ಸಾರಾಂಶ
ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಕೆಲ ದಿನಗಳ ಹಿಂದಷ್ಟೇ ಕುರಿಗಾಹಿಗಳ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಲ್ಲದೆ ಕುರಿಯನ್ನು ಹೊತ್ತೊಯ್ದು ತಿಂದುಹಾಕಿತ್ತು. ಆ ಘಟನೆ ಮಾಸುವ ಮುನ್ನವೆ ಬೇಲೂರು ತಾಲೂಕಿನ ಯಲಹಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮ್ಮನಹಳ್ಳಿ ಮಂಜೇಗೌಡ ಎಂಬುವವರಿಗೆ ಸೇರಿದ ಹಸುವನ್ನು ಎಳೆದೊಯ್ದು ತಿಂದುಹಾಕಿದೆ. ಹಸು ಮನೆಗೆ ಬಂದಿರಬಹುದು ಎಂದು ಬಂದು ಅಕ್ಕಪಕ್ಕದಲ್ಲಿ ಹುಡುಕಿ ಸಿಗದಿದ್ದ ಹಿನ್ನೆಲೆಯಲ್ಲಿ ಊರಿನಲ್ಲಿ ಹುಡುಕುವ ಸಂದರ್ಭದಲ್ಲಿ ಹಸುವನ್ನು ಚಿರತೆ ತಿಂದುಹಾಕಿದ್ದು ಪತ್ತೆಯಾಗಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಹಳೇಬೀಡು ಹೋಬಳಿಯಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಕೆಲ ದಿನಗಳ ಹಿಂದಷ್ಟೇ ಕುರಿಗಾಹಿಗಳ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಲ್ಲದೆ ಕುರಿಯನ್ನು ಹೊತ್ತೊಯ್ದು ತಿಂದುಹಾಕಿತ್ತು. ಆ ಘಟನೆ ಮಾಸುವ ಮುನ್ನವೆ ಬೇಲೂರು ತಾಲೂಕಿನ ಯಲಹಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮ್ಮನಹಳ್ಳಿ ಮಂಜೇಗೌಡ ಎಂಬುವವರಿಗೆ ಸೇರಿದ ಹಸುವನ್ನು ಎಳೆದೊಯ್ದು ತಿಂದುಹಾಕಿದೆ.ಬುಧವಾರ ತಮ್ಮ ಹೊಲದಲ್ಲಿ ಹಸುವನ್ನು ಬಿಟ್ಟುಕೊಂಡು ಜೋಳ ಮುರಿಯುತ್ತಿದ್ದ ಸಂದರ್ಭದಲ್ಲಿ ಸಂಜೆ ೪ ಗಂಟೆ ಸಮಯದಲ್ಲಿ ಹಸು ನಾಪತ್ತೆಯಾಗಿತ್ತು.
ಈ ವೇಳೆ ಮಾತನಾಡಿದ ರೈತ ಮಂಜೇಗೌಡ ಚಿರತೆಗಳ ಉಪಟಳ ಹೆಚ್ಚಾಗಿದ್ದು, ಹಲವಾರು ಬಾರಿ ಚಿರತೆಗಳು ಓಡಾಡುವ ಗುರುತು ಸಿಕ್ಕಿದ್ದು ಅವುಗಳನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಅದನ್ನು ಹಿಡಿಯುತ್ತಿಲ್ಲ. ಇದಕ್ಕೆ ಯಾರು ಹೊಣೆ? ಕೂಡಲೆ ಇದನ್ನು ಹಿಡಿಯುವಂತೆ ಒತ್ತಾಯಿಸಿದರು.ಈಗಾಗಲೇ ಈ ಭಾಗದಲ್ಲಿ ಚಿರತೆಗಳು ಕಂಡುಬಂದಿದೆ ಎಂದು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಅಲ್ಲಿ ಚಿರತೆ ಹಿಡಿಯುವ ಬೋನು ಇಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ವಲಯಾರಣ್ಯಾಧಿಕಾರಿ ಯತೀಶ್ ತಿಳಿಸಿದರು.