ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಸಮಸ್ಯೆ ಹಾಗೂ ರೈತರ ವಿಚಾರದಲ್ಲಿ ನುಡಿದಂತೆ ನಡೆದಿಲ್ಲ. ಇದು ಕಲ್ಲು ಹೃದಯದ, ದಪ್ಪ ಚರ್ಮದ ಸರ್ಕಾರ. ಇವರಿಗೆ ಸಂವೇದನೆಯೇ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ, ಸುವರ್ಣ ವಿಧಾನಸೌಧಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಸಮಸ್ಯೆ ಹಾಗೂ ರೈತರ ವಿಚಾರದಲ್ಲಿ ನುಡಿದಂತೆ ನಡೆದಿಲ್ಲ. ಇದು ಕಲ್ಲು ಹೃದಯದ, ದಪ್ಪ ಚರ್ಮದ ಸರ್ಕಾರ. ಇವರಿಗೆ ಸಂವೇದನೆಯೇ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಆರಂಭಗೊಂಡಿತು. ಈ ಭಾಗದ ಸಮಸ್ಯೆಗಳ ಕುರಿತ ನಿಲುವಳಿ ಸೂಚನೆ ಮೇಲೆ ಮಾತನಾಡಿದ ಅಶೋಕ್‌, ಸಿದ್ದರಾಮಯ್ಯನವರು ಮಾತೆತ್ತಿದರೆ ತಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಹೇಳುತ್ತಾರೆ. ಅವರು ಪ್ರತಿಪಕ್ಷದಲ್ಲಿದ್ದಾಗ ರೈತರ ಉತ್ಪನ್ನ ವೆಚ್ಚ ಆಧರಿಸಿ ಬೆಲೆ ನಿಗದಿಪಡಿಸಬೇಕು, 5,000 ಕೋಟಿ ರು.ಆವರ್ತ ನಿಧಿ ಸ್ಥಾಪಿಸಬೇಕು ಎಂದಿದ್ದರು. ಅವರ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಪ್ರಕೃತಿ ವಿಕೋಪ ನಿರ್ವಹಣೆಗೆ 5,000 ಕೋಟಿ ರು.ನಿಧಿ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ, ಈಗ ಸರ್ಕಾರ ಎರಡೂವರೆ ವರ್ಷ ಅಧಿಕಾರ ಪೂರ್ಣಗೊಳಿಸಿದರೂ ಉತ್ತರ ಕರ್ನಾಟಕ ಭಾಗದ ಜನರು, ರೈತರಿಗೆ ಕೊಟ್ಟ ಯಾವ ಭರವಸೆಯನ್ನೂ ಈಡೇರಿಸಿಲ್ಲ ಎಂದು ದೂರಿದರು.

ಹಾಲಿನ ಪ್ರೋತ್ಸಾಹಧನವನ್ನು 7ರು.ಗೆ ಏರಿಸುವ ಭರವಸೆ ನೀಡಿದ್ದರು. ಅದನ್ನೂ ಈಡೇರಿಸಿಲ್ಲ, ಬದಲಿಗೆ 620 ಕೋಟಿ ರು.ನಷ್ಟು ಪ್ರೋತ್ಸಾಹಧನ ರೈತರಿಗೆ ಬಾಕಿ ಇದೆ. ಉತ್ತರ ಕರ್ನಾಟಕದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹ ಧನ, ಸ್ಟಾರ್ಟ್‌ಅಪ್‌ಗಳಿಗೆ ತಲಾ 500 ಕೋಟಿ ರು.ನೀಡಲಾಗುವುದು ಎಂದಿದ್ದರು. ಆದರೆ, ಇದಾವುದನ್ನೂ ಈಡೇರಿಸಿಲ್ಲ ಎಂದರು.

ಸುಪ್ರೀಂ ಆದೇಶವಿದೆ:

ರೈತರ ಯಾವುದೇ ಬೆಳೆಗೆ ಒಮ್ಮೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿದ ಬಳಿಕ ಹೆಚ್ಚುವರಿ ಪರಿಹಾರ, ಬೆಲೆ ನೀಡುವುದಾದರೆ ಅದನ್ನು ರಾಜ್ಯ ಸರ್ಕಾರವೇ ನೀಡಬೇಕೆಂದು ಸುಪ್ರೀಂಕೋರ್ಟ್‌ ಆದೇಶವಿದೆ. ಇದನ್ನು ಮರೆಮಾಚಿ ಕಬ್ಬಿನ ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸುತ್ತದೆ ಎಂದು ಕಾಂಗ್ರೆಸ್‌ ನಾಯಕರು ಕೇಂದ್ರದ ಮೇಲೆ ಗೂಬೆ ಕುರಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರದಿಂದ ಸಿಗಬೇಕಾದ ಅನುದಾನ, ನೆರವಿಗಾಗಿ ಖುದ್ದು ಸಂಬಂಧಿಸಿದ ಸಚಿವರು, ಪ್ರಧಾನಿಯನ್ನು ದೆಹಲಿಯಲ್ಲಿ ಅವರ ಅಧಿಕೃತ ನಿವಾಸ, ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸುವುದು ವಾಡಿಕೆ. ಆದರೆ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಪ್ರಧಾನಿಯನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ, ಸಿಎಂ ಪರವಾಗಿ ಮನವಿ ಸಲ್ಲಿಸಿದ್ದಾರೆ. ಮನವಿ ಸಲ್ಲಿಸಿದ್ದೇವೆ ಎಂದು ತೋರಿಸಿಕೊಳ್ಳುವುದಷ್ಟೇ ಇವರಿಗೆ ಬೇಕಿರುವುದು, ರೈತರ ಹಿತಕಾಯುವ ಯಾವ ಆಲೋಚನೆಗಳೂ ಇವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಗಂಡನ ಜೇಬಿನ ಹಣ ಹೆಂಡತಿಗೆ:

