ಸಾರಾಂಶ
ಕಾರ್ಪೋರೇಟ್ ಕಂಪನಿಗೆ ನೀಡುವ ಸರ್ಕಾರದ ಹುನ್ನಾರ । ಜೆ.ಯಾದವರೆಡ್ಡಿ ಆರೋಪಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರೈತರ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಜು.25 ರಂದು ದೇವನಹಳ್ಳಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮನವಿ ಮಾಡಿದರು.ಪ್ರವಾಸಿ ಮಂದಿರದಲ್ಲಿ ಸೋಮವಾರ ದೇವನಹಳ್ಳಿ ಚಲೋ ಸಂಬಂಧಿಸಿದಂತೆ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸುತ್ತಮುತ್ತ ಹದಿಮೂರು ಹಳ್ಳಿಗಳ ರೈತರ 1777 ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಲುವು ಖಂಡಿಸಿ ದೇವನಹಳ್ಳಿ ತಾಲೂಕು ಕಚೇರಿ ಮುಂಭಾಗ ನಡೆಯಲಿರುವ ಹೋರಾಟಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂದ ರೈತರು ತೆರಳುತ್ತಿದ್ದಾರೆ. ಅದಕ್ಕಾಗಿ ರೈತರು, ಕಾರ್ಮಿಕರು, ಮಹಿಳೆಯರು, ಜನಪರ ಹೋರಾಟಗಾರರು ಭಾಗವಹಿಸಿ ನೈತಿಕ ಸ್ಥೈರ್ಯ ತುಂಬಬೇಕಿದೆ ಎಂದರು.
ಚನ್ನರಾಯಪಟ್ಟಣ ರೈತರ ಭೂ ಹೋರಾಟ 1180 ದಿನಕ್ಕೆ ಕಾಲಿಟ್ಟಿದ್ದು, ಮೂರು ವರ್ಷದ ಕೆಳಗೆ ಭೂಮಿ ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಆದೇಶಿಸಿದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ. ರೈತರ ಪರವಾಗಿರುತ್ತೇನೆಂದು ಹೇಳಿ ಈಗ ವಚನ ಭ್ರಷ್ಟರಾಗಿರುವುದಲ್ಲದೆ ರೈತರಿಗೆ ನೋಟಿಸ್ ಕೊಟ್ಟು ಅಂಕಿತ ಹಾಕಲು ಮುಂದಾಗಿದ್ದಾರೆ ಎಂದು ಯಾದವರೆಡ್ಡಿ ದೂರಿದರು.ಭೂ ಸ್ವಾಧೀನದಿಂದಾಗಿ ಒಂದರೆಡು ಎಕರೆ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬದುಕುತ್ತಿರುವ ರೈತರು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ರೈತರ ಭೂಮಿಯನ್ನು ವಶಪಡಿಸಿಕೊಂಡಾಗ ಪಾಲುದಾರಿಕೆ ಮತ್ತು ಮನೆಗೊಂದು ಉದ್ಯೋಗ ಕೊಡಬೇಕೆಂಬ ನಿಯಮವಿದೆ. ಆದರೆ ರಾಜ್ಯ ಸರ್ಕಾರ ಎಲ್ಲವನ್ನು ಧಿಕ್ಕರಿಸಿ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿದೆ. ಇದರ ವಿರುದ್ದ ಹೋರಾಟ ನಿರಂತರವಾಗಿರುತ್ತದೆಂದು ಎಚ್ಚರಿಸಿದರು.
ಅನಾದಿ ಕಾಲದಿಂದಲೂ ಬಗರ್‍ಹುಕುಂ ಸಾಗುವಳಿ ಮಾಡಿಕೊಂಡು ಜೀವಿಸುತ್ತಿರುವ ರೈತರಿಗೆ ಹಕ್ಕುಪತ್ರಗಳನ್ನು ನೀಡಬೇಕೆ ವಿನಃ ಅಲ್ಪಸ್ವಲ್ಪ ತುಂಡು ಭೂಮಿಗಳನ್ನು ಕಸಿದುಕೊಳ್ಳುವುದು ಯಾವ ನ್ಯಾಯ? ನ್ಯಾಯಾಲಯ ಮಧ್ಯ ಪ್ರವೇಶಿಸಿ ರೈತರ ಭೂಮಿ ವಶಪಡಿಸಿಕೊಳ್ಳುವುದಕ್ಕೆ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಬೇಕು. ಈಗಾಗಲೆ ಚಾಣಕ್ಯ ಸಂಸ್ಥೆಗೆ 120 ಎಕರೆ ಭೂಮಿಯನ್ನು ಬರೆದುಕೊಟ್ಟಿರುವ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ದಾರಿಯಲ್ಲಿ ಸಾಗುತ್ತಿವೆ. ನಲವತ್ತು ವರ್ಷಗಳಿಂದ ಇಂತಹ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಯಾವುದೇ ಕಾರಣಕ್ಕು ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2014 ರ ಭೂ ಕಾಯಿದೆಗೆ ತಿದ್ದುಪಡಿ ತಂದು ಬೆಲೆ ನಿಗಧಿಪಡಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಿದ್ದನ್ನು ರದ್ದುಪಡಿಸಬೇಕು. ಬಲವಂತವಾಗಿ ರೈತರ ಜಮೀನು ಕಸಿದುಕೊಂಡು ದರ್ಪ ದೌರ್ಜನ್ಯ ಎಸಗುವುದನ್ನು ನಿಲ್ಲಿಸಬೇಕು. ಗ್ರಾಮ ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್‍ವರೆಗೆ ರೈತರ ಭೂಮಿಯನ್ನು ಪರಭಾರೆ ಮಾಡುವ ವ್ಯವಸ್ಥೆ ಅನ್ನದಾತ ರೈತನ ಜನ್ಮಸಿದ್ದ ಹಕ್ಕನ್ನು ಕಸಿದಂತಾಗಿದೆ. ಸಾರ್ವಜನಿಕ ಉದ್ದೇಶವನ್ನು ಮುಂದಿಟ್ಟು ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳುವುದು ನಿಲ್ಲಬೇಕು. ಇಲ್ಲದಿದ್ದರೆ ರೈತರ ಬದುಕು ದಿವಾಳಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರುಗಳಾದ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯ ಹಂಪಯ್ಯನಮಾಳಿಗೆ, ಮಲ್ಲಾಪುರ ತಿಪ್ಪೇಸ್ವಾಮಿ, ಜನಶಕ್ತಿಯ ಟಿ.ಶಫಿವುಲ್ಲಾ, ಸಿ.ಕೆ ಗೌಸ್‍ಪೀರ್ ಆರ್.ಬಿ.ನಿಜಲಿಂಗಪ್ಪ, ಸತ್ಯಪ್ಪ ಮಲ್ಲಾಪುರ ಈ ವೇಳೆ ಉಪಸ್ಥಿತರಿದ್ದರು.