ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಗರ ಪ್ರದೇಶ ಸೇರಿದಂತೆ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡು ಜಲಪ್ರಳಯದ ಅನುಭವ ಎದುರಿಸಿದರು.ಕಳೆದ ಕೆಲವು ದಿನಗಳಿಂದ ಮಳೆಗೆ ಕಾದು ಕುಳಿತಿದ್ದ ಈ ಭಾಗದ ರೈತರು ಮಳೆಯಿಂದ ಸಂತಸಪಟ್ಟರು. ಜೋರಾದ ಮಳೆಗೆ ನಗರ ಪ್ರದೇಶ ಜನರು ಸಾಕಷ್ಟು ತೊಂದರೆ ಅನುಭವಿಸಿದರು.ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದರೂ ಮಧ್ಯಾಹ್ನದ ವೇಳೆಗೆ ಸೂರ್ಯನ ಬಿಸಿಲಿನ ತಾಪ ಹೆಚ್ಚಾಗಿ ಜನರು ತೀವ್ರ ಸೆಖೆ ಅನುಭವಿಸಿದರು. ಸಂಜೆ ವೇಳೆಗೆ ಏಕಾಏಕಿ ಮೋಡಗಳು ಕವಿದು ಗುಡುಗು-ಮಿಂಚಿನೊಂದಿಗೆ ಭಾರೀ ಮಳೆ ಆರಂಭವಾಯಿತು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ನಗರ ಪ್ರದೇಶಗಳ ಎಲ್ಲ ರಸ್ತೆಗಳು ಜಲಾವೃತಗೊಂಡವು.ಮಳೆಯ ನೀರು ರಸ್ತೆಗಳ ಮೇಲೆ ಹರಿದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ನೌಕರರು, ಶಾಲೆ ಮುಗಿಸಿ ವಾಪಸ್ಸಾದ ವಿದ್ಯಾರ್ಥಿಗಳು, ಸಾರ್ವಜನಿಕರು ಮಳೆಯಿಂದ ತತ್ತರಿಸಿ ಅಂಗಡಿ ಮುಂಗಟ್ಟುಗಳು, ಕಟ್ಟಡಗಳ ಬಳಿ ಆಶ್ರಯ ಪಡೆದರು. ನಗರದ ಹಲವು ಭಾಗಗಳಲ್ಲಿ ಹಳ್ಳಗಳು, ಗಟಾರಗಳು, ಚರಂಡಿಗಳು ತುಂಬಿ ಹರಿದವು. ಮಳೆ ನೀರು ರಸ್ತೆಗಳ ಮೇಲೆ ಹರಿದು ಚರಂಡಿಗಳಲ್ಲಿದ್ದ ತ್ಯಾಜ್ಯ ವಸ್ತುಗಳು ನೀರಿನೊಂದಿಗೆ ರಸ್ತೆಗಳಿಗೆ ತೇಲಿ ಬಂದು ದುರ್ವಾಸನೆ ಹರಡಿತು. ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡು ಹಲವು ಪ್ರದೇಶಗಳಲ್ಲಿ ಅವಾಂತರದ ಪರಿಸ್ಥಿತಿ ನಿರ್ಮಾಣವಾಯಿತು.ತೇಲಿದ ಬೈಕ್‌ಗಳು, ಕಾರುಗಳು:
ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ ವೃತ್ತದ ಜೋಡು ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ನಿಂತ ಪರಿಣಾಮ ದ್ವಿಚಕ್ರ ವಾಹನಗಳು, ಕಾರುಗಳು ಅರ್ಧದಷ್ಟು ನೀರಿನಲ್ಲಿ ಮುಳುಗಿದವು. ಕೇಂದ್ರ ಬಸ್ ನಿಲ್ದಾಣ, ಇಂಚಲ ಕ್ರಾಸ್, ಚನ್ನಮ್ಮ ವೃತ್ತದ ರಸ್ತೆಗಳಲ್ಲಿ ಕೆಲವು ದ್ವಿಚಕ್ರ ವಾಹನಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದವು. ಕೊಚ್ಚಿ ಹೋದ ಬೈಕ್ ಗಳನ್ನು ಮಾಲಿಕರು ರಕ್ಷಿಸಲು ಪರದಾಡಿದರು. ಇಂಚಲ ಕ್ರಾಸ್ ನಲ್ಲಿ ಮಳೆಗೆ ಟ್ರಾಫೀಕ್ ಜಾಮ್ ಅಗಿ ನಿಂತಿದ್ದ ಟ್ರ್ಯಾಕ್ಟರ್ ಮಳೆಯ ರಭಸಕ್ಕೆ ಹಿಂಬದಿಯಿಂದ ಬಂದು ಕಾರಿಗೆ ಡಿಕ್ಕಿ ಹೊಡೆಯಿತು. ಸೋಮವಾರ ಪೇಠೆಯಲ್ಲಿನ ತರಕಾರಿ ಮಳೆಗೆ ಕೊಚ್ಚಿ ಹೋದವು. ವ್ಯಾಪಾರಸ್ಥರು ಮಳೆಯಲ್ಲಿ ತೇಲಿದ ತರಕಾರಿ ಉಳಿಸಿಕೊಳ್ಳಲು ಪ್ರಯಾಸಪಟ್ಟರು. ಬಸ್ ನಿಲ್ದಾಣ ಹಲವೆಡೆ ಪಾರ್ಕ್ ಮಾಡಿದ್ದ ಮೋಟಾರ್ ಬೈಕ್‌ಗಳು ನೀರಿನ ರಭಸಕ್ಕೆ ತೇಲಿ ಹೋದವು. ವಾಹನ ಮಾಲೀಕರು ತಮ್ಮ ವಾಹನಗಳನ್ನು ರಕ್ಷಿಸಲು ಹರಸಾಹಸ ಪಟ್ಟರು. ಮನೆಗಳು, ಅಂಗಡಿಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ವ್ಯಾಪಾರಿಗಳು ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು. ಕುಲಕರ್ಣಿ ಗಲ್ಲಿ, ಕಿಲ್ಲೆದಾರ ಗಲ್ಲಿ, ಹುಡೇದ ಭಾಂವಿ, ಬಾಗವಾನ ಚಾಳ, ನಂದೆಮ್ಮ ದೇವಿ ನಗರ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಮಳೆ ನೀರು ರಸ್ತೆ ಮೇಲೆ ಹರಿದು ಜಲಾವೃತಗೊಂಡವು. ಕೆಲವೆಡೆ ಮೊಣಕಾಲವರೆಗೆ ನೀರು ನಿಂತು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾದ ಪರಿಣಾಮ ರಾಯಣ್ಣ ವೃತ್ತದಿಂದ ಇಂಚಲ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.ಘಟನೆ ಕುರಿತು ಮಾಹಿತಿ ಪಡೆದ ನಗರಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಂಡರು. ನೀರು ಸರಾಗವಾಗಿ ಹರಿಯುವಂತೆ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಂಡರು. ರಭಸದ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿತು. ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದ ರೈತರು ಉತ್ತಮ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.