ಕಾಪು: ಇಲ್ಲಿನ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸಾತ್ವಿಕ್ ಎಸ್. ಭಟ್, ಲೋಲಾಕ್ಷಿ, ಮಾನಸಿ ಹಾಗೂ ಪ್ರತಿಕ್ಷಾ ಪಾಟೀಲ್ ಅವರು ವಿಭಾಗದ ಪ್ರಾಧ್ಯಾಪಕಿ ಪ್ರೀತಿ ಎಂ. ಅವರ ಮಾರ್ಗದರ್ಶನದಲ್ಲಿ “ಇ ವೋಟಿಂಗ್ ಸಿಸ್ಟಮ್” ಎಂಬ ಸುರಕ್ಷಿತ ಬಯೋಮೆಟ್ರಿಕ್ ಮತದಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ವ್ಯವಸ್ಥೆಯಲ್ಲಿ ಮತದಾರರ ಗುರುತಿನ ದೃಢೀಕರಣಕ್ಕಾಗಿ ಮುಖ ಮತ್ತು ಕಣ್ಣು ಗುರುತಿಸುವಿಕೆ ಮುಂತಾದ ಬಯೋಮೆಟ್ರಿಕ್ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಇದರಿಂದ ಪ್ರತಿಯೊಬ್ಬ ವ್ಯಕ್ತಿಯು ಕೇವಲ ಒಮ್ಮೆ ಮಾತ್ರ ಮತ ಚಲಾಯಿಸಲು ಸಾಧ್ಯವಾಗುತ್ತದೆ ಹಾಗೂ ನಕಲಿ ಮತದಾನ ಮತ್ತು ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಕಾರ್ಯನಿರ್ವಹಿಸುವಂತೆ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದ್ದು, ದೂರದ ಪ್ರದೇಶಗಳಲ್ಲೂ ಬಳಸಲು ಅನುಕೂಲಕರವಾಗಿದೆ. ಸುರಕ್ಷಿತ ಮತ ಸಂಗ್ರಹಣೆ, ನೈಜ ಸಮಯದ ಫಲಿತಾಂಶಗಳ ದೃಶ್ಯೀಕರಣ ಹಾಗೂ ಪಾರದರ್ಶಕತೆಯನ್ನು ಕಾಪಾಡುವ ಸೌಲಭ್ಯಗಳನ್ನು ಇದು ಒಳಗೊಂಡಿದೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಸಿಇಒ ಮತ್ತು ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದ್ದಾರೆ.