ನನ್ನಿಂದಲೇ ಸಮಾಜ ಎನ್ನುವ ಭ್ರಮೆ ನಿಮ್ಮ ತಲೆಯಲ್ಲಿ ಇದ್ದರೆ ಅದನ್ನು ತೆಗೆದು ಹಾಕಿ. ಸಮಾಜ ಒಡೆಯುವ ಕೆಲಸವನ್ನು ಎಂದಿಗೂ ಮಾಡಬೇಡಿ. ಇಂಥ ಹುಚ್ಚು ಕಲ್ಪನೆಯಿಂದ ಹೊರ ಬಂದು ಸಮಾಜ ಒಗ್ಗೂಡಿಸುವ ಕೆಲಸಕ್ಕೆ ಮುಂದಾಗಿ ಎಂದು ಆದ್ರಳ್ಳಿ ಗ್ರಾಮದ ಬಂಜಾರಾ ಸಮಾಜದ ಗವಿಸಿದ್ದೇಶ್ವರ ಮಠದ ಡಾ. ಕುಮಾರ ಮಹಾರಾಜ ಶ್ರೀಗಳಿಗೆ ಶಾಸಕ ಡಾ. ಚಂದ್ರು ಲಮಾಣಿ ಎಚ್ಚರಿಕೆ ನೀಡಿದರು.
ಶಿರಹಟ್ಟಿ: ನನ್ನಿಂದಲೇ ಸಮಾಜ ಎನ್ನುವ ಭ್ರಮೆ ನಿಮ್ಮ ತಲೆಯಲ್ಲಿ ಇದ್ದರೆ ಅದನ್ನು ತೆಗೆದು ಹಾಕಿ. ಸಮಾಜ ಒಡೆಯುವ ಕೆಲಸವನ್ನು ಎಂದಿಗೂ ಮಾಡಬೇಡಿ. ಇಂಥ ಹುಚ್ಚು ಕಲ್ಪನೆಯಿಂದ ಹೊರ ಬಂದು ಸಮಾಜ ಒಗ್ಗೂಡಿಸುವ ಕೆಲಸಕ್ಕೆ ಮುಂದಾಗಿ ಎಂದು ಆದ್ರಳ್ಳಿ ಗ್ರಾಮದ ಬಂಜಾರಾ ಸಮಾಜದ ಗವಿಸಿದ್ದೇಶ್ವರ ಮಠದ ಡಾ. ಕುಮಾರ ಮಹಾರಾಜ ಶ್ರೀಗಳಿಗೆ ಶಾಸಕ ಡಾ. ಚಂದ್ರು ಲಮಾಣಿ ಎಚ್ಚರಿಕೆ ನೀಡಿದರು.ಶನಿವಾರ ಫಕೀರೇಶ್ವರ ಮಠದ ಆವರಣದಲ್ಲಿ ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳ ಲಂಬಾಣಿ ಬಂಜಾರ ಸಮಾಜದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸದ್ಗುರು ಸಂತ ಸೇವಾಲಾಲ್ ಮಹಾರಾಜರ ೨೮೬ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜ ಇದ್ದರೆ ಮಾತ್ರ ನಾವಿರಲು ಸಾಧ್ಯ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಿ ಎಂದ ಅವರು, ಸಮಾಜ ಒಗ್ಗೂಡಿಸಿ ಬೆಳೆಸುವ ಕೆಲಸಕ್ಕೆ ಮುಂದಾಗಿ ಎಂದು ಕರೆ ಕೊಟ್ಟರು.ಮಠದಲ್ಲಿ ಕುಳಿತುಕೊಂಡು ಮುಂದಿನ ದಿನಗಳಲ್ಲಿ ಆದ್ರಳ್ಳಿ ಗ್ರಾಮಕ್ಕೆ ಮತ ಕೇಳಲು ಬಂದರೆ ಕಾಲು ಮುರಿಯಿರಿ (ಕಡಿಯಿರಿ) ಎಂದು ಜನರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು. ನಿಮ್ಮ ನಡೆ ಬದಲಿಸಿಕೊಳ್ಳದಿದ್ದರೆ ಸಮಾಜದ ಜನತೆ ಬುದ್ಧಿ ಕಲಿಸಲಿದ್ದಾರೆ ಎಂದರು.
ಬಂಜಾರ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅಭಿವೃದ್ಧಿ ಹೊಂದಲು ಯುವಕರು ಪಣ ತೊಡಬೇಕು. ಜತೆಗೆ ಸಮಾಜದ ಏಳ್ಗೆಗೆ ಸಂತ ಸೇವಾಲಾಲ್ ಮಹಾರಾಜರ ಜೀವನ ಆದರ್ಶಗಳು ಯುವ ಪೀಳಿಗೆಗೆ ಆದರ್ಶವಾಗಿವೆ. ಸೇವಾಲಾಲರ ಚರಿತ್ರೆಯನ್ನು ಸಮಾಜ ಬಾಂಧವರು ತಿಳಿದುಕೊಳ್ಳಬೇಕು ಎಂದರು.ಲೋಕಕಲ್ಯಾಣಕ್ಕಾಗಿ ಮಹಾ ಮಾನವತಾವಾದವನ್ನು ಬೋಧಿಸಿದ ಸೇವಾಲಾಲ್ ಮಹಾರಾಜರು ಕಾಯಕವೇ ಕೈಲಾಸ ಎಂದು ಭಾವಿಸಿದ್ದರು. ದುಡಿದು ಉಣ್ಣುವ ತತ್ವಗಳನ್ನು ಪಾಲಿಸುತ್ತಿದ್ದರು. ಅವರ ಇಂತಹ ಮಾನವೀಯ ಮೌಲ್ಯಗಳನ್ನು ಎಲ್ಲರೂ ಅನುಸರಿಸಬೇಕು ಎಂದರು.ಹಿಂದುಳಿದ ಬಂಜಾರಾ ಸಮುದಾಯದಲ್ಲಿ ಜನಿಸಿದ ಸಂತ ಸೇವಾಲಾಲರು ತಮ್ಮ ಆದರ್ಶ ಜೀವನ ಶೈಲಿಯಿಂದಾಗಿ ಜನಮಾನಸದಲ್ಲಿ ಇಂದಿಗೂ ವಿರಾಜಮಾನರಾಗಿದ್ದಾರೆ ಎಂದರು. ವಿಜಯ ಮಹಾಂತೇಶ್ವರಮಠ ಲಿಂಗಸೂರ ಛಾವಣಿಯ ಶ್ರೀ ಜಗದ್ಗುರು ಸಿದ್ಧಲಿಂಗ ಶ್ರೀಗಳು ಮಾತನಾಡಿ, ಮಾನವ ಜನ್ಮ ಪವಿತ್ರವಾದದ್ದು. ಇದನ್ನು ಹಾಳು ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿರಿ, ಅರಿಷಡ್ ವರ್ಗಗಳನ್ನು ಸುಟ್ಟು ಹಾಕಿ ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಂತೆ ಬೋಧಿಸಿದ್ದ ಸೇವಾಲಾಲರು ಸಮಾಜದಲ್ಲಿನ ಅಜ್ಞಾನ, ಅಂಧಕಾರಗಳನ್ನು ದೂರ ಮಾಡಿ, ಎಲ್ಲರೂ ಸುಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿದೀಪವಾಗಬೇಕು ಎಂದಿದ್ದರು ಎಂದು ತಿಳಿಸಿದರು. ಸರಿಗಮಪ ಖ್ಯಾತಿಯ ಹಾಡುಗಾರ ಹಾಗೂ ಬಿಗ್‌ಬಾಸ್ ಸೀಸನ್ ೧೧ರ ವಿನ್ನರ ಹನಮಂತ ಲಮಾಣಿ ಮತ್ತು ಸರಿಗಮಪ ಖ್ಯಾತಿಯ ೧ ರನ್ನರ್ ಆಫ್ ರಮೇಶ ಲಮಾಣಿ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.
ಮಾಜಿ ಶಾಸಕ ರಾಮಣ್ಣ ಲಮಾಣಿ, ಆನಂದ ಗಡ್ಡದ್ದೇವರಮಠ, ಸುನೀಲ ಮಹಾಂತಶೆಟ್ಟರ, ದೀಪಕ ಲಮಾಣಿ, ಶಿವಣ್ಣ ಎನ್. ಲಮಾಣಿ, ಹುಮಾಯೂನ ಮಾಗಡಿ, ಟೋಪಣ್ಣ ಲಮಾಣಿ, ವೆಂಕಟೇಶ ಅರ್ಕಸಾಲಿ ಮಾತನಾಡಿದರು. ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ದೇವಪ್ಪ ಲಮಾಣಿ, ಮಂಜು ಘಂಟಿ, ಗುರಪ್ಪ ಲಮಾಣಿ, ರಾಮಣ್ಣ ಶಿಗ್ಲಿ, ಪರಮೇಶ ಲಮಾಣಿ, ಎಚ್. ನಾಣಕಿ ನಾಯಕ, ಚನ್ನಯ್ಯ ದೇವೂರ, ಪುಂಡಲೀಕ ಲಮಾಣಿ, ಈರಣ್ಣ ಚವ್ಹಾಣ, ಶಿವು ಲಮಾಣಿ, ಸಂತೋಷ ರಾಠೋಡ, ಎಂ.ಕೆ. ಲಮಾಣಿ ಇತರರು ಇದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಮುದಾಯದ ಮಹಿಳೆಯರು ಪಟ್ಟಣದ ತುಂಬೆಲ್ಲ ಸೇವಾಲಾಲರ ಭಾವಚಿತ್ರ ಮೆರವಣಿಗೆ ನಡೆಸಿದರು. ಲಂಬಾಣಿ ಮಹಿಳೆಯರು ಮೆರವಣಿಗೆಯುದ್ದಕ್ಕೂ ತಮ್ಮ ಶೈಲಿಯ ನೃತ್ಯ, ಲಂಬಾಣಿ ಹಾಡು, ಭಜನೆಯೊಂದಿಗೆ ಮೆರವಣಿಗೆಗೆ ಶೋಭೆ ತಂದರು.