ಕನಕಗಿರಿ: ಅತಿಯಾದ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣ, ಗೇಮಿಂಗ್ ನಂತಹ ಗೀಳುಗಳು ಯುವ ಸಮೂಹವನ್ನು ದಾರಿ ತಪ್ಪಿಸುತ್ತಿದ್ದು, ಸಾಧನೆ ಎಂಬುದು ಕಮರಿ ಹೋಗುತ್ತಿದೆ ಎಂದು ಕುವೆಂಪು ಭಾಷಾ ಪ್ರಾಧಿಕಾರದ ಸದಸ್ಯ ಜಾಜಿ ದೇವೇಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ಅವರು ಪಟ್ಟಣದ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸಪ್ರದ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಬಿಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಭಾರತ ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯ ಯುವ ಜನತೆ ಹೊಂದಿರುವ ದೇಶವಾಗಿದ್ದರೂ ಉತ್ಪಾದಕತೆಯಲ್ಲಿ ಸಾಕಷ್ಟು ಹಿಂದುಳಿದಿರುವುದು ಶೋಚನೀಯ. ಲಕ್ಷಾಂತರ ಯುವಕರು ಪದವಿ ಮುಗಿಸಿ ಹೊರ ಬರುತ್ತಿದ್ದಾರಾದರೂ, ಉದ್ಯೋಗ ಹೇಗೆ ಪಡೆಯಬೇಕೆನ್ನುವ ಜ್ಞಾನ, ಕೌಶಲ್ಯ ಹೊಂದಿರುವವರು ಬೆರಳಣಿಕೆ ಮಾತ್ರ. ಮೊಬೈಲ್, ಜಾಲತಾಣ ಮತ್ತು ಗೇಮಿಂಗಗಳು ಯುವಕರನ್ನು ಹುಚ್ಚರನ್ನಾಗಿವೆ ಮಾಡಿವೆ. ಆ ಹುಚ್ಚುತನದಿಂದ ಹೊರಬಂದು ಸಾಧನೆಯ ಶಿಖರವೇರಲು ಶ್ರಮಿಸಬೇಕು ಎಂದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಜರಂಗಬಲಿ ಮಾತನಾಡಿ, ಉನ್ನತ ಶಿಕ್ಷಣ ಪಡೆಯುವ ಆಸೆ-ಕನಸು ಹೊತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸ್ನಾತಕೋತ್ತರ ಕೇಂದ್ರ ಕೊಪ್ಪಳ ವಿಶ್ವವಿದ್ಯಾಲಯ ನೀಡಿದರೆ ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯವಾಗಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಮ್ಮಲ್ಲಿ ಈಗಾಗಲೇ ವಿಜ್ಞಾನ ವಿಭಾಗ ತೆರೆಯಲಾಗಿದೆ. ಹಾಗೆಯೇ ಸ್ನಾತಕೋತ್ತರ ಪದವಿ ಶಿಕ್ಷಣ ನೀಡಲು ಸಾಧ್ಯವಾದರೆ ಅದು ಖಂಡಿತ ಈ ಭಾಗದ ಶಿಕ್ಷಣ ಕ್ಷೇತ್ರ ಬೆಳೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಕನ್ನಡ ವಿಭಾಗದ ಮುಖ್ಯಸ್ಥೆ ಲಲಿತಾ ಕಿನ್ನಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದಿಂದ ಜ್ಞಾನ ಸ್ಪೂರ್ತಿ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಪ್ರಾಧ್ಯಾಪಕ ರಕ್ಷಿತ್, ವೀರೇಶ್ ಕೆಂಗಲ್, ಸರ್ವಮಂಗಳಮ್ಮ, ನಫೀಸ್ ಬಾನು, ಸಂಗಮೇಶ್, ಉಪನ್ಯಾಸಕ ಅಮರೇಶ, ವಿಜಯ್ ಸರೋದೆ, ಹುಲಿಗೆಮ್ಮ ಸೇರಿದಂತೆ ಇತರರಿದ್ದರು.