ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಗಳನ್ನು ಸ್ಥಾಪನೆ ಮಾಡುವ ಜೊತೆಗೆ ತಾಲೂಕಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉನ್ನತ ಶಿಕ್ಷಣ ದೊರಕುವ ನಿಟ್ಟಿನಲ್ಲಿ ಮಹಾವಿದ್ಯಾಲಯಗಳನ್ನು ಆರಂಭಿಸಿ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಕೈಗೊಂಡಿದ್ದಾರೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಶಾಸಕ ಲಕ್ಷ್ಮಣ ಸವದಿ ಅವರು ಕೃಷ್ಣ ರೈತ ಭವನದಲ್ಲಿ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಜನಪರ ಕಾಳಜಿ ಹೊಂದಿರುವ ಲಕ್ಷ್ಮಣ ಸವದಿ ನಾಡಿನ ಅಪರೂಪದ ರಾಜಕಾರಣಿ. ಮತಕ್ಷೇತ್ರಕ್ಕೆ ಅನೇಕ ಪ್ರೌಢಶಾಲೆಗಳನ್ನು, ವಸತಿ ಶಾಲೆಗಳನ್ನು, ಆಂಗ್ಲ ಮಾಧ್ಯಮ ಶಾಲೆಗಳನ್ನು, ಕೇಂದ್ರಿಯ ಮಹಾವಿದ್ಯಾಲಯ, ಪಶು ವೈದ್ಯಕೀಯ ಮಹಾವಿದ್ಯಾಲಯ, ಕೃಷಿ ಮಹಾವಿದ್ಯಾಲಯ, ಕಾಲೇಜುಗಳನ್ನು ಆರಂಭಿಸಿದ್ದಾರೆ. ಇದರಿಂದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲುಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಇಂಜಿನಿಯರಿಂಗ್ ಮಹಾವಿದ್ಯಾಲಯವನ್ನು ಆರಂಭಿಸುವಂತೆ ಸಲಹೆ ನೀಡಿದರು.ಮಕ್ಕಳಿಗೆ ಆಸ್ತಿ ಗಳಿಸುವುದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು. ಇಂದಿನ ಮಕ್ಕಳಿಗೆ ಕೇವಲ ಅಂಕ ಗಳಿಸುವ ಶಿಕ್ಷಣ ನೀಡಿದರೆ ಸಾಲದು, ಅವರಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ, ದೇಶಾಭಿಮಾನ ಬೆಳೆಸುವುದು ಅಗತ್ಯವಾಗಿದೆ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.ಶೇಗುಣಿಸಿ ವಿರಕ್ತ ಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಇಂದಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು, ಉತ್ತಮ ಸಂಸ್ಕಾರ ಕಲಿಸುವುದು ಅಗತ್ಯವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸುತ್ತಿರುವ ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಶ್ರೀಮಂತಿಕೆಯ ಬಗ್ಗೆ ಅರಿವು ಮೂಡಿಸಬೇಕು. ಆದ್ದರಿಂದ, ನಾವು ಅನೇಕ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಂಕಲ್ಪ ಮಾಡಿದ್ದಾಗಿ ತಿಳಿಸಿದರು.ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಬಿರಾದಾರ ಪಾಟೀಲ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಅಥಣಿ ಕೀರ್ತಿ ಹೆಚ್ಚಿಸಿದ್ದಾಳೆ. ಆದರ್ಶ ಶಾಲೆಯ ವಿದ್ಯಾರ್ಥಿ ದಶರಥ ಬೋಸಲೆ ಎರಡನೇ ಸ್ಥಾನ ಪಡೆದಿದ್ದು ಹೆಮ್ಮೆ. ಇದಕ್ಕೆಲ್ಲ ಕಳಸಪ್ರಾಯ ಎಂಬಂತೆ ಸವದಿ ಗ್ರಾಮದ ಬಸವರಾಜ ಕೆಂಪವಾಡ ಐಎಫ್ಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದು ತಾಲೂಕಿಗೆ ದೊಡ್ಡ ಹೆಮ್ಮೆಯಾಗಿದೆ. ಇಂತಹ ವಿಶೇಷ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಲಿದೆ ಎಂದರು.