ರಾಜ್ಯದಲ್ಲಿ 86.81 ಲಕ್ಷ ರೈತ ಕುಟುಂಬಗಳಿವೆ. ಶೇ.70ರಷ್ಟು ಜನರು ರೈತ ಕುಟುಂಬದವರಾಗಿದ್ದಾರೆ. ಕೃಷಿ ಇಲಾಖೆಯ ವಿಷನ್‌ ವರದಿಯಲ್ಲಿ ಆಹಾರ ಭದ್ರತೆ ಕಾಪಾಡಲಾಗುವುದು ಎನ್ನಲಾಗಿದೆ. ಸಿದ್ದರಾಮಯ್ಯನವರು ಏನೇ ಕೇಳಿದರೂ, ಗ್ಯಾರಂಟಿಯಡಿ 2,000 ರು.ಕೊಡುತ್ತಿದ್ದೇವೆ ಎನ್ನುತ್ತಾರೆ. ಈಗ ಮದ್ಯದ ದರವನ್ನು 50ರಿಂದ 60 ರು.ಏರಿಕೆ ಮಾಡಿ ಗಂಡನ ಜೇಬಿಂದ ತೆಗೆದು ಹೆಂಡತಿಗೆ ಹಣ ನೀಡುತ್ತಿದ್ದಾರೆ. ಬಾರುಗಳ ಮುಂದೆಯೇ ಜನ ಈ ಸರ್ಕಾರ ನಮ್ಮಿಂದ ನಡೆಯುತ್ತಿದೆ ಎಂದು ಬೈಯುತ್ತಿದ್ದಾರೆ ಎಂದು ಕಿಚಾಯಿಸಿದರು. ರೈತರ ಆತ್ಮಹತ್ಯೆ-ಕರ್ನಾಟಕ ನಂ.2:

ಎರಡೂವರೆ ವರ್ಷಗಳಲ್ಲಿ 2,422 ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 32 ಕಬ್ಬು ಬೆಳೆಗಾರರಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದೇ ಕಾಂಗ್ರೆಸ್‌ ಸರ್ಕಾರದ ಸಾಧನೆಯ ಅಂಕಪಟ್ಟಿ ಎಂದು ಟೀಕಿಸಿದರು.

ಗ್ಯಾರಂಟಿಗಳಿಂದ ಈ ಸರ್ಕಾರದ ಖಜಾನೆ ಖಾಲಿಯಾಗಿದೆ. ಅಧಿಕಾರಿಗಳನ್ನು ಕೇಳಿದರೆ ಇನ್ನು ಆರು ತಿಂಗಳು ಏನು ಮಾಡೋಕೂ ಆಗಲ್ಲ. ಕೈಕಟ್ಟಿ ಕೂರುವ ಸ್ಥಿತಿಯಿದೆ ಎನ್ನುತ್ತಿದ್ದಾರೆ. ಇವರಿನ್ನೂ ಗ್ಯಾರಂಟಿ ಭ್ರಮೆಯಿಂದ ಹೊರಗೆ ಬಂದಿಲ್ಲ. ಆಂಧ್ರಪ್ರದೇಶದಲ್ಲಿ ಈ ಹಿಂದೆ ಜಗನ್ ಮೋಹನ್ ರೆಡ್ಡಿ ಸರ್ಕಾರ ಮನೆಬಾಗಿಲಿಗೆ 20 ಗ್ಯಾರಂಟಿ ಕೊಟ್ರು. ಆದರೆ, ಚುನಾವಣೆಯಲ್ಲಿ ಹೆಸರಿಲ್ಲದಂತೆ ಹೋದರು ಎಂಬುದು ನೆನಪಿರಲಿ ಎಂದು ಎಚ್ಚರಿಸಿದರು.ಪರಿಷತ್‌ನಲ್ಲಿ ಇಂದಿನಿಂದ ಉ.ಕರ್ನಾಟಕ ಬಗ್ಗೆ ಚರ್ಚೆ:

