ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಕೇಳುವ ಪರಂಪರೆಯನ್ನು ಉಳಿಸಿ ಆ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಗಟ್ಟಿಯಾಗಿಸುತ್ತಿರುವುದು ಮೈಸೂರು ಆಕಾಶವಾಣಿ ಎಂದು ಹಿರಿಯ ಸಾಹಿತಿ ಹನೂರು ಕೃಷ್ಣಮೂರ್ತಿ ಹೇಳಿದರು.ಪ್ರಸಾರ ಭಾರತಿ ಹಾಗೂ ಆಕಾಶವಾಣಿ ಮೈಸೂರು ಎಫ್.ಎಂ ೧೦೦.೬ ಸಹಯೋಗದಲ್ಲಿ ಮೈಸೂರು ಆಕಾಶವಾಣಿ-೯೦ರ ಅಂಗವಾಗಿ ನಗರದ ಜೆಎಸ್ಎಸ್ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಮ್ಮ ಜಾನಪದ ಚಾಮರಾಜನಗರದ ಜನಪದ ಸಂಸ್ಕೃತಿ ಮಾತು-ಹಾಡು-ಕುಣಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾತು-ಆಡು-ಕುಣಿತ ಅರ್ಥಪೂರ್ಣ ಕಾರ್ಯಕ್ರಮವಾಗಿದೆ, ಆಕಾಶವಾಣಿಯಲ್ಲಿ ಕೇಳುವುದು ಮತ್ತು ಎಲ್ಲವನ್ನೂ ಕೇಳಿಸಿಕೊಂಡು ಜನರು ಕೇಳುವ ಹಾಗೆ ಕಾರ್ಯಕ್ರಮವನ್ನು ಮಾಡಿಕೊಂಡು ಬಂದು ಪಟ್ಟಣ, ಹಳ್ಳಿ ಎಲ್ಲರಿಗೂ ಬೇಕಾದ ಸಂಸ್ಥೆಯಾಗಿದೆ ಎಂದರು. ಕೇಳುವ ಪರಂಪರೆ ದೊಡ್ಡದು. ಪಂಪ ಕಾವ್ಯ ಬರೆಯುತ್ತಿದ್ದೇನೆ ಎನ್ನಲಿಲ್ಲ ಕೇಳುತ್ತಿದ್ದೇನೆ ಎಂದ, ಕುಮಾರವ್ಯಾಸನು ಸಹ ಇದೇ ಮಾತನ್ನು ಹೇಳಿದನು, ಕೇಳುವ ಜನ ಪ್ರಸಿದ್ಧರು ಹಾಗೆ ಹಾಡುತ್ತಾ ಕೇಳುವ ಹಾಗೆ ಮಾಡಿದವರು ಸಾಮಾನ್ಯ ಜನ. ಇದು ಒಂದು ದೊಡ್ಡ ಪರಂಪರೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಕೇಳುವ ದೊಡ್ಡ ಪರಂಪರೆಯೇ ಇದೆ, ಇಲ್ಲಿ ಜನರು ಜಾನಪದನ್ನು ಹಾಡುತ್ತಾ, ಕೇಳುತ್ತಾ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ, ಇಂದು ಜನಪದ ಬೇರೆಲ್ಲೂ ಇರುವುದನ್ನು ನಾನು ಕಂಡಿಲ್ಲ. ವಿಶ್ವಾತ್ಮಕ ಗೀತೆ ಹಾಡಿಕೊಂಡು ಕೇಳಿಸಿಕೊಂಡ ಬಂದ ವೈವಿಧ್ಯಮಯ ವಿಸ್ತಾರವಾದ ಕಾವ್ಯಗಳನ್ನು ಜಿಲ್ಲೆಯಲ್ಲಿ ಕಾಣಬಹುದು. ಜಾನಪದ ಸಂಗತಿಗಳು ಧಾರ್ಮಿಕ ಸ್ಥಳಗಳು ಇಲ್ಲಿವೆ ಎಂದರು. ಮೈಸೂರು ಆಕಾಶವಾಣಿಗೆ ೯೦ ವರ್ಷವಾಗಿದೆ ಎಂಬುದು ಸಂತೋಷ, ಆಕಾಶವಾಣಿ ಬೇಕಾದುದನ್ನು ಕೇಳಿಸಿಕೊಂಡು ಬಂದಿದೆ. ಈಗ ಇದಕ್ಕೆ ೯೦ ವರ್ಷವಾಗಿದೆ. ಇದೊಂದು ಹೆಮ್ಮೆ ಪಡುವ ಸಂತೋಷ, ಇದರ ಅಂಗವಾಗಿ ನಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಮಾತು-ಆಡು-ಕುಣಿತ ಎಂಬ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಆಕಾಶವಾಣಿ ಉಪ ನಿರ್ದೇಶಕ ಉಮೇಶ್ ಮಾತನಾಡಿ, ಆಕಾಶವಾಣಿ ಕೇಂದ್ರ ಸ್ಥಾಪಿಸಿದ ಡಾ.