ಹೊಸಪೇಟೆ: ಜಿಲ್ಲೆಯಲ್ಲಿ ಶನಿವಾರ ರಾತ್ರಿ, ಭಾನುವಾರ ಬೆಳಗಿನಜಾವ ಸುರಿದ ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ವಿಶ್ವವಿಖ್ಯಾತ ಹಂಪಿಯಲ್ಲಿ ಸಹ ಭಾರೀ ಮಳೆಯಿಂದಾಗಿ ಸ್ಮಾರಕಗಳ ಮುಂದೆ ಹಾಗೂ ಸ್ಮಾರಕಗಳಿಗೆ ತೆರಳುವ ರಸ್ತೆಯಲ್ಲಿ ಮಳೆ ನೀರು ನಿಂತು ಪ್ರವಾಸಿಗರ ಸಂಚಾರ ಅಡಚಣೆಯಾಯಿತು.

ಹಂಪಿಯಲ್ಲಿ ಪ್ರವಾಸಿಗರು ಮಳೆ ನೀರಿನಲ್ಲಿ ಸಂಚರಿಸಿ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿದರು. ಹಂಪಿಯ ಸ್ಮಾರಕಗಳ ಬಳಿ ನೀರು ನಿಲ್ಲದೇ ಹರಿದು ಹೋಗುವಂತಹ ವ್ಯವಸ್ಥೆ ಕಲ್ಪಿಸಬೇಕಾಗಿತ್ತು. ಹಂಪಿಯ ರಸ್ತೆಗಳಲ್ಲಿ ತಗ್ಗುಗಳು ಬಿದ್ದು ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತಿರುವುದರಿಂದ ಕೆಲ ಪ್ರವಾಸಿಗರು ಬೇಸತ್ತು ಪ್ರವಾಸೋದ್ಯಮ ಮತ್ತು ಜಿಲ್ಲಾಡಳಿಕ್ಕೆ ಶಪಿಸಿಕೊಳ್ಳುತ್ತಿದ್ದರು.

ಕಳೆದ 2-3 ತಿಂಗಳಿನಿಂದ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜಿಲ್ಲೆಯ ಜನರು ಶನಿವಾರ ರಾತ್ರಿ ಸುರಿದ ಗುಡುಗು ಸಿಡಿಲು ಸಹಿತ ಭಾರಿ ಮಳೆ ಮತ್ತು ಕೆಲ ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಕೆಲವು ಅನಾಹುತಗಳು ನಡೆದಿವೆ. ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಲ್ಲಿ ಶನಿವಾರ ರಾತ್ರಿ ಭಾರೀ ಗುಡುಗು, ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ.

ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ಕೆ. ತಿಮ್ಮನಗೌಡ ಎಂಬವರ ಮನೆಯ ಕಾಂಪೌಂಡ್‌ ಗೋಡೆ ಕುಸಿದು ಬಿದ್ದಿದೆ.


ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿವೆ. ಮನೆಯಲ್ಲಿನ ಬಿತ್ತನೆ ಬೀಜ, ಗೊಬ್ಬರಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.

ಹೊಸಪೇಟೆ ತಾಲೂಕಿನ ಭುವನಹಳ್ಳಿ, ಗಾದಿಗನೂರು ಗ್ರಾಮಗಳಲ್ಲಿ ಸಾಕಷ್ಟು ಅವಾಂತರಗಳಾಗಿವೆ. ರೈತರ ಹೊಲಗಳಲ್ಲಿನ ವಿದ್ಯುತ್‌ ಪರಿವರ್ತಕಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.

ಗಾದಿಗನೂರು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ರಸ್ತೆ ಪಕ್ಕದ ಮಳೆ ನೀರು ಸುಗಮವಾಗಿ ಹರಿದು ಹೋಗದೇ ಮನೆಗಳಿಗೆ ನುಗ್ಗಿದ್ದು, ಮನೆ ಮುಂದಿರುವ ಹುಲ್ಲಿನ ಬಣವೆಗಳು ಸಹ ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 67 ಬಂದ್ ಮಾಡಿ ಪ್ರತಿಭಟೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕೊಟ್ಟೂರು ತಾಲೂಕಿನ ಉಜ್ಜಿನಿಯಲ್ಲಿ ಕೆಇಬಿ ಪವರ್ ಸ್ಟೇಷನ್‌ಗೆ ನೀರು ನುಗ್ಗಿ ಸಾಕಷ್ಟು ಅವಾಂತರಗಳಾಗಿವೆ. ಮಳೆ-ಗಾಳಿಯಿಂದಾಗಿ ರಾತ್ರಿ ಪೂರ್ತಿ ವಿದ್ಯುತ್ ಕಣ್ಣುಮುಚ್ಚಾಲೆ ಆಟ ನಡೆಸಿದ್ದರಿಂದ ಕತ್ತಲಲ್ಲಿ ಜನರು ಪರದಾಡಿದರು. ಗ್ರಾಮದ ಹಲವು ಮನೆಗಳಿಗೂ ಮಳೆ ನೀರು ನುಗ್ಗಿದ್ದು, ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು.

ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಹೊಸಪೇಟೆ ನಗರದ ಸ್ಲಂ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅನಾಹುತ ಕಾರಣವಾಗಿದೆ.