ಸರ್ಕಾರಗಳು ಕಾರ್ಪೊರೇಟ್ ಸಂಸ್ಥೆಗಳ ಕೈಗೊಂಬೆ

| Published : Oct 26 2025, 02:00 AM IST

ಸಾರಾಂಶ

ಸರ್ಕಾರಗಳು ಮಾಲೀಕನಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಿ ಕಾರ್ಮಿಕರನ್ನು ಬೀದಿಗೆ ತಳ್ಳಿದ್ದಾರೆ, ರಾಜಕೀಯ ವ್ಯವಸ್ಥೆ ಯಾವತ್ತೂ ಕಾರ್ಮಿಕರ ಪರ ನಿಲ್ಲುವುದಿಲ್ಲ, ಶೋಷಣೆ ಇಲ್ಲದ ಸಮಾಜ ನಿರ್ಮಾಣಕ್ಕೆ ನಾವು ಎಲ್ಲರೂ ಒಂದಾಗುವ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ಕೊಡಬೇಕಾಗಿದೆ. ಬಂಡವಾಳ ಶಾಹಿಗಳು ಕಾರ್ಮಿಕರ ಅವಶ್ಯಕತೆ ಇಲ್ಲವೆಂದು ನಿರಾಕರಿಸುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರನಮ್ಮನ್ನು ಆಳುವ ಸರ್ಕಾರಗಳು ರೈತರು, ಕಾರ್ಮಿಕರ ಮತ್ತು ಅಸಂಘಟಿತ ವಲಯಗಳಲ್ಲಿ ದುಡಿಯುವ ಶ್ರಮಜೀವಿಗಳ ಬದುಕಿನ ಜೊತೆ ಚೆಲ್ಲಾಟವಾಡುವ ಜೊತೆಗೆ ಜನಸಂಖ್ಯೆಯ ಶೇ.೨ ಇರುವ ಬಂಡವಾಳಗಾರರ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಕೈಗೊಂಬೆಯಾಗಿದ್ದಾರೆ, ಕಾರ್ಮಿಕರು, ರೈತರು ಒಗ್ಗಟ್ಟ ಪ್ರದರ್ಶನದ ಮೂಲಕ ತಮ್ಮ ಹಕ್ಕನ್ನು ಪಡೆಯಬೇಕಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಎಚ್.ಎನ್.ಗೋಪಾಲಗೌಡ ತಿಳಿಸಿದರು. ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಸಂಘಟನೆಯ ಏಳನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಸರ್ಕಾರ ಮಾಲೀಕರ ಪರ

ಸರ್ಕಾರಗಳು ಮಾಲೀಕನಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಿ ಕಾರ್ಮಿಕರನ್ನು ಬೀದಿಗೆ ತಳ್ಳಿದ್ದಾರೆ, ರಾಜಕೀಯ ವ್ಯವಸ್ಥೆ ಯಾವತ್ತೂ ಕಾರ್ಮಿಕರ ಪರ ನಿಲ್ಲುವುದಿಲ್ಲ, ಶೋಷಣೆ ಇಲ್ಲದ ಸಮಾಜ ನಿರ್ಮಾಣಕ್ಕೆ ನಾವು ಎಲ್ಲರೂ ಒಂದಾಗುವ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ಕೊಡಬೇಕಾಗಿದೆ. ಬಂಡವಾಳ ಶಾಹಿಗಳು ಕಾರ್ಮಿಕರ ಅವಶ್ಯಕತೆ ಇಲ್ಲವೆಂದು ನಿರಾಕರಿಸುತ್ತಿದ್ದು, ಸ್ವಯಂ ಘೋಷಿತ ಪ್ರಭುಗಳಾಗಲು ಹೊರಟಿದ್ದಾರೆ ಎಂದು ಟೀಕಿಸಿದರು.

ಸರ್ಕಾರಗಳು ತಮ್ಮ ಕಾರ್ಯ ಯಶಸ್ವಿಗೊಳಿಸಲು ಕಾಯಂ ಹೊರಗುತ್ತಿಗೆ ನೌಕರರನ್ನು ಬಳಸಿಕೊಳ್ಳುತ್ತಿದ್ದು, ಅವರ ಬದುಕಿನ ಸೇವಾ ಭದ್ರತೆ ಕಲ್ಪಿಸುತ್ತಿಲ್ಲ. ಕಾರ್ಮಿಕರ ಹೋರಾಟದ ಫಲವಾಗಿ ಗಳಿಸಿದ್ದ ೨೯ ಕಾರ್ಮಿಕರ ಕಾನೂನುಗಳನ್ನು ರದ್ದು ಮಾಡಲು ಹೊರಟಿದ್ದಾರೆ ಇದನ್ನು ವಿರೋಧಿಸಬೇಕಾಗಿದೆ, ಕಾರ್ಮಿಕರ ಕನಿಷ್ಠ ವೇತನ ೩೬ ಸಾವಿರ ಜಾರಿಗೆ ದೇಶಾದ್ಯಂತ ಇರುವ ಕಾರ್ಮಿಕರು ಒತ್ತಾಯ ಮಾಡಬೇಕಾಗಿದೆ ಎಂದರು.