ಎಂ.ವಿ ಗೋಪಾಲಸ್ವಾಮಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಮರಣೀಯರು, ನಮ್ಮ ಆಕಾಶವಾಣಿ ವಿಶಿಷ್ಟವಾದ ವಿನ್ಯಾಸದ ಕಟ್ಟಡವನ್ನು ಹೊಂದಿದೆ ಎಂದರು. ಜಾನಪದ ಸಂಸ್ಕೃತಿ ಉಳಿದಿರುವುದು ಆಕಾಶವಾಣಿಯಿಂದ. ಆಕಾಶವಾಣಿ ಮತ್ತು ಜಾನಪದಕ್ಕೂ ನಂಟಿದೆ. ಮುಂದಿನ ಪೀಳಿಗೆಗೆ ಕಲೆಯನ್ನು ಉಳಿಸುವ ಜವಾಬ್ದಾರಿ ಜಾನಪದ ಕಲಾವಿದರ ಮೇಲಿದೆ ಎಂದರು.
ಆಕಾಶವಾಣಿ ಸಹಾಯಕ ನಿರ್ದೇಶಕ ವಿದ್ಯಾಶಂಕರ್ ಮಾತನಾಡಿ, ಆಕಾಶವಾಣಿಗೆ ಜಾನಪದ ಕಾರ್ಯಕ್ರಮ ಮಾಡಲು ಚಾಮರಾಜನಗರ ಜಿಲ್ಲೆ ಸಮೃದ್ಧವಾದ ಜಿಲ್ಲೆ. ಆಕಾಶವಾಣಿ ಜ್ಯೋತಿ ರೀತಿ ಸದಾ ಬೇಕಾದ ರೀತಿಯಲ್ಲಿ ಕಾರ್ಯಕ್ರಮ ಮತ್ತು ಮಾಹಿತಿಯನ್ನು ನೀಡಿ ಮನಸ್ಸಿಗೆ ಉಲ್ಲಾಸ ನೀಡುತ್ತಿದ್ದು, ಇದಕ್ಕೆ ಆಕರ್ಷಿತರಾಗಿ ಕಲಾವಿದರು ಬರುತ್ತಿದ್ದಾರೆ ಎಂದರು. ತಾಂತ್ರಿಕ ವಿಭಾಗದ ಮುಖ್ಯಸ್ಥ ಆನಂದನ್ ಮಾತನಾಡಿ, ಗುಣಮಟ್ಟದ ಕಾರ್ಯಕ್ರಮ ನೀಡಿದರೆ ಮಾತ್ರ ಜನರು ಕಾರ್ಯಕ್ರಮದ ಬಗ್ಗೆ ಒಲವು ತೋರುತ್ತಾರೆ ಎಂಬುದಕ್ಕೆ ನಮ್ಮ ಆಕಾಶವಾಣಿಯೇ ಉದಾಹರಣೆ ಎಂದರು.ನಗರದ ಜೆಎಸ್‌ಎಸ್ ಪದವಿ ಕಾಲೇಜು ಪ್ರಾಂಶುಪಾಲ ಮಹದೇವಸ್ವಾಮಿ ಮಾತನಾಡಿ, ಆಕಾಶವಾಣಿ ಶೇ.೯೨ ಭೂಭಾಗ ಸಂಪರ್ಕ ಮಾಡುತ್ತಿದೆ. ಮೈಸೂರು ಆಕಾಶವಾಣಿ ಇಡೀ ವಿಶೇಷವಾದದ್ದು ಸಂಸ್ಕೃತಿ ಮತ್ತು ಪರಂಪರೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಾ ಜನ ಸಾಮಾನ್ಯರಿಗೆ ಬೇಕಾದುದನ್ನು ನೀಡುತ್ತಾ ಬಂದಿದೆ ಎಂದರು. ಸಹಾಯಕ ನಿರ್ದೇಶಕ ಅಬ್ದುಲ್ ರಶೀದ್ ಮಾತನಾಡಿ, ಹನೂರು ಕೃಷ್ಣಮೂರ್ತಿ ಈ ಭಾಗದ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆಕಾಶವಾಣಿ ಮೂಲಕ ಒಳ್ಳೆಯದನ್ನು ಕೇಳಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದೇವೆ ಎಂದರು.
ಸಾಹಿತಿಗಳಾದ ಡಾ. ಕೃಷ್ಣಮೂರ್ತಿ ಅವರು ಧಾರ್ಮಿಕ ಶ್ರದ್ಧಾ ಕೇಂದ್ರಗಳು ವಿಷಯ ಕುರಿತು ಮಾತನಾಡಿದರು, ಡಾ. ಉಮೇಶ್ ಅವರು ಧ್ವನಿ ಪರೀಕ್ಷೆ ಪೂರ್ವ ಸಿದ್ಧತೆಗಳ ಕುರಿತು, ಪ್ರೊ.ಪುಷ್ಪಲತಾ ಅವರು ಜನಪದ ಕಲಾವಿದರ ಸ್ಥಿತಿಗತಿಗಳ ಕುರಿತು, ಡಾ.ಸಿ.ಮಾದೇಗೌಡ ಅವರು ಬುಡಕಟ್ಟು ಸಾಂಸ್ಕೃತಿಕ ಅನನ್ಯತೆ ಕುರಿತು, ಮಂಜು ಕೋಡಿಉಗನೆ ಅವರು ಜನಪದ ಕಾವ್ಯಗಳ ಪ್ರಸ್ತುತತೆ ಕುರಿತು ಮಾತನಾಡಿದರು. ಮಹದೇವಶೆಟ್ಟಿ ಮತ್ತು ಸಂಗಡಿಗರು ಮಂಟೇಸ್ವಾಮಿ ಕಾವ್ಯ, ಸಿ.ಎಂ ನರಸಿಂಹಮೂರ್ತಿ ಮತ್ತು ಸಂಗಡಿಗರು ಬಿಳಿಗಿರಿರಂಗಸ್ವಾಮಿ ಹಾಡು, ನಿಟ್ರೆ ಮಹದೇವಯ್ಯ ಮತ್ತು ಸಂಗಡಿಗರು ಮಾದೇಶ್ವರ ಕಾವ್ಯ, ರೇಚಂಬಳ್ಳಿ ಲಕ್ಷ್ಮಮ್ಮ ಮತ್ತು ಸಂಗಡಿಗರು ಸೋಬಾನೆ ಪದ ಹಾಡಿದರು, ಬಸವರಾಜು ಮತ್ತು ತಂಡದಿಂದ ಗೊರುಕಾನ ನೃತ್ಯ, ಕೈಲಾಸಮೂರ್ತಿ ಮತ್ತು ತಂಡದಿಂದ ಬೀಸು ಕಂಸಾಳೆ, ಶಂಕರ ಮತ್ತು ತಂಡ ಗೊರವರ ನೃತ್ಯವನ್ನು ಪ್ರಸ್ತುತಪಡಿಸಿದರು.ಜಿಲ್ಲಾ ಪದವಿ ಕಾಲೇಜುಗಳ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ ಉಪಸ್ಥಿತರಿದ್ದರು. ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ ಸ್ವಾಗತಿಸಿದರು, ಜಾಂಪಣ್ಣ ಆಶೀಹಾಳ್ ವಂದಿಸಿದರು, ಪ್ರಭುಸ್ವಾಮಿ ಮಳಿಮಠ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))