ಮಣಿಪಾಲ: ಇಲ್ಲಿನ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿವಿಯು ತನ್ನ ಪ್ರಕಾಶನ ವಿಭಾಗ ಮಣಿಪಾಲ್ ಯುನಿವರ್ಸಲ್ ಪ್ರೆಸ್‌ (ಎಂಯುಪಿ)ನ 317ನೇ ಪ್ರಕಟಣೆ, ಮಾಹೆ ಮಣಿಪಾಲದ ಆರೋಗ್ಯ ಮತ್ತು ದಂತ ವಿಜ್ಞಾನ ವಿಭಾಗದ ನಿಕಟಪೂರ್ವ ಸಹ ಕುಲಪತಿ ಡಾ. ಪಿ.ಎಲ್.ಎನ್.ಜಿ. ರಾವ್ ಅವರು ರಚಿಸಿರುವ ‘ಅಟ್ಲಾಸ್ ಆಫ್ ಡೆವಲಪ್‌ಮೆಂಟ್ ಅನಾಮಲೀಸ್ ಇನ್ ದಿ ನ್ಯೂಬಾರ್ನ್ಸ್’ ಕೃತಿ ಬುಧವಾರ ಬಿಡುಗಡೆಗೊಂಡಿತು. ಈ ಕೃತಿಯನ್ನು ಬಿಡುಗಡೆ ಮಾಡಿದ ಮಾಹೆ ಕುಲಪತಿ ಡಾ. ಶರತ್ ಕೆ. ರಾವ್, “ವೈದ್ಯಕೀಯ ಸಾಹಿತ್ಯ ಲೋಕಕ್ಕೆ ಈ ಪುಸ್ತಕವು ಅಪೂರ್ವ ಹಾಗೂ ಗಮನಾರ್ಹ ಕೊಡುಗೆಯಾಗಿದೆ. ದಶಕಗಳ ಕಾಲ ನಡೆಸಿದ ನಿರಂತರ ವೈದ್ಯಕೀಯ ಅಧ್ಯಯನ ಮತ್ತು ಸೂಕ್ಷ್ಮ ದಾಖಲೀಕರಣದ ಶ್ರಮ ಇದರಲ್ಲಿದೆ. ವೈದ್ಯಕೀಯ ವಿದ್ಯಾರ್ಥಿಗಳು, ಇಂಟರ್ನ್‌ಗಳು, ಕನ್ಸಲ್ಟೆಂಟ್‌ಗಳು ಹಾಗೂ ತಜ್ಞರು ಸೇರಿದಂತೆ ಆರೋಗ್ಯ ಕ್ಷೇತ್ರದ ಎಲ್ಲ ವೃತ್ತಿಪರರಿಗೂ ಅತ್ಯಂತ ಉಪಯುಕ್ತ ಕೈಪಿಡಿಯಾಗಲಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, “ವೈದ್ಯಕೀಯ ಶಿಕ್ಷಣದಲ್ಲಿ ಚಿತ್ರಾತ್ಮಕ ಪಠ್ಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ದಶಕಗಳ ಕಾಲ ಇಂತಹ ಅಪರೂಪದ ವೈದ್ಯಕೀಯ ಚಿತ್ರಗಳನ್ನು ಸಂರಕ್ಷಿಸಿ, ಕ್ರೋಢೀಕರಿಸಲು ಅಪಾರ ಶ್ರಮ ಬೇಕಾಗುತ್ತದೆ. ಈ ಕೃತಿಯು ಕೇವಲ ಸಾಂಪ್ರದಾಯಿಕ ಪಠ್ಯಪುಸ್ತಕವಾಗಿರದೆ, ಚಿತ್ರಗಳ ಮೂಲಕ ಅತ್ಯಂತ ಸಂಕೀರ್ಣವಾದ ವೈದ್ಯಕೀಯ ಸಮಸ್ಯೆಗಳನ್ನು ಸರಳಗೊಳಿಸುತ್ತದೆ. ಇದರಲ್ಲಿರುವ ಉನ್ನತ ಗುಣಮಟ್ಟದ ಛಾಯಾಚಿತ್ರಗಳು, ಸ್ಕ್ಯಾನ್ ವರದಿಗಳು, ರೋಗದ ಮುನ್ಸೂಚನೆ ಹಾಗೂ ಪೋಷಕರಿಗೆ ನೀಡಬೇಕಾದ ಆಪ್ತ ಸಮಾಲೋಚನೆಯ ಮಾರ್ಗಸೂಚಿಗಳು ವೈದ್ಯರು ಸಕಾಲದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಲಿವೆ” ಎಂದು ಶ್ಲಾಘಿಸಿದರು. ಲೇಖಕ ಡಾ. ಪಿ.