ಸಾರಾಂಶ
ರಾಣಿಬೆನ್ನೂರು ತಾಲೂಕಿನ ಹೊಸ ಚಂದಾಪುರ ಗ್ರಾಮದಲ್ಲಿ ತುಂಗಭದ್ರಾ ನದಿ ನೆರೆ ಸಂತ್ರಸ್ತರಿಗೆ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಚಿಕ್ಕಕುರುವತ್ತಿ ಗ್ರಾಪಂ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ರಾಣಿಬೆನ್ನೂರು: ತಾಲೂಕಿನ ಹೊಸ ಚಂದಾಪುರ ಗ್ರಾಮದಲ್ಲಿ ತುಂಗಭದ್ರಾ ನದಿ ನೆರೆ ಸಂತ್ರಸ್ತರಿಗೆ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಚಿಕ್ಕಕುರುವತ್ತಿ ಗ್ರಾಪಂ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಗ್ರಾಮದ ರಾಜಶೇಖರ ಮಾತನಾಡಿ, ನೆರೆ ಸಂತ್ರಸ್ತರಿಗೆ ವಿತರಿಸಲು ಹೊಸ ಚಂದಾಪುರದಲ್ಲಿ ೩೩೬ ನಿವೇಶನ ಸಿದ್ಧಪಡಿಸಿ, ಅದರಲ್ಲಿ ಸರ್ಕಾರದಿಂದ ೧೨೯ ಜನರಿಗೆ ಮಾತ್ರ ಅಧಿಕೃತವಾಗಿ ಹಂಚಿಕೆ ಮಾಡಲಾಗಿದೆ. ಆದರೆ, ಸದ್ಯ ಗ್ರಾಮದಲ್ಲಿ ಬೆರೆಳೆಣಿಕೆಯಷ್ಟು ಮಾತ್ರ ನಿವೇಶನ ಉಳಿದುಕೊಂಡಿವೆ.ನಿವೇಶನ ಹಂಚಿಕೆಯಲ್ಲಿ ಕೆಲವು ಅಧಿಕಾರಿಗಳು, ಜನಪ್ರತಿನಿಧಿಗಳು ಅಕ್ರಮ ಎಸಗಿದ್ದಾರೆ. ಅಲ್ಲದೆ ತಹಸೀಲ್ದಾರ್ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ನೀಡಿ ಮೋಸ ಮಾಡಲಾಗಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಜಿಪಂ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳು, ಗ್ರಾಪಂ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರಾದ ಮಲ್ಲಪ್ಪ ಗಂಟಿ, ಈರಣ್ಣ ಅಂಬಿಗೇರ, ರುದ್ರಪ್ಪ ಹುಲಮನಿ, ಶಿವಾಜಿ ನನ್ನೂರಿ, ದರ್ಶನ ಕಂಚಾರಗಟ್ಟಿ, ಶಿವಕುಮಾರ ಬಣಕಾರ, ಸಚಿನ್ ಕುದುರಿಹಾಳ, ಸುರೇಶ ಬಂಗಿ, ಸಾಕವ್ವ ಕಡತಿ, ಮಾರುತಿ ಕಂಚಾರಗಟ್ಟಿ, ನಿರ್ಮಲಾ ಮಾಳಗಿ, ಉಡಚವ್ವ ಬಾರ್ಕಿ, ಮೀನಾಕ್ಷವ್ವ ಗಂಟಿ, ನಾಗಮ್ಮ ಗಂಟಿ, ಪಾರವ್ವ ಕಂಚಾರಗಟ್ಟಿ, ಲಕ್ಷ್ಮವ್ವ ಹೊನ್ನತೆಪ್ಪನವರ ಮತ್ತಿತರರು ಪಾಲ್ಗೊಂಡಿದ್ದರು.