ಹಿಂದಿನ ಸಂಪ್ರದಾಯ ಮುರಿದು ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಬೆಳಗಾವಿ ಅಧಿವೇಶನದ ಮೊದಲನೇ ವಾರದಿಂದಲೇ ಚರ್ಚೆಗೆ ಅವಕಾಶ ಸಿಕ್ಕಿದ್ದು, ಎರಡನೇ ದಿನದಿಂದಲೇ ವಿಧಾನಸಭೆಯಲ್ಲಿ ಚರ್ಚೆ ಕೈಗೆತ್ತಿಕೊಂಡರೆ, ವಿಧಾನ ಪರಿಷತ್‌ನಲ್ಲಿ ಬುಧವಾರ ಈ ಕುರಿತು ಸುದೀರ್ಘ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ವಿಧಾನ ಪರಿಷತ್‌ನಲ್ಲಿ ಮಂಗಳವಾರ ಅನ್ಯ ವಿಚಾರಗಳ ಕುರಿತ ಚರ್ಚೆ ವೇಳೆ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ, ಇತರರು ಪರೋಕ್ಷವಾಗಿ ಪ್ರಸ್ತಾಪ ಮಾಡಿದರಾದರೂ ಬುಧವಾರ ಬಹುತೇಕ ಇಡೀ ದಿನ ಉತ್ತರ ಕರ್ನಾಟಕದ ಕುರಿತು ಚರ್ಚೆ ನಡೆಯಲಿದೆ.

ಈ ಬಾರಿ ವಿಧಾನ ಮಂಡಲ ಅಧಿವೇಶನದಲ್ಲಿ ಒಟ್ಟು ಮೂರು ದಿನವನ್ನು ಉತ್ತರ ಕರ್ನಾಟಕದ ಚರ್ಚೆಗಾಗಿಯೇ ಮೀಸಲಿಡಲು ನಿರ್ಧರಿಸಲಾಗಿದೆ. ಹೀಗಾಗಿ ಬುಧವಾರ ಇಡೀ ದಿನ ಈ ಭಾಗದ ಸಮಸ್ಯೆಗಳ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಗಂಭೀರ ಚರ್ಚೆ ನಡೆಯುವ ನಿರೀಕ್ಷೆ ಇದೆ.ಪ್ರಶ್ನೋತ್ತರ ಬದಿಗೊತ್ತಿ ಉ.ಕ. ಚರ್ಚೆಗೆ ಸ್ಪೀಕರ್‌ ನಿರಾಕರಣೆ:ವಿಧಾನಸಭೆಯ ಕಲಾಪದಲ್ಲಿ ಪ್ರಶ್ನೋತ್ತರ ಬದಿಗೊತ್ತಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದ ಘಟನೆ ಮಂಗಳವಾರ ವಿಧಾನಸಭೆಯಲ್ಲಿ ನಡೆಯಿತು.ಕಲಾಪ ಸಲಹಾ ಸಮಿತಿ ನಿರ್ಧಾರದಂತೆ ಮಂಗಳವಾರದಿಂದ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶ ನೀಡುವುದಾಗಿ ಸ್ಪೀಕರ್‌ ಅವರು ಪ್ರಕಟಿಸಿದ್ದರು. ಮಂಗಳವಾರ ಕಲಾಪ ಶುರುವಾಗುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಮೊದಲು ಉ-ಕ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ, ಸರ್ಕಾರವೇ ಉ-ಕ ಸಮಸ್ಯೆಗಳ ಚರ್ಚೆಗೆ ಪ್ರಸ್ತಾಪ ಮಾಡಿದೆ. ಇದನ್ನು ಕಲಾಪ ಸಲಹಾ ಸಮಿತಿ ಸಭೆಯಲ್ಲೂ ನಿರ್ಧರಿಸಲಾಗಿದೆ. ಈಗ ಪ್ರಶ್ನೋತ್ತರ ಬದಿಗೊತ್ತಿ ಉ-ಕ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಿ ಎಂದು ಕೇಳುತ್ತಿರುವುದು ಏಕೆ?. ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಸರ್ಕಾರ ಈ ಬಗ್ಗೆ ಚರ್ಚೆಗೆ ಸಿದ್ಧವಿದೆ ಎಂದರು.ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು, ತಕ್ಷಣವೇ ಉ.ಕ. ಸಮಸ್ಯೆಗಳ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್‌.ಕೆ.ಪಾಟೀಲ್‌ ಅವರು, ಪ್ರಶ್ನೋತ್ತರ ಬದಿಗೊತ್ತಿ ಉ-ಕ ಚರ್ಚೆ ಕೈಗೆತ್ತಿಕೊಳ್ಳಲು ಸರ್ಕಾರದ ಸಹಮತಿ ಇದೆ. ಅಂತಿಮ ನಿರ್ಧಾರ ಸ್ಪೀಕರ್‌ಗೆ ಬಿಟ್ಟದ್ದು ಎಂದರು. ಈ ವೇಳೆ, ಸ್ಪೀಕರ್‌ ಖಾದರ್‌ ಅವರು, ಪ್ರಶ್ನೋತ್ತರ ಅವಧಿ ಮುಗಿದ ಬಳಿಕವೇ ಉ-ಕ ಚರ್ಚೆ ನಡೆಸುವುದಾಗಿ ರೂಲಿಂಗ್ ನೀಡಿದರು.