ಅಥಣಿ ತಾಲೂಕಿನಲ್ಲಿ ನಾನು ಶಾಸಕನಾದ ನಂತರ ಮಾಡಿರುವ ಶೈಕ್ಷಣಿಕ ಯೋಜನೆಗಳು, ನೀರಾವರಿ ಯೋಜನೆಗಳು ನಮ್ಮ ರೈತರ ಬದುಕಿನಲ್ಲಿ ಆಶಾಕಿರಣ ಮೂಡಿಸಿವೆ. ಈಗ ಮತಕ್ಷೇತ್ರದಲ್ಲಿ ಆಗಿರುವ ಶೈಕ್ಷಣಿಕ ಸುಧಾರಣೆ ಮತ್ತು ನೀರಾವರಿ ಯೋಜನೆಗಳು ನನಗೆ ಸಂತೃಪ್ತಿ ತಂದಿದೆ. ಗ್ರಾಮೀಣ ಬಡ ವಿದ್ಯಾರ್ಥಿಗಳು, ರೈತರ ಮಕ್ಕಳು ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಖುಷಿ ತಂದಿದೆ. ತಮ್ಮೆಲ್ಲರ ಆಶೀರ್ವಾದದಿಂದ ಮತಕ್ಷೇತ್ರದಲ್ಲಿ ಇನ್ನಷ್ಟು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿ ಮಾಡುವ ಸಂಕಲ್ಪ ಹೊಂದಿದ್ದಾಗಿ ತಿಳಿಸಿದರು.ಈ ಪ್ರತಿಭಾ ಪುರಸ್ಕಾರ ಇನ್ನಿತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ, ನಿಮ್ಮೆಲ್ಲರ ಬದುಕು ಬಂಗಾರವಾಗಲಿ, ತಮ್ಮ ಮುಂದಿನ ಶೈಕ್ಷಣಿಕ ಜೀವನದಲ್ಲಿ ಹೊಸ ಬೆಳಕು ಮೂಡಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.೮೫ ಕ್ಕಿಂತ ಅಧಿಕ ಅಂಕ ಪಡೆದ ೨೨೦೦ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಪನ್ಯಾಸಕ ಶರಣಯ್ಯ ಬಂಡಾರಿಮಠ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಯುವ ಮುಖಂಡ ಚಿದಾನಂದ ಸವದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಶಿಕ್ಷಣ ಪ್ರೇಮಿ ಶ್ರೀಶೈಲ ನಾರಗೊಂಡ, ಸಿದರಾಯ ಯಲಡಗಿ, ಆನಂದ ದೇಶಪಾಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಬೆಣ್ಣೆದೋಸೆ ಸವಿದ ಮಕ್ಕಳು: ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರಿಗೆ ವಿಶೇಷ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಬೆಣ್ಣೆ ದೋಸೆ, ಶಿರಾ, ಇನ್ನಿತರ ಸಿಹಿ ಪದಾರ್ಥಗಳನ್ನು ಸವಿದು ಖುಷಿ ಪಟ್ಟರು.

---------

ಕೋಟ್‌ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಾವು ಉನ್ನತ ಶಿಕ್ಷಣವನ್ನ ಪಡೆದುಕೊಂಡ ನಂತರ ಯಾವುದೇ ಹುದ್ದೆ ಅಲಂಕರಿಸಿದರೂ ತಮಗೆ ಜನ್ಮ ನೀಡಿ ಬೆಳೆಸಿದ ತಂದೆ ತಾಯಿ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರ ಋಣವನ್ನು ಎಂದಿಗೂ ಮರೆಯಬಾರದು. ಸಮಾಜ ಮುಖಿ ಸೇವೆಗಳನ್ನು ಮಾಡುವ ಮೂಲಕ ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. - ಲಕ್ಷ್ಮಣ ಸವದಿ, ಶಾಸಕರು ಅಥಣಿ.