ಎಲ್.ಎನ್.ಜಿ. ರಾವ್ ಮಾತನಾಡಿ, “ಈ ಅಟ್ಲಾಸನ್ನು ಸಿದ್ಧಪಡಿಸಲು ತಮಗೆ 2 ವರ್ಷ ತಗುಲಿದ್ದು, ವೈದ್ಯಕೀಯ ವೃತ್ತಿ ಜೀವನದಲ್ಲಿ ಎದುರಾಗುವ ಸುಮಾರು 85 ರೀತಿಯ ವೈಪರೀತ್ಯಗಳ ಸ್ಥಿತಿಗತಿಗಳನ್ನು ಇದು ಒಳಗೊಂಡಿದೆ. ನವಜಾತ ಶಿಶುಗಳಲ್ಲಿನ ನ್ಯೂನತೆಗಳನ್ನು ವೈದ್ಯರಿಗೆ ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು, ನಿಖರವಾದ ರೋಗನಿರ್ಣಯ ಮಾಡಲು, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವುದು ಈ ಕೃತಿಯ ಮುಖ್ಯ ಉದ್ದೇಶವಾಗಿದೆ ಎಂದು ಕೃತಿ ರಚನೆಯ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭ ಮಾಹೆ ಸಿಒಒ ಡಾ. ಆನಂದ್ ವೇಣುಗೋಪಾಲ್, ಮಣಿಪಾಲ್ ಯುನಿವರ್ಸಲ್ ಪ್ರೆಸ್‌ನ ಮುಖ್ಯಸ್ಥ ಡಾ. ಶ್ರೀನಿವಾಸ ಆಚಾರ್ಯ, ಮಾಹೆ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ, ಎಂಎಸ್‌ಸಿಇ ವಿಭಾಗದ ಮುಖ್ಯಸ್ಥ ಡಾ. ಸಂದೀಪ್ ಎಸ್. ಶೆಣೈ, ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ವಿಭಾಗದ ನಿರ್ದೇಶಕ ಎಚ್. ಭರತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಮಣಿಪಾಲ್ ಯುನಿವರ್ಸಲ್ ಪ್ರೆಸ್’ ಪ್ರಕಟಿಸಿರುವ ಈ ಸಮಗ್ರ ವರ್ಣರಂಜಿತ ಅಟ್ಲಾಸ್, ನವಜಾತ ಶಿಶುಗಳಲ್ಲಿ ಕಂಡುಬರುವ ದೈಹಿಕ ಮತ್ತು ಬೆಳವಣಿಗೆಯ ವೈಪರೀತ್ಯಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಅಗತ್ಯವಿರುವ ವಿವರಗಳನ್ನು ಇದರಲ್ಲಿ ದಾಖಲಿಸಿದೆ. ಇದು ದಾದಿಯರು, ಇಂಟರ್ನ್‌ಗಳು, ಮಕ್ಕಳ ತಜ್ಞರು, ರೇಡಿಯಾಲಜಿಸ್ಟ್ಸ್, ಪ್ರಸೂತಿ ತಜ್ಞರು ಹಾಗೂ ಸೂಪರ್ ಸ್ಪೆಷಲಿಸ್ಟ್‌ಗಳಿಗೆ ಪ್ರಾಯೋಗಿಕ ಆಕರ ಗ್ರಂಥವಾಗಿ ಉಪಯುಕ್ತವಾಗಿದೆ.