಷಗಳ ಕಾಲ ತ್ಯಾಗರಾಜನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ. ಈ ಶಾಲೆಗೆ ಕಾಂಗ್ರೆಸ್ ಮುಖಂಡ ಗುರಪ್ಪ ನಾಯ್ಡು ಅಧ್ಯಕ್ಷರಾಗಿದ್ದಾರೆ. ಈ ಶಾಲೆಯಲ್ಲಿ ಸುಮಾರು 75ಕ್ಕೂ ಅಧಿಕ ಮಹಿಳಾ ಶಿಕ್ಷಕಿಯರು ಕೆಲಸ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕಿಯರು ಹಾಗೂ ಸಿಬ್ಬಂದಿ ಪೈಕಿ ಬಹುತೇಕರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರು. ಕೆಲ ಸಿಬ್ಬಂದಿ ತಮ್ಮ ಮಕ್ಕಳನ್ನು ಈ ಶಾಲೆಯಲ್ಲಿ ಓದಿಸುತ್ತಿದ್ದಾರೆ.
ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್: ಈ ಶಾಲೆಯ ಅಧ್ಯಕ್ಷನಾಗಿರುವ ಗುರಪ್ಪ ನಾಯ್ಡು ಹೆಂಗಸರನ್ನು ಬೆನ್ನಟ್ಟುವ ವಿಕೃತ ಕಾಮಿ. ಶಾಲೆಯಲ್ಲಿ ಯಾವ ಹೆಣ್ಣು ಮಕ್ಕಳನ್ನು ಬೀಡುವುದಿಲ್ಲ. ಇವರನ್ನು ಕಂಡರೆ ಶಾಲೆಯಲ್ಲಿ ಎಲ್ಲರೂ ಹೆದರುತ್ತಾರೆ. ತಮ್ಮ ಜತೆ ಇರುವ ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋ ಮಾಡಿಕೊಂಡು ಆ ಹೆಣ್ಣುಮಕ್ಕಳನ್ನು ಬೆದರಿಸುತ್ತಾರೆ. ನಾನು ಹೇಳಿದಂತೆ ಕೇಳಿದಿದ್ದರೆ ಈ ವಿಡಿಯೋಗಳನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸುತ್ತಾರೆ. ತನ್ನ ವಿರುದ್ಧ ದೂರು ಕೊಟ್ಟರೆ ಸುಮ್ಮನೆ ಬಿಡುವುದಿಲ್ಲ ಜೀವ ಬೆದರಿಕೆ ಹಾಕುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶಿಕ್ಷಕಿಯರಿಗೆ ಚಿತ್ರಹಿಂಸೆ ಆರೋಪ: ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾಕಷ್ಟು ಹೆಣ್ಣು ಮಕ್ಕಳನ್ನು ಗುರಪ್ಪ ನಾಯ್ಡು ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾರೆ. ಬಡ ಕುಟುಂಬಗಳಿಗೆ ಸೇರಿದ ಈ ಹೆಣ್ಣು ಮಕ್ಕಳು ಈ ವಿಚಾರವನ್ನು ಯಾರ ಬಳಿಯೂ ಹಂಚಿಕೊಳ್ಳಲಾಗದೆ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಈತನ ವಿರುದ್ಧ ದೂರು ನೀಡಿದರೆ, ನಮ್ಮದೇ ಮರ್ಯಾದೆ ಹೋಗಲಿದೆ ಎಂದು ಯಾರೊಬ್ಬರೂ ದೂರು ನೀಡಲು ಮುಂದೆ ಬರುತ್ತಿಲ್ಲ. ನಾನು ಸಹ ಈ ಶಾಲೆಯಲ್ಲಿ 2021ರಿಂದ 2023ರ ವರೆಗೆ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ. ಈ ವೇಳೆ ಗುರಪ್ಪ ನಾಯ್ಡು ಉದ್ದೇಶ ಪೂರ್ವಕವಾಗಿ ಕಚೇರಿಗೆ ಕರೆಸಿಕೊಂಡು ಅಸಭ್ಯವಾಗಿ ಮಾತನಾಡುವುದು, ದೇಹ ಸ್ಪರ್ಶಿಸುವುದು ಸೇರಿ ಹಲವು ರೀತಿ ಲೈಂಗಿಕ ಕಿರುಕುಳ ನೀಡಿದ್ದಾರೆ.
ದೂರು ನೀಡದಂತೆ ಬೆದರಿಕೆ: ಶಾಲೆಯಲ್ಲಿ ನಡೆದ ವಿಷಯವನ್ನು ತಾಯಿ ಬಳಿ ಹೇಳಿಕೊಂಡಾಗ, ಕೆಲಸಕ್ಕೆ ಹೋಗುವುದು ಬೇಡ ಎಂದು ಕೆಲಸ ಬಿಡಿಸಿದರು. ನಾನು ಮನೆಯಲ್ಲಿ ಇದ್ದರೂ ಗುರಪ್ಪ ನಾಯ್ಡು ಕಿರುಕುಳವೇ ಕಣ್ಣ ಮುಂದೆ ಬರುತ್ತಿದೆ. ಗುರಪ್ಪ ನಾಯ್ಡು ಶಾಲೆಯ ಅನೇಕ ಶಿಕ್ಷಕಿಯರು ಹಾಗೂ ಸಿಬ್ಬಂದಿಯನ್ನು ಲೈಂಗಿಕವಾಗಿ ಹಿಂಸಿಸಿ, ಬಲವಂತವಾಗಿ ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ. ಖಾಸಗಿ ವಿಡಿಯೋ ಇರಿಸಿಕೊಂಡು ಯಾರೋಬ್ಬರೂ ದೂರು ನೀಡದಂತೆ ಹೆದರಿಸುತ್ತಿದ್ದಾರೆ. ಹೀಗಾಗಿ ಗುರಪ್ಪ ನಾಯ್ಡು ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ.