ಕನ್ನಡಪ್ರಭ ವಾರ್ತೆ ಚಡಚಣ
ಪಟ್ಟಣದಲ್ಲಿ ಮೇ 28 ರಂದು ಬೆಳಗ್ಗೆ 10 ಗಂಟೆಗೆ ಗುರುಕೃಪಾ ಮಂಗಲ ಕಾರ್ಯಾಲಯದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸವಿನೆನಪಿಗಾಗಿ ಗುರು ನಮನ ಹಾಗೂ ಜೋಡೆತ್ತು ಹೊಂದಿದ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹೇಂದ್ರಕುಮಾರ ನಾಯಕ್ ಫೌಂಡೇಶನ್ ಅಧ್ಯಕ್ಷ ಮಹೇಂದ್ರಕುಮಾರ ನಾಯಕ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಅದರು, ಕಾರ್ಯಕ್ರಮದ ಸಾನ್ನಿಧ್ಯವನ್ನು ಕನ್ಹೇರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಆಧ್ಯಾತ್ಮಿಕ ಚಿಂತಕ ಜಂಭುನಾಥ ಮಳಿಮಠ ನೆರವೇರಿಸುವರು. ಈ ಸಂದರ್ಭದಲ್ಲಿ ಭಾಗದ ಸುಮಾರು 200 ಜನ ಜೋಡೆತ್ತು ಹೊಂದಿದ ಕೃಷಿಕರಿಗೆ ಸನ್ಮಾನ ಹಾಗೂ ಕನ್ಹೇರಿ ಶ್ರೀಗಳಿಂದ ಸಾವಯವ ಕೃಷಿ ಬಗ್ಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು
ಬುರುಣಾಪೂರ ಆರೂಢ ಮಠದ ಮಾತೆ ಯೋಗೇಶ್ವರಿ ಮಾತೆ, ಸ್ಥಳಿಯ ಗುರುದೇವಾಶ್ರಮದ ಯೋಗಾನಂದ ಶ್ರೀಗಳು, ಸಾಹಿತಿ ಬಸವರಾಜ ಯಂಕಂಚಿ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಪಪಂ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಸ್ತ್ರೀ ಸಂಗಮೇಶ್ವರ ಸಂಸ್ಥೆಯ ಅಧ್ಯಕ್ಷ ಗಂಗಾಧರ ಪಾವಲೆ, ಮಹಾದೇವ ಯಂಕಂಚಿ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು. ಪಪಂ ಸದಸ್ಯರಾದ ಚೇತನ ನಿರಾಳೆ, ರಾಜು ಕೋಳಿ, ಪ್ರಕಾಶಗೌಡ ಪಾಟೀಲ, ಅಶೋಕ ಕುಲಕರ್ಣಿ, ಪ್ರಭಾಕರ ನಿರಾಳೆ, ಕೇದಾರಿ ಸಾಳುಂಕೆ ಇದ್ದರು.