ಸ್ನಾನಕ್ಕೆ ಹೋಗಿದ್ದಾಗ ಗೀಸರ್ ಸೋರಿಕೆಯಾಗಿ ತಾಯಿ-ಮಗು ಮೃತಪಟ್ಟಿರುವ ಘಟನೆ ಗೋವಿಂದರಾಜನಗರದ ಪಂಚಶೀಲನಗರದಲ್ಲಿ ಸೋಮವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ನಾನಕ್ಕೆ ಹೋಗಿದ್ದಾಗ ಗೀಸರ್ ಸೋರಿಕೆಯಾಗಿ ತಾಯಿ-ಮಗು ಮೃತಪಟ್ಟಿರುವ ಘಟನೆ ಗೋವಿಂದರಾಜನಗರದ ಪಂಚಶೀಲನಗರದಲ್ಲಿ ಸೋಮವಾರ ನಡೆದಿದೆ.ಪಂಚಮಶೀಲನಗರ ನಿವಾಸಿ ಕಿರಣ್ ಎಂಬುವರ ಪತ್ನಿ ಚಾಂದಿನಿ (30) ಹಾಗೂ ಪುತ್ರಿ ಯಾವಿ ಕಿರಣ್ (4) ಮೃತರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿರಣ್ ನಗರದಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು, ಚಾಂದಿನಿ ಮತ್ತು ಇಬ್ಬರು ಪುತ್ರಿಯರ ಜತೆ ಪಂಚಮಶೀಲ ನಗರದಲ್ಲಿ ವಾಸವಾಗಿದ್ದಾರೆ. ಸೋಮವಾರ ಬೆಳಗ್ಗೆ ಎಂದಿನಂತೆ ಕಿರಣ್ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ 12.30ರ ಸುಮಾರಿಗೆ ಮನೆಯಲ್ಲಿ ಚಾಂದಿನಿ ತಮ್ಮ ಪುತ್ರಿ ಯುವಿ ಜತೆ ಸ್ನಾನ ಮಾಡಲು ಹೋಗಿದ್ದು, ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿಕೊಂಡಿದ್ದಾರೆ. ಪರಿಣಾಮ ಗೀಸರ್ ಗ್ಯಾಸ್‌ನಿಂದ ಕಾರ್ಬನ್ ಡೈಆಕ್ಲೈಡ್ ಅನಿಲ ಸೋರಿಕೆಯಾಗಿ ಇಬ್ಬರು ಅಸ್ವಸ್ಥಗೊಂಡು ಅಲ್ಲಿಯೇ ಮೃತಪಟ್ಟಿದ್ದಾರೆ.ಇನ್ನು ಕಿರಣ್ ಅವರ ಮೊದಲ ಪುತ್ರಿ ಶಾಲೆಗೆ ಹೋಗಿದ್ದು, ಆಕೆಯನ್ನು ಕಿರಣ್ ಸಹೋದರ ಮನೆಗೆ ಕರೆತಂದಿದ್ದಾರೆ. ಬಳಿಕ ಬಾಗಿಲು ಬಡಿದಿದ್ದಾರೆ. ಯಾರೂ ಸ್ಪಂದಿಸಿಲ್ಲ. ಬಳಿಕ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ತಾಯಿ-ಮಗಳು ಇಬ್ಬರು ಸ್ನಾನದ ಕೋಣೆಯಲ್ಲಿ ಅಸ್ವಸ್ಥರಾಗಿ ಬಿದ್ದಿರುವುದು ಕಂಡು ಬಂದಿದೆ. ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.
ಇಬ್ಬರ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ ಮಂಗಳವಾರ ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರಿಸಲಾಗುತ್ತದೆ. ಇನ್ನು ಆಸ್ಪತ್ರೆಯಿಂದ ಬಂದ ಮಾಹಿತಿ ಮೇರೆಗೆ ಗೋವಿಂದರಾಜನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.