ಕನ್ನಡಪ್ರಭ ವಾರ್ತೆ ಆಲಮಟ್ಟಿ
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಆಲಮಟ್ಟಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.ಆಲಮಟ್ಟಿಯ ರಾಮಲಿಂಗೇಶ್ವರ ವೃತ್ತದಲ್ಲಿ ಸೇರಿದ ನೂರಾರು ರೈತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ, ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಶಾಂತಗೌಡ ಪಾಟೀಲ ಸಂಗಮೇಶ ಸಗರ, ರಾಹುಲ ಕುಬಕಡ್ಡಿ, ಶಶಿಕಾಂತ ಗುರೂಜಿ, ಕಲ್ಲು ಸೊನ್ನದ , 2017ರಲ್ಲಿ ಆರಂಭಗೊಂಡ ನಾಗರಬೆಟ್ಟ ಏತ ನೀರಾವರಿ ಯೋಜನೆ 8 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. 306 ಎಕರೆ ಭೂಮಿಗೆ ಪರಿಹಾರ ನೀಡದೇ ಕಾಮಗಾರಿ ನಡೆಸಲಾಗಿದೆ. ಭೂಸ್ವಾಧೀನ ಜಮೀನಿಗೆ ಇನ್ನೂ ಅವಾರ್ಡ್ ಆಗಿಲ್ಲ. ಮಾರುಕಟ್ಟೆ ಬೆಲೆಗಿಂತ ಕಡಿಮೆ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿದರು.ಕೆಲವೇ ಮೀಟರ್ ಕಾಮಗಾರಿ ಬಾಕಿ ಇದೆ. ಭೂಮಿ ವಶಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಭೇಟಿ ನೀಡಿದ ಮುಖ್ಯ ಎಂಜಿನಿಯರ್ ಡಿ. ಬಸವರಾಜ, ಕೆಬಿಜೆಎನ್‌ಎಲ್‌ನ ತಾಂತ್ರಿಕ ನಿರ್ದೇಶಕ ವಿ.ಎಸ್. ಹಿರೇಗೌಡರ, ಯೋಜನೆಯ ಮುಖ್ಯ ಕಾಲುವೆಯ ಸುಮಾರು 1 ಕಿ.ಮೀ ಕಾಮಗಾರಿ ಮಾತ್ರ ಬಾಕಿ ಇದೆ. ರೈತರು ಸಹಕರಿಸಿದರೆ ನಾಳೆಯೇ ಕಾಮಗಾರಿ ಆರಂಭಿಸುತ್ತೇವೆ. ಭೂಸ್ವಾಧೀನಕ್ಕಾಗಿ ಕೆಬಿಜೆಎನ್‌ಎಲ್ ₹223 ಕೋಟಿ ವಿಶೇಷ ಭೂಸ್ವಾಧೀನಾಧಿಕಾರಿಗೆ ಡಿಪಾಸಿಟ್ ಮಾಡಿದೆ ಎಂದರು.
ಯುಕೆಪಿ ಪುನರ್ವಸತಿ ವಿಶೇಷ ಜಿಲ್ಲಾಧಿಕಾರಿ ಮಾರುತಿ ಬ್ಯಾಕೋಡ, ರೈತರು ಒಪ್ಪಂದದ ಬೆಲೆಗೆ ಪರಿಹಾರ ಪಡೆಯಲು ಒಪ್ಪಿದರೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಮೂರು ತಿಂಗಳೊಳಗೆ ಪರಿಹಾರ ನೀಡಲಾಗುವುದ ಎಂದು ಹೇಳಿದರು.
ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿ ಎಂ.ಬಿ. ನಾಗಠಾಣ, ಒಪ್ಪಿತ ದರದ ಐ-ತೀರ್ಪು ರಚಿಸಲು ರೈತರು ಒಪ್ಪಿದರೆ ನಿಯಮನುಸಾರ ಮೂರು ತಿಂಗಳಲ್ಲಿ ಐ-ತೀರ್ಪು ಪ್ರಕಟಿಸಿ ಪರಿಹಾರ ನೀಡಲಾಗುವುದು ಎಂದು ಲಿಖಿತ ಪತ್ರ ನೀಡಿದ ಬಳಿಕ ಸಂಜೆ ರೈತರು ಹೋರಾಟ ಹಿಂಪಡೆದರು. ಹೋರಾಟಕ್ಕೆ ಚಿಮ್ಮಲಗಿಯ ಸಿದ್ಧರೇಣುಕ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದರು.ರೈತ ಮುಖಂಡರಾದ ಶಿವಾನಂದ ಟಕ್ಕಳಕಿ, ಶಶಿಕಾಂತ ದೇಸಾಯಿ, ಹನುಮಂತ ತಳವಾರ, ರವಿಶಂಕರ ಕೋತಿನ, ನಿಂಗರಾಜ ಆಲೂರ, ಸೀತಪ್ಪ ಗಣಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಮುಖ ಬೇಡಿಕೆಗಳು:1. ಯೋಜನಾ ನಿರಾಶ್ರಿತ ಪ್ರಮಾಣಪತ್ರ ನೀಡಬೇಕು.
2. ನಿರಾಶ್ರಿತ ರೈತರ ನಿರುದ್ಯೋಗಿ ಮಕ್ಕಳಿಗೆ ಜೀವನಾಧಾರ ಭತ್ಯೆ ಒದಗಿಸಬೇಕು.3. ಕಲ್ಯಾಣ ಕರ್ನಾಟಕದ 371(ಜೆ) ಮಾದರಿಯಲ್ಲಿ ಸೌಲಭ್ಯ, ಮೀಸಲಾತಿ ನೀಡಬೇಕು.