ಅಪಾಯಕಾರಿ ಕಾರ್ಮಿಕ ಕಾಯ್ದೆ

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕಾರ್ಮಿಕರ ಹೋರಾಟಗಳನ್ನು ಸರ್ಕಾರಗಳು ಸಹಿಸಿಕೊಳ್ಳುತ್ತಿಲ್ಲ ಕಾರ್ಮಿಕರ ಕಾಯ್ದೆಗಳು ಅಪಾಯಕಾರಿಯಾಗಿದ್ದು ಬಂಡವಾಳಗಾರರಿಗೆ ಸರ್ಕಾರಗಳೇ ಮುಕ್ತ ಅವಕಾಶ ನೀಡಿವೆ ಕಾರ್ಮಿಕರು ಆಧುನಿಕ ಜೀತದಾಳುಗಳಾಗಿ ದುಡಿಯಬೇಕಾಗಿವೆ ಯುವ ಪೀಳಿಗೆಯ ಭವಿಷ್ಯವನ್ನು ಕಂಪನಿಗಳು ಆಳು ಮಾಡಲು ಹೊರಟಿದ್ದಾರೆ ಶಾಸಕರು ಸಂಸದರು ಸೇರಿದಂತೆ ಜನಪ್ರತಿನಿಧಿಗಳಿಗೆ ಕಾರ್ಮಿಕರ ಪರ ಧ್ವನಿಯಿಲ್ಲ ಒಗ್ಗಟ್ಟು ಒಂದೇ ದಾರಿಯಾಗಿದೆ ಎಂದರು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಮಾತನಾಡಿ, ರೈತರು ಬೆಳೆದ ವಸ್ತುಗಳಿಗೆ ಸರಿಯಾದ ಬೆಂಬಲ ಬೆಲೆ, ಮಾರುಕಟ್ಟೆ ವ್ಯವಸ್ಥೆ ಇಲ್ಲ, ಕೈಗಾರಿಕೆಗಳು ಇಲ್ಲದೇ ಹಣ್ಣು ತರಕಾರಿಗಳು ಕೊಳೆಯುವ ಸ್ಥಿತಿಗೆ ಬಂದಿದೆ ಸರ್ಕಾರಗಳು ನಮ್ಮ ಬೇಡಿಕೆ ಕೇಳಿಸಿಕೊಳ್ಳಲ್ಲ ಕಿವುಡತನ ತೋರುತ್ತಿವೆ. ಇದಕ್ಕಾಗಿ ಒಗ್ಗಟ್ಟು ಮತ್ತು ಐಕ್ಯತೆ ಬೇಕು ದೆಹಲಿ ಮತ್ತು ದೇವನಹಳ್ಳಿಯ ರೈತ ಹೋರಾಟಗಳು ನಮಗೆಲ್ಲ ಮಾದರಿಯಾಗಬೇಕು ಎಂದರು.ದುಡಿಮೆಗೆ ತಕ್ಕ ಪ್ರತಿಫಲ ನೀಡಿ

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ದುಡಿಯುವ ಜನರಿಗೆ ಬದುಕಲು ಯೋಗ್ಯ ಕೂಲಿ, ವಸತಿ, ಪಿಂಚಣಿ ನೀಡಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರ ಕಾಯಂ ಮಾಡಬೇಕು. ಅಸಂಘಟಿತ ಕಾರ್ಮಿಕರ ಸಮಗ್ರ ಸಾಮಾಜಿಕ ಭದ್ರತೆ, ಬರಪೀಡಿತ-ಒಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಮಧುಗಿರಿ ಉಪ ವಿಭಾಗಕ್ಕೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಈ ಪ್ರದೇಶಗಳಲ್ಲಿನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕಿಸುವಂತೆ ಈ ಸಮ್ಮೇಳನದಲ್ಲಿ ಚರ್ಚೆಯಾಗಬೇಕು ಎಂದರು.ಪ್ರತಿಭಟನಾ ಮೆರವಣಿಗೆ

ಇದಕ್ಕೂ ಮುಂಚೆ ನಗರದ ಪ್ರವಾಸಿ ಮಂದಿರದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಸಿಐಟಿಯು ಕಾರ್ಯಕರ್ತರು ಸರ್ಕಾರಗಳ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ಮೆರವಣಿಗೆ ಮೂಲಕ ರಂಗಮಂದಿರಕ್ಕೆ ಆಗಮಿಸಿದರು.ಬಹಿರಂಗ ಸಭೆಯ ವೇದಿಕೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಅಮರನಾರಾಯಣ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಸಲ್ಲಾವುದ್ದೀನ್ ಬಾಬು, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಖಜಾಂಚಿ ಹೆಚ್.ಬಿ ಕೃಷ್ಣಪ್ಪ, ಅಂಗನವಾಡಿ ನೌಕರರ ಸಂಘದ ಆಂಜಲಮ್ಮ, ಮುಖಂಡರಾದ ಪಿ.ಶ್ರೀನಿವಾಸ್, ಪಿ.ಆರ್ ಸೂರ್ಯನಾರಾಯಣ, ಎ.ಆರ್ ಬಾಬು, ಪಾತಕೋಟ ನವೀನ್ ಕುಮಾರ್, ತಂಗರಾಜ್, ಜಯಲಕ್ಷ್ಮಿ, ಭೀಮರಾಜ್, ಶಿವಾನಂದ್, ವೀರಭದ್ರ, ತಿರುಪತಿ, ಆನಂದ್, ಕೇಶವರಾವ್ ಇದ್ದರು.