ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ಮೊದಲ ಬಾರಿಗೆ ಮೃತ ದಾನಿಯಿಂದ ಅಂಗಾಂಗ ಸಂಗ್ರಹಣೆ ಯಶಸ್ವಿಯಾಗಿ ನೆರವೇರಿದ್ದು, ಕೊಡಗು ಜಿಲ್ಲೆಯ ವೈದ್ಯಕೀಯ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದೆ.ಗೋಣಿಕೊಪ್ಪ ಸಮೀಪದ ಅರವತ್ತೋಕ್ಲು ಗ್ರಾಮದ 46 ವರ್ಷದ ಡಾಲು ಅವರು ಅಪಘಾತದಲ್ಲಿ ತೀವ್ರ ತಲೆಗೆ ಗಾಯಗೊಂಡು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಬ್ರೇನ್‌ಸ್ಟೆಮ್ ಡೆತ್ ಶಂಕೆ ವ್ಯಕ್ತಪಡಿಸಿದರು. ಭಾರತೀಯ ಕಾನೂನು ಪ್ರಕಾರ ಎರಡು ಹಂತಗಳಲ್ಲಿ ವೈದ್ಯಕೀಯ ಸಮಿತಿಯಿಂದ ಪರೀಕ್ಷೆ ನಡೆಸಿ, 48 ಗಂಟೆಗಳ ವೀಕ್ಷಣೆಯ ಬಳಿಕ ಬ್ರೇನ್‌ಸ್ಟೆಮ್ ಡೆತ್ ದೃಢಪಡಿಸಲಾಯಿತು.
ಈ ಸಂದರ್ಭದಲ್ಲಿ ಡಾಲು ಅವರ ಪತ್ನಿ ರಾಜೇಶ್ವರಿ ಹಾಗೂ ಕುಟುಂಬ ಸದಸ್ಯರು ಮಹತ್ವದ ಮಾನವೀಯ ನಿರ್ಧಾರ ಕೈಗೊಂಡು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು.ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಈಗಾಗಲೇ SOTTO ಹಾಗೂ NOTTO ಮಾನ್ಯತೆ ಪಡೆದಿರುವ ಹಿನ್ನೆಲೆ, ಪ್ರಕರಣವನ್ನು ರಾಜ್ಯ ಅಂಗಾಂಗ ಮತ್ತು SOTTO ಗೆ ವರದಿ ಮಾಡಲಾಯಿತು. SOTTO ಮಾರ್ಗದರ್ಶನದಲ್ಲಿ ಅಂಗಾಂಗ ಸಂಗ್ರಹಣೆಯ ಪ್ರಕ್ರಿಯೆ ಕೈಗೊಳ್ಳಲಾಯಿತು.
ಡೀನ್ ಮತ್ತು ನಿರ್ದೇಶಕರಾದ ಡಾ. ಲೋಕೇಶ್ ಎ.ಜೆ., ಆಸ್ಪತ್ರೆಯ ಅಧೀಕ್ಷಕರಾದ ಡಾ. ಸೋಮಶೇಖರ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ನಂಜುಂಡಯ್ಯ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಐಸಿಯು ತಂಡದ ಡಾ. ನಿಶೀದ್ ಜೋಸೆಫ್ ಹಾಗೂ ನರ್ಸಿಂಗ್ ಅಧಿಕಾರಿ ಪವನ್ ಅವರು ರೋಗಿಯ ದೇಹದ ಸ್ಥಿತಿಯನ್ನು ಸ್ಥಿರವಾಗಿಟ್ಟುಕೊಳ್ಳಲು ನಿರಂತರ ಶ್ರಮಿಸಿದರು.
ಬೆಳಗಿನ 2 ಗಂಟೆಗೆ ಆರಂಭವಾದ ಶಸ್ತ್ರಚಿಕಿತ್ಸೆಯಲ್ಲಿ ಎರಡು ಮೂತ್ರಪಿಂಡಗಳು, ಹೃದಯ ಕವಾಟಗಳು ಮತ್ತು ಕಣ್ಣುಗಳ ಕಾರ್ನಿಯಾಗಳನ್ನು ಯಶಸ್ವಿಯಾಗಿ ಸಂಗ್ರಹಿಸಲಾಯಿತು. ಮೈಸೂರಿನಿಂದ ಆಗಮಿಸಿದ ಯೂರೋಸರ್ಜನ್‌ಗಳಾದ ಡಾ. ಸಚಿನ್ ಧಾರವಾಡ್ಕರ್ ಮತ್ತು ಡಾ. ವಿಜಯಕುಮಾರ್ ಮೂತ್ರಪಿಂಡ ಸಂಗ್ರಹಣೆ ನಡೆಸಿದರು. ಡಾ. ಅಭಿನಂದನ್ ಮತ್ತು ಡಾ. ಚಂದ್ರಶೇಖರ್ ಹೃದಯ ಕವಾಟಗಳನ್ನು, ಡಾ. ಶ್ರುತಿ ಮತ್ತು ತಂಡ ಕಾರ್ನಿಯಾಗಳನ್ನು ಸಂಗ್ರಹಿಸಿದರು.
ನರ್ಸಿಂಗ್ ಸಿಬ್ಬಂದಿಯಾದ ಜಯಶ್ರೀ, ಅನಿಲ್ ಮತ್ತು ಮಂಜುನಾಥ್ ಹಾಗೂ ಹಿರಿಯ ನರ್ಸಿಂಗ್ ಅಧಿಕಾರಿಗಳಾದ ವಸಂತ್ ಮತ್ತು ಮಹೇಶ್ ಈ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿದರು.ನಂತರ ಡಾಲು ಅವರ ಪಾರ್ಥಿವ ಶರೀರವನ್ನು “ವಾಕ್ ಆಫ್ ಆನರ್” ಮೂಲಕ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ನರ್ಸಿಂಗ್ ತಂಡ ದಾನಿಯ ಸೇವೆಯನ್ನು ಗೌರವಿಸಿದರು. ಕುಟುಂಬವನ್ನು ಸನ್ಮಾನಿಸಲಾಯಿತು.
ಈ ಕುರಿತು ಮಾತನಾಡಿದ ಡೀನ್ ಡಾ. ಲೋಕೇಶ್ ಎ.ಜೆ., ಇದು ಕೊಡಗು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ಐತಿಹಾಸಿಕ ಕ್ಷಣ. ಅಂಗಾಂಗ ದಾನದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದರು.ಭಾರತದಲ್ಲಿ ಅಂಗಾಂಗಗಳ ಅಗತ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ, ಡಾಲು ಅವರ ಕುಟುಂಬದ ಈ ನಿರ್ಧಾರ ಅನೇಕ ಜೀವಗಳಿಗೆ ಹೊಸ ಆಶೆಯಾಗಿ ಪರಿಣಮಿಸಿದೆ.
ಡೀನ್ ಮತ್ತು ನಿರ್ದೇಶಕರಾದ ಡಾ. ಲೋಕೇಶ್ ಎ.ಜೆ., ಆಸ್ಪತ್ರೆಯ ಅಧೀಕ್ಷಕರಾದ ಡಾ. ಸೋಮಶೇಖರ್ ಡಾ. ನಂಜುಂಡಯ್ಯ, ಡಾ. ಅಭಿನಂದನ್, ಡಾ ಧನಂಜಯ, ಡಾ. ನಿಶೀದ್ ಜೋಸೆಫ್ ಡಾ. ಅಯ್ಯಪ್ಪ, ಡಾ ಚೇತನ್, ಡಾ. ಪ್ರಮೋದ್, ಡಾ. ಅಮಿತಾ, ಡಾ. ಅಮೂಲ್ಯ, ಡಾ. ಅಕ್ಷತಾ, ಡಾ ಚಂದ್ರಶೇಖರ್, ಡಾ. ಕೃಪಾಲಿನಿ, ಡಾ . ಶೃತಿ, ಡಾ ಆತೀಶ್, ಡಾ ಉಮೇಶ್ ಬಾಬು, ಡಾ ಕಿಶೋರ್ ಕುಮಾರ್, ಡಾ ಪ್ರಸನ್ನ, ಕೌನ್ಸಿಲರ್ಗಳಾದ ವಿನೋದ್ ಕುಮಾರ್, ಕಾರ್ತಿಕ್ ಸ್ನಾತಕೋತ್ತರ ವೈದ್ಯರು, ಶುಶ್ರೂಷಕ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಜರಿದ್ದರು.