ಸವಣೂರು: ಶಿಕ್ಷಾ ಗುರು, ದೀಕ್ಷಾ ಗುರು ಹಾಗೂ ಮೋಕ್ಷಾ ಗುರು ಎಂಬ ಮೂರು ಗುರುಗಳ ಮಹಿಮೆಯೂ ಒಂದೇ ವ್ಯಕ್ತಿತ್ವದಲ್ಲಿ ಅಡಕವಾಗಿ ಭಕ್ತರಿಗೆ ದೊರೆಯುವುದು ಅಪರೂಪದ ಭಾಗ್ಯ ಎಂದು ನಂದವಾಡಗಿ-ಆಳಂದ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹತ್ತಿಮತ್ತೂರು ಶ್ರೀ ವಿರಕ್ತಮಠದಲ್ಲಿ ಶುಕ್ರವಾರ ಜರುಗಿದ ಕರ್ತೃ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳ ನೆನಹು ಹಾಗೂ ಹತ್ತಿಮತ್ತೂರು-ಕರ್ಜಗಿ ವಿರಕ್ತಮಠದ ಲಿಂ. ರುದ್ರಮುನಿ ಮಹಾಸ್ವಾಮಿಗಳ 42ನೇ ಪುಣ್ಯಸ್ಮರಣೋತ್ಸವದ ಧರ್ಮ ಸಮಾರಂಭದಲ್ಲಿ ತುಲಾಭಾರ ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.ಇಂದಿನ ಸಮಾಜಕ್ಕೆ ನಿಜಗುಣ ಶಿವಯೋಗಿಗಳಂತಹ ಸತ್ಪುರುಷರ ಅಗತ್ಯವಿದೆ. ಶಿಕ್ಷಣದ ಮೂಲಕ ಜ್ಞಾನ, ದೀಕ್ಷೆಯ ಮೂಲಕ ಆಧ್ಯಾತ್ಮಿಕ ಬೆಳಕು ಹಾಗೂ ಅನುಗ್ರಹದ ಮೂಲಕ ಮೋಕ್ಷದ ಮಾರ್ಗವನ್ನು ತೋರಿಸುವ ಗುರುಸಾನ್ನಿಧ್ಯ ಪಡೆದ ಭಕ್ತರು ನಿಜಕ್ಕೂ ಧನ್ಯರು ಎಂದು ಅವರು ಹೇಳಿದರು.ಜೀವನದಲ್ಲಿ ಯಶಸ್ಸು ಸಾಧಿಸಲು ಮುಂದೆ ಸ್ಪಷ್ಟ ಗುರಿ ಹಾಗೂ ಹಿಂದೆ ಮಾರ್ಗದರ್ಶಕನಾದ ಗುರು ಇರಬೇಕು. ಗುರುವಿನ ಕೃಪೆಯೇ ಶಿಷ್ಯನ ಬದುಕಿನ ದಿಕ್ಕು ಮತ್ತು ಗುರಿಯನ್ನು ನಿರ್ಧರಿಸುತ್ತದೆ. ಗುರುಪಾದಸೇವೆಯಲ್ಲಿ ಬೆಳೆದ ಶಿಷ್ಯ ಇಂದು ಗುರುತತ್ತ್ವದ ಪ್ರತಿರೂಪವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವುದು ಸ್ಫೂರ್ತಿದಾಯಕ ಸಂಗತಿ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ, ಸುಮಾರು 48 ವರ್ಷಗಳ ಹಿಂದೆ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳಿಂದ ಪಡೆದ ಶಿವದೀಕ್ಷೆಯೇ ನನ್ನ ಆಧ್ಯಾತ್ಮಿಕ ಬದುಕಿನ ಅಡಿಪಾಯವಾಗಿದೆ. ಗುರುಗಳು ಕೇವಲ ಮಂತ್ರವನ್ನಲ್ಲ, ಬದುಕಿನ ಮಾರ್ಗವನ್ನೂ ತೋರಿಸಿದರು. ಅವರ ಅನುಗ್ರಹದಿಂದಲೇ ಇಂದು ಧರ್ಮ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.

ಅದು ಗುರುವಿನ ಮೇಲಿನ ಪ್ರೀತಿ, ನಿಷ್ಠೆ ಹಾಗೂ ಸಮರ್ಪಣೆಯ ಭಾವದ ಅಭಿವ್ಯಕ್ತಿ. ನನ್ನ ಆರಾಧ್ಯ ಗುರುಗಳಾದ ಲಿಂ. ರುದ್ರಮುನಿ ಮಹಾಸ್ವಾಮಿಗಳ ಪುಣ್ಯಸ್ಮರಣೆಯಲ್ಲಿ ಈ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ಜೀವನದ ಪರಮ ಭಾಗ್ಯ ಎಂದು ಹೇಳಿದರು.

ನರಸೀಪುರ ಅಂಬಿಗರ ಚೌಡಯ್ಯನಪೀಠದ ಶ್ರೀ ಜಗದ್ಗುರು ಶಾಂತಭೀಷ್ಮ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಹಂಸಭಾವಿ, ಗೋಲಗೇರಿ, ಅಗಡಿ, ಶಿಗ್ಗಾಂವಿ, ಹೂವಿನಶಿಗ್ಲಿ, ಗುಡ್ಡದ ಆನ್ವೇರಿ, ಸವಣೂರು ಹಾಗೂ ಬಂಕಾಪೂರದ ವಿವಿಧ ಮಠಾಧೀಶರು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.

ಮಲ್ಲಿಕಾರ್ಜುನಯ್ಯ ಆರಾಧ್ಯಮಠ ಹಾಗೂ ಪ್ರಭುಲಿಂಗಯ್ಯ ಆರಾಧ್ಯಮಠ ಅವರ ನೇತೃತ್ವದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಹಾಗೂ ಲಿಂ. ರುದ್ರಮುನಿ ಮಹಾಸ್ವಾಮಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು.


ಭಕ್ತಿ, ಭಾವನೆ ಹಾಗೂ ಗುರುಭಕ್ತಿಯ ಸಂಗಮವಾಗಿ ನಡೆದ ಪುಣ್ಯಸ್ಮರಣೋತ್ಸವದಲ್ಲಿ ತುಲಾಭಾರ ಸೇವೆ ವಿಶೇಷ ಆಕರ್ಷಣೆಯಾಗಿದ್ದು, ಗುರು-ಶಿಷ್ಯರ ಅನನ್ಯ ಬಾಂಧವ್ಯಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು. ಹಾವೇರಿ ಆಕ್ಸಫರ್ಡ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ವೀರೇಶ ಹಿತ್ತಲಮನಿ ಕಾರ್ಯಕ್ರಮ ನಿರ್ವಹಿಸಿದರು.