ಸಾರಾಂಶ
ಕುಮಟಾದ ನೆಲ್ಲಿಕೇರಿ ಸರ್ಕಾರಿ ಹನುಮಂತ ಬೆಣ್ಣೆ ಪಿಯು ಕಾಲೇಜಿನಲ್ಲಿ ಜಿಲ್ಲಾಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ಕುಮಟಾ: ಎಲ್ಲರಿಗೂ ಸಮಾನ ಹಕ್ಕು ಮತ್ತು ನ್ಯಾಯವೇ ಸಂವಿಧಾನದ ಮೂಲ ಗುರಿಯಾಗಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಬಳಿಕ ಪತ್ರಿಕಾರಂಗ ಕೂಡಾ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವಂಥದ್ದಾಗಿದ್ದು, ಯುವಜನತೆಯಲ್ಲಿ ಈ ಎಲ್ಲ ಅರಿವು ಮತ್ತು ಜಾಗೃತಿ ಅತ್ಯವಶ್ಯಕ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಶಿಕ್ಷಣ ಇಲಾಖೆ ಪಿಯು ವಿಭಾಗ, ಕರ್ನಾಟಕ ಪಬ್ಲಿಕ್ ಶಾಲೆ, ನೆಲ್ಲಿಕೇರಿಯ ಸರ್ಕಾರಿ ಹನುಮಂತ ಬೆಣ್ಣೆ ಪಿಯು ಕಾಲೇಜಿನ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯವಾಗಿ ಬಹುಮತದಿಂದಲೇ ಶಾಸನಗಳು ರೂಪಿತವಾಗುತ್ತವೆ. ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಬಹುಮತ ಇಲ್ಲದಿದ್ದರೂ ಶಾಸನಗಳನ್ನು ರೂಪಿಸಿದ ವಿದ್ಯಮಾನಗಳು ಸದನ, ಶಾಸನ ಸಭೆಗಳಲ್ಲಿ ನಡೆಯುತ್ತಿದೆ. ಏಕೆಂದರೆ ಪ್ರತಿಯೊಂದೂ ಶಾಸನದ ಮೂಲಕವೇ ನಿರ್ಧರಿತವಾಗಬೇಕಿದೆ. ಆದರೆ ಪರ ಮತ್ತು ವಿರೋಧದ ಸಕಾರಾತ್ಮಕ ಚರ್ಚೆಯ ಅಗತ್ಯ ಎಲ್ಲಕಾಲಕ್ಕೂ ಇರುತ್ತದೆ. ಹೀಗಾಗಿ ಅಣಕು ಯುವ ಸಂಸತ್ ಯುವ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶಕವಾಗಿದೆ ಎಂದರು.ಪುರಸಭೆ ಅಧ್ಯಕ್ಷೆ ಸುಮತಿ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಗೌಡ, ಪ್ರಾಚಾರ್ಯ ಸತೀಶ ನಾಯ್ಕ, ರಾಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ರಾಮಮೂರ್ತಿ ನಾಯ್ಕ, ಆರ್.ಎಚ್. ನಾಯ್ಕ, ಆನಂದ ನಾಯ್ಕ ಇನ್ನಿತರರು ಇದ್ದರು. ಸಂಚಾಲಕ ಉಲ್ಲಾಸ ಹುದ್ದಾರ, ಉಪನ್ಯಾಸಕಿ ಕೋಮಲಾ ಎನ್., ಕಾರ್ಯಕ್ರಮ ನಿರ್ವಹಿಸಿದರು.
ಸ್ಪರ್ಧೆಯಲ್ಲಿ ಶಿರಸಿಯ ಮಾರಿಕಾಂಬಾ ಕಾಲೇಜಿನ ಮಧುಲತಾ ಗೌಡ ಪ್ರಥಮ ಸ್ಥಾನ ಪಡೆದರೆ, ಗೋಕರ್ಣದ ಸಾರ್ವಭೌಮ ಪಿಯು ಕಾಲೇಜಿನ ವಿಶ್ವಜಿತ್ ಅರ್ಜುನ ಸುತಾರ ದ್ವಿತೀಯ ಸ್ಥಾನ ಮತ್ತು ಅಂಕೋಲಾದ ಸರ್ಕಾರಿ ಪಿಯು ಕಾಲೇಜಿನ ನಂದನ ನಾಯ್ಕ ತೃತೀಯ ಸ್ಥಾನ ಗಳಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.;Resize=(128,128))
;Resize=(128,128))
;Resize=(128,128))
;Resize=